ಮಂಗಳವಾರ, ಆಗಸ್ಟ್ 16, 2022
21 °C

50 ವರ್ಷಗಳ ಆಡಳಿತದಲ್ಲಿ ರೈತರಿಗಾಗಿ ಕಾಂಗ್ರೆಸ್ ಏನನ್ನೂ ಮಾಡಿಲ್ಲ: ನಖ್ವಿ

ಎಎನ್‌ಐ‌ Updated:

ಅಕ್ಷರ ಗಾತ್ರ : | |

Mukhtar Abbas Naqvi

ನವದೆಹಲಿ: ರೈತರ ಪ್ರತಿಭಟನೆಯ ಬಗ್ಗೆ ಕೇಂದ್ರವನ್ನು ಟೀಕಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ಗರಿಷ್ಠ ವರ್ಷಗಳ ಕಾಲ ದೇಶವನ್ನು ಆಳಿದ ಪಕ್ಷವು ರೈತರಿಗೆ ಸುಧಾರಣೆಗಳನ್ನು ತರಲು ವಿಫಲವಾಗಿದೆ ಎಂದು ಶನಿವಾರ ಹೇಳಿದ್ದಾರೆ.

ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಇಂತಹ ಹೇಳಿಕೆಗಳನ್ನು ನೀಡುವ ಜನರ ಪಕ್ಷವೇ 50 ವರ್ಷಗಳ ಕಾಲ ದೇಶವನ್ನು ಆಳಿದರೂ ಕೂಡ ರೈತರ ಹಿತದೃಷ್ಟಿಯಿಂದ ಕೆಲಸ ಮಾಡಿಲ್ಲ. ತಮ್ಮ ಆಡಳಿತಾವಧಿಯಲ್ಲಿ ರೈತರಿಗೆ, ಅವರ ಜಮೀನುಗಳಿಗೆ ಅಥವಾ ಅವರ ಜೀವನೋಪಾಯಕ್ಕೆ ಅನುಕೂಲವಾಗುವಂತಹ ಯಾವುದೇ ಸುಧಾರಣೆಗಳನ್ನು ಕಾಂಗ್ರೆಸ್ ಜಾರಿಗೆ ತರಲಿಲ್ಲ ಎಂದು ದೂರಿದ್ದಾರೆ.

ಕಾಂಗ್ರೆಸ್‌ನ ಸಮಸ್ಯೆ ಏನೆಂದರೆ, ಪಕ್ಷವು ವೆಂಟಿಲೇಟರ್‌ನಲ್ಲಿದೆ ಮತ್ತು ರಾಹುಲ್ ಗಾಂಧಿ ಹಾಗೂ ಇತರ ನಾಯಕರ ಮೂರ್ಖತನದ ಕೆಲಸಗಳು ಬದಲಾವಣೆಗೆ ಒಳಗಾಗದಿರುವುದಾಗಿದೆ. ಪ್ರಧಾನಿ ನರೇಂದ್ರ ಮೋದಿ ಯಾವಾಗಲೂ ಈ ದೇಶದ ರೈತರ ಹಿತಾಸಕ್ತಿಗೆ ಆದ್ಯತೆ ನೀಡಿದ್ದಾರೆ. ಅವರ ಪ್ರತಿಯೊಂದು ಯೋಜನೆ ಮತ್ತು ಕಾನೂನುಗಳು ರೈತರ ಪರವಾಗಿವೆ ಎಂದಿದ್ದಾರೆ.

ನೂತನ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಿರಂತರವಾಗಿ ಕೇಂದ್ರ ಸರ್ಕಾರವನ್ನು ಟೀಕಿಸುತ್ತಲೇ ಇದ್ದಾರೆ ಮತ್ತು ಕೇಂದ್ರ ಸರ್ಕಾರವನ್ನು 'ಸುಳ್ಳು ಮತ್ತು ಲೂಟಿ'ಯ ಸರ್ಕಾರ ಎಂದು ಕರೆದಿದ್ದಾರೆ.

ಮೋದಿ ಸರ್ಕಾರವು ಸಮಸ್ಯೆಗಳನ್ನು ಪರಿಹರಿಸಲು ನಿರಂತರ ಚರ್ಚೆಯಲ್ಲಿ ತೊಡಗಿದೆ ಮತ್ತು ರೈತರ ಪ್ರತಿಭಟನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ನೋಡುತ್ತಿರುವ ಜನರು ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ. ಈ ವಿಚಾರವು ನಮ್ಮ ದೇಶದ ಕೃಷಿಗೆ ಮತ್ತು ನಮ್ಮ ರೈತರಿಗೆ ಬಹಳ ಮುಖ್ಯವಾಗಿದೆ. ಇದಕ್ಕೆ ಶೀಘ್ರದಲ್ಲೇ ಪರಿಹಾರ ಸಿಗುತ್ತದೆ ಎನ್ನುವ ವಿಶ್ವಾಸ ನನಗಿದೆ. ಕಾಂಗ್ರೆಸ್ ಪಕ್ಷವು ಈ ವಿಷಯದಲ್ಲಿ ಸಕಾರಾತ್ಮಕ ಮಾರ್ಗವನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.

ಡಿಸೆಂಬರ್ 3 ರಂದು ಕೇಂದ್ರದೊಂದಿಗೆ ನಾಲ್ಕನೇ ಸುತ್ತಿನ ಮಾತುಕತೆ ನಡೆಸಿದ ರೈತರು, ಕೃಷಿ ಕಾನೂನುಗಳಿಗೆ ಕೆಲವು ತಿದ್ದುಪಡಿಗಳನ್ನು ತರುವ ಬಗ್ಗೆ ಸರ್ಕಾರ ಮಾತನಾಡಿದೆ ಎಂದು ಹೇಳಿದ್ದಾರೆ. ಅಲ್ಲದೆ ರೈತ ಮುಖಂಡರು, ಸಂಸತ್ತಿನ ವಿಶೇಷ ಅಧಿವೇಶನ ನಡೆಸುವಂತೆ ಮತ್ತು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು