ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಹುಲ್‌ ಚೋಕ್ಸಿಗೆ ಜಾಮೀನು ನಿರಾಕರಿಸಿದ ಡೊಮಿನಿಕಾ ಮ್ಯಾಜಿಸ್ಟ್ರೇಟ್‌

Last Updated 3 ಜೂನ್ 2021, 6:26 IST
ಅಕ್ಷರ ಗಾತ್ರ

ನವದೆಹಲಿ: ಅಕ್ರಮವಾಗಿ ಕೆರಿಬಿಯನ್‌ ದ್ವೀಪ ರಾಷ್ಟ್ರಕ್ಕೆ ಪ್ರವೇಶಿಸಿದ ಆರೋಪಕ್ಕೆ ಸಂಬಂಧಿಸಿದಂತೆ ವಜ್ರ ಉದ್ಯಮಿ ಮೆಹುಲ್ ಚೋಕ್ಸಿಗೆಡೊಮಿನಿಕಾ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಜಾಮೀನು ನಿರಾಕರಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಹೇಬಿಯಸ್‌ ಕಾರ್ಪಸ್‌ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಡೊಮಿನಿಕಾ ಹೈಕೋರ್ಟ್‌ ನೀಡಿದ್ದ ಸೂಚನೆ ಮೇರೆಗೆ ಚೋಕ್ಸಿ ಅವರನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

ಡೊಮಿನಿಕಾ ಚೀನಾ ಫ್ರೆಂಡ್‌ಶಿಪ್‌ ಆಸ್ಪತ್ರೆಯಿಂದ ವಿಡಿಯೊ ಕಾನ್ಫರೆನ್ಸಿಂಗ್‌ ಮೂಲಕ ಚೋಕ್ಸಿ ನ್ಯಾಯಾಧೀಶರ ಮುಂದೆ ಹಾಜರಾದರು. ಅವರ ವಕೀಲರು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಪೊಲೀಸ್‌ ಕಸ್ಟಡಿಯಲ್ಲಿ ಚೌಕ್ಸಿ ಅವರಿಗೆ ಸುರಕ್ಷಿತ ಭಾವನೆ ಇಲ್ಲ. ಹಾಗಾಗಿ ಅವರನ್ನು ಆಂಟಿಗುವಾ ಮತ್ತು ಬಾರ್ಬುಡಾಗೆ ವಾಪಸ್‌ ಕಳುಹಿಸುವಂತೆ ಚೋಕ್ಸಿ ಪರ ವಕೀಲರು ಕೋರಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಚೋಕ್ಸಿ ವಿರುದ್ಧ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಅವರಿಗೆ ಜಾಮೀನು ನೀಡಿದರೆ ಅವರು ದೇಶದಿಂದ ಪರಾರಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಸರ್ಕಾರಿ ವಕೀಲರು ವಾದಿಸಿದರು.

ಚೋಕ್ಸಿ ಪರ ವಕೀಲರು ಇದನ್ನು ಅಲ್ಲಗಳೆದರು. ಜಾಮೀನಿಗೆ ಅಗತ್ಯವಿರುವಷ್ಟು ಠೇವಣಿ ಮೊತ್ತ ಹಾಗೂ ಡೊಮಿನಿಕಾಗೆ ಅಕ್ರಮ ಪ್ರವೇಶ ಮಾಡಿದ್ದಕ್ಕೆ ಎರಡರಷ್ಟು ದಂಡ ಕಟ್ಟಲು ಸಿದ್ಧ ಇರುವುದಾಗಿ ತಿಳಿಸಿದರು. ಮೇಲಾಗಿ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ಚೋಕ್ಸಿ ವಿರುದ್ಧ ಯಾವುದೇ ಕ್ರಿಮಿನಲ್‌ ಪ್ರಕರಣಗಳಿಲ್ಲ. ನಡೆಯುತ್ತಿರುವುದು ಸಿವಿಲ್‌ ಪ್ರಕರಣವಷ್ಟೆ ಎಂದು ವಾದಿಸಿದರು.

ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿ ಜಾಮೀನು ನಿರಾಕರಿಸುತ್ತಿರುವುದಾಗಿ ತಿಳಿಸಿ, ವಿಚಾರಣೆಯನ್ನು ಜೂನ್‌ 14ಕ್ಕೆ ಮುಂದೂಡಿದರು.

ಸಿಬಿಐ ಡಿಐಜಿ ನೇತೃತ್ವದ ಅಧಿಕಾರಿಗಳ ತಂಡವು ಡೊಮಿನಿಕಾಗೆ ಹೋಗಿ ಚೋಕ್ಸಿಯನ್ನು ಭಾರತಕ್ಕೆ ಕರೆತರುವ ಪ್ರಯತ್ನ ನಡೆಸಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ಸುಮಾರು ₹13,500 ಕೋಟಿ ವಂಚಿಸಿದ ಆರೋಪ ಚೋಕ್ಸಿ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT