ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್​​ | ಆಟೊ –ಕಾರು ಡಿಕ್ಕಿ, 6 ಮಂದಿ ಸಾವು: ಕಾಂಗ್ರೆಸ್–ಬಿಜೆಪಿ ಕೆಸರೆರೆಚಾಟ

Last Updated 12 ಆಗಸ್ಟ್ 2022, 9:24 IST
ಅಕ್ಷರ ಗಾತ್ರ

ಅಹಮದಾಬಾದ್: ಗುಜರಾತ್‌ನ ಆನಂದ್ ಜಿಲ್ಲೆಯ ಸೋಜಿತ್ರಾ ಗ್ರಾಮದ ಬಳಿ ಗುರುವಾರ ಸಂಜೆ ವೇಗವಾಗಿ ಬಂದ ಎಸ್‌ಯುವಿ ಕಾರೊಂದು ಆಟೊ ರಿಕ್ಷಾ ಮತ್ತು ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಮೂವರು ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ಮೃತಪಟ್ಟಿದ್ದಾರೆ.

ಆನಂದ ಪಟ್ಟಣ ಮತ್ತು ತಾರಾಪುರದ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಆಟೊದಲ್ಲಿದ್ದ ನಾಲ್ವರು ಹಾಗೂ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಾರಿನ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂಗ್ರೆಸ್–ಬಿಜೆಪಿ ಕೆಸರೆರೆಚಾಟ

ಗುಜರಾತಿನ ಆನಂದ್ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತಿನ ಚಕಮಕಿ ಜೋರಾಗಿದೆ.

ಅಪಘಾತದ ಸಮಯದಲ್ಲಿ ಆರೋಪಿಯು (ಕಾರಿನ ಚಾಲಕ) ಮದ್ಯಪಾನ ಮಾಡಿದ್ದ. ಆದರೆ, ಆತನ ಮಾವ, ಕಾಂಗ್ರೆಸ್ ಶಾಸಕ ಪೂನಂಭಾಯಿ ಪರ್ಮಾರ್ ರಕ್ಷಣೆಗೆ ನಿಂತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

‘ನನ್ನ ಅಳಿಯ ಕೇತನ್ ಪಡಿಯಾರ್ ಮದ್ಯಪಾನ ಮಾಡುವುದಿಲ್ಲ. ನನ್ನ ರಾಜಕೀಯ ವರ್ಚಸ್ಸಿಗೆ ಮಸಿ ಬಳಿಯುವ ಉದ್ದೇಶದಿಂದ ರಾಜಕೀಯ ವಿರೋಧಿಗಳು ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಶಾಸಕ ಪೂನಂಭಾಯಿ ಹೇಳುವ ಮೂಲಕ ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ.

ಅಪಘಾತದಲ್ಲಿ ಪಡಿಯಾರ್ ಕೂಡ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಪರ್ಮಾರ್ ಹೇಳಿದ್ದಾರೆ.

‘ಅಪಘಾತ ನಡೆದ ಸಮಯದಲ್ಲಿ ಕೇತನ್ ಪಡಿಯಾರ್ ಕುಡಿದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದರು. ಘಟನಾ ಸ್ಥಳದಲ್ಲಿ ಪೊಲೀಸರು ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿದ್ದಾರೆ. ಜತೆಗೆ ಆರೋಪಿಯ ರಕ್ತದ ಮಾದರಿಯನ್ನು ಆಲ್ಕೋಹಾಲ್ ಪರೀಕ್ಷೆಗೆ ಕಳುಹಿಸಿದ್ದಾರೆ. ಎಫ್‌ಎಸ್‌ಎಲ್ ವರದಿಯಲ್ಲಿ ಸತ್ಯಾಂಶ ಬಹಿರಂಗವಾಗಲಿದೆ’ ಎಂದು ಆನಂದ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಮಿತೇಶ್ ಪಟೇಲ್ ಹೇಳಿದ್ದಾರೆ.

ಪಡಿಯಾರ್ ಅವರನ್ನು ಬಂಧನದಿಂದ ರಕ್ಷಿಸಲು ಕಾಂಗ್ರೆಸ್ ಪ್ರಯತ್ನಿಸಿದರೂ ಅದು ಯಶಸ್ವಿಯಾಗುವುದಿಲ್ಲ ಎಂದು ಪಟೇಲ್ ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಸೋಜಿತ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐಪಿಸಿ ಸೆಕ್ಷನ್ 304ರ ಅಡಿಯಲ್ಲಿ ಕೇತನ್ ಪಡಿಯಾರ್ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲಾಗಿದೆ ಎಂದು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಎ.ಪಿ.ಪರ್ಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT