ಶುಕ್ರವಾರ, ನವೆಂಬರ್ 27, 2020
20 °C
ಕಾಂಗ್ರೆಸ್‌ ಪಕ್ಷ

ಒಗ್ಗಟ್ಟಾಗಿ, ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿ: ಸೋನಿಯಾ ಗಾಂಧಿ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ

ನವದೆಹಲಿ: ಕಾಂಗ್ರೆಸ್‌ನ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪಕ್ಷದ ಕನಿಷ್ಠ 23 ನಾಯಕರು ಪತ್ರ ಬರೆದು ಮುಖಂಡತ್ವದ ಬಿಕ್ಕಟ್ಟು ಹಾಗೂ ಆಂತರಿಕ ಚುನಾವಣೆಗಳ ಕುರಿತು ಆಗ್ರಹಿಸಿದ್ದರೆ, ಮತ್ತೊಂದು ಗುಂಪು ರಾಹುಲ್‌ ಗಾಂಧಿ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಕರೆತರಲು ಒತ್ತಾಯಿಸಿದೆ. ಸೋಮವಾರ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ.

ಪಕ್ಷದ ಮುಖಂಡತ್ವದಲ್ಲಿ ಸಂಪೂರ್ಣ ಬದಲಾವಣೆಗಾಗಿ ಮುಖಂಡರು ಬರೆದಿರುವ ಪತ್ರಕ್ಕೆ ಸೋನಿಯಾ ಗಾಂಧಿ ಪ್ರತಿಕ್ರಿಯಿಸಿದ್ದು, ಪಕ್ಷದ ನಾಯಕರೆಲ್ಲರೂ ಒಟ್ಟಿಗೆ ಸೇರಿ ಹೊಸ ಮುಖಂಡರನ್ನು ಗುರುತಿಸುವಂತೆ ಹೇಳಿದ್ದಾರೆ. 'ಅವರಿಗೆ ಜವಾಬ್ದಾರಿ ಮುಂದುವರಿಸುವ ಇಚ್ಛೆ ಇಲ್ಲ' ಎಂದು ಪಕ್ಷದ ಬೆಳವಣಿಗೆಗಳ ಕುರಿತು ತಿಳಿದಿರುವವರು ಹೇಳಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸೋನಿಯಾ ಗಾಂಧಿ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯಿಂದ ಹೊರ ಬರಲಿದ್ದಾರೆ ಎಂದು ವರದಿಯಾಗಿದೆ.

ಗುಲಾಂ ನಬಿ ಆಜಾದ್‌, ಆನಂದ್ ಶರ್ಮಾ, ಮನೀಶ್‌ ತಿವಾರಿ, ಮಿಲಿಂದ್ ದೇವ್ರಾ, ಜಿತಿನ್‌ ಪ್ರಸಾದ್‌ ಸೇರಿದಂತೆ 23 ನಾಯಕರು ಕಾಂಗ್ರೆಸ್‌ ಪಕ್ಷದ ವ್ಯವಸ್ಥೆಯಲ್ಲಿ ಬದಲಾವಣೆಗಾಗಿ ಆಗ್ರಹಿಸಿದ್ದಾರೆ.

ಶೀಘ್ರದಲ್ಲಿಯೇ ಪಕ್ಷಕ್ಕೆ ಸೂಕ್ತ ಅಧ್ಯಕ್ಷರನ್ನು ಆಯ್ಕೆ ಮಾಡುವ ಭರವಸೆಯ ಮೇರೆಗೆ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಪಕ್ಷದ ನೇತೃತ್ವ ವಹಿಸಿದ್ದಾರೆ. 'ನೂತನ ಅಧ್ಯಕ್ಷರು' ಗಾಂಧಿ ಕುಟುಂಬದಿಂದ ಹೊರತಾಗಿರುವವರೆಗೇ ಆಗಿರಬೇಕು ಎಂದು ಸೋನಿಯಾ ಗಾಂಧಿ ತಿಳಿಸಿರುವುದಾಗಿ ವರದಿಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ರಾಹುಲ್‌ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ಮೇ 25ರಂದು ರಾಜೀನಾಮೆ ಸಲ್ಲಿಸಿದ್ದರು ಹಾಗೂ ಅವರೂ ಸಹ 'ಗಾಂಧಿ ಪರಿವಾರದ ಹೊರಗಿನ ವ್ಯಕ್ತಿಯೊಬ್ಬರು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಬೇಕು' ಎಂದು ಆಶಯ ವ್ಯಕ್ತಪಡಿಸಿದ್ದರು.

'ಈ ಪತ್ರವು ರಾಹುಲ್‌ ಗಾಂಧಿ ಅವರ ಮುಖಂಡತ್ವವನ್ನು ಮೊಟುಕುಗೊಳಿಸಲು ನಡೆಸಿರುವ ಪಿತೂರಿ' ಎಂದು ಮುಂಬೈ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಸಂಜಯ್‌ ನಿರುಪಮ್‌ ಅಭಿಪ್ರಾಯ ಪಟ್ಟಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು