ಮಂಗಳವಾರ, ಮೇ 24, 2022
24 °C

ಕಾಂಗ್ರೆಸ್‌ ಮುಖಂಡ, ಕೇಂದ್ರದ ಮಾಜಿ ಸಚಿವ ಕ್ಯಾಪ್ಟನ್‌ ಸತೀಶ್‌ ಶರ್ಮಾ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಾಂಗ್ರೆಸ್‌ ಮುಖಂಡ ಮತ್ತು ಕೇಂದ್ರದ ಮಾಜಿ ಸಚಿವ ಕ್ಯಾಪ್ಟನ್‌ ಸತೀಶ್‌ ಶರ್ಮಾ ಬುಧವಾರ ರಾತ್ರಿ ಗೋವಾದಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.

ಕ್ಯಾನ್ಸರ್‌ ಪೀಡಿತರಾಗಿದ್ದ ಸತೀಶ್‌ ಶರ್ಮಾ ಅವರು ಕೆಲವು ಕಾಲದಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. 'ಅವರು ಗೋವಾದಲ್ಲಿ ರಾತ್ರಿ 8:16ಕ್ಕೆ ನಿಧನರಾದರು. ಶುಕ್ರವಾರ ದೆಹಲಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ' ಎಂದು ಸತೀಶ್‌ ಅವರ ಮಗ ಸಮೀರ್‌ ತಿಳಿಸಿದ್ದಾರೆ.

ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರಿಗೆ ಆಪ್ತರಾಗಿದ್ದ ಸತೀಶ್‌ ಶರ್ಮಾ, 1993ರಿಂದ 1996ರವರೆಗೂ ಪಿ.ವಿ.ನರಸಿಂಹ ರಾವ್‌ ನೇತೃತ್ವದ ಸರ್ಕಾರದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಕೇಂದ್ರ ಸಚಿವರಾಗಿದ್ದರು.

ಆಂಧ್ರ ಪ್ರದೇಶದ ಸಿಕಂದರಾಬಾದ್‌ನಲ್ಲಿ 1947ರ ಅಕ್ಟೋಬರ್‌ 11ರಂದು ಜನಿಸಿದ ಸತೀಶ್‌ ಅವರು ವೃತ್ತಿಪರ ಕಮರ್ಶಿಯಲ್‌ ಪೈಲಟ್‌ ಆಗಿದ್ದರು.

ರಾಯ್‌ ಬರೇಲಿ ಮತ್ತು ಅಮೇಥಿ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಅವರು ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಮಧ್ಯ ಪ್ರದೇಶ, ಉತ್ತರಾಖಂಡ ಹಾಗೂ ಉತ್ತರ ಪ್ರದೇಶದಿಂದ ಮೂರು ಬಾರಿ ರಾಜ್ಯ ಸಭಾ ಸದಸ್ಯರಾಗಿದ್ದರು. 1986ರಲ್ಲಿ ಮೊದಲ ಬಾರಿಗೆ ರಾಜ್ಯ ಸಭಾ ಸದಸ್ಯರಾದ ಸತೀಶ್‌, 1991ರಲ್ಲಿ ರಾಜೀವ್‌ ಗಾಂಧಿ ನಿಧನರಾದ ಬಳಿಕ ಅಮೇಥಿ ಕ್ಷೇತ್ರದಿಂದ ಲೋಕಸಭಾ ಚುನಾವಣೆ ಎದುರಿಸಿ ಗೆದ್ದರು.

ಮತ್ತೆ ಜುಲೈ 2004ರಿಂದ 2016ರ ವರೆಗೂ ರಾಜ್ಯ ಸಭಾ ಸದಸ್ಯರಾಗಿದ್ದರು.

ಸತೀಶ್‌ ಶರ್ಮಾ ಅವರಿಗೆ ಪತ್ನಿ, ಮಗ ಮತ್ತು ಮಗಳು ಇದ್ದಾರೆ. ಕಾಂಗ್ರೆಸ್‌ ಮುಖಂಡ ರಣದೀಪ್‌ ಸುರ್ಜೇವಾಲಾ ಸತೀಶ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು