ಭಾನುವಾರ, ಆಗಸ್ಟ್ 14, 2022
28 °C

ಭಾರತದಲ್ಲಿ ಕೋವಿಡ್‌ ಸಾವಿನ ಕುರಿತ ವಿದೇಶಿ ಮಾಧ್ಯಮದ ವರದಿಯನ್ನು ಅಲ್ಲಗಳೆದ ಕೇಂದ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ನೀಡಿರುವ ಅಧಿಕೃತ ಸಂಖ್ಯೆಗಿಂತ ಐದರಿಂದ ಏಳು ಪಟ್ಟು ಹೆಚ್ಚು ಕೋವಿಡ್‌ ಸಾವುಗಳು ಸಂಭವಿಸಿವೆ ಎಂಬ ವಿದೇಶಿ ಮಾಧ್ಯಮದ ವರದಿಯನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ.

'ಕೋವಿಡ್‌ನಿಂದ ಸಂಭವಿಸಿರುವ ಸಾವುಗಳ ಬಗ್ಗೆ ಭಾರತವು ಅಧಿಕೃತ ಅಂಕಿ-ಅಂಶಗಳನ್ನು ನೀಡಿದೆ. ಆದರೆ, ಈ ಅಂಕಿ-ಅಂಶಗಳಿಗಿಂತ ಐದರಿಂತ ಏಳು ಪಟ್ಟು ಅಧಿಕ ಕೋವಿಡ್‌ ಸಾವುಗಳು ಭಾರತದಲ್ಲಿ ಸಂಭವಿಸಿವೆ' ಎಂದು 'ದಿ ಎಕನಾಮಿಸ್ಟ್‌' ನಿಯತಕಾಲಿಕದಲ್ಲಿ ಪ್ರಕಟವಾಗಿರುವ ವರದಿ ಹೇಳಿತ್ತು.

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರವು, 'ಕೋವಿಡ್‌ ಸಾವಿನ ಬಗ್ಗೆ ಪ್ರಕಟವಾಗಿರುವ ವರದಿಯು ಯಾವುದೇ ಸಾಕ್ಷ್ಯಗಳಿಂದ ಕೂಡಿಲ್ಲ. ಪುರಾವೆಗಳಿಲ್ಲದ ದತ್ತಾಂಶಗಳಿಂದ ಈ ವರದಿ ತಯಾರಿಸಲಾಗಿದೆ' ಎಂದು ಹೇಳಿದೆ.

'ಕೋವಿಡ್‌ ಸಾವಿನ ಬಗ್ಗೆ ನಿಯತಕಾಲಿಕವು ನಡೆಸಿದ ಅಧ್ಯಯನವು ಯಾವುದೇ ವೈಜ್ಞಾನಿಕ ವಿವರಣೆಗಳನ್ನು ಒಳಗೊಂಡಿಲ್ಲ. ಅಧ್ಯಯನಕ್ಕೆ ಪರಿಗಣಿಸಿರುವ ಮೂಲಗಳು ಸಾರ್ವಜನಿಕ ಆರೋಗ್ಯ ಇಲಾಖೆಗೆ ಸಂಬಂಧಿಸಿಲ್ಲ' ಎಂದು ಕೇಂದ್ರ ತಿಳಿಸಿದೆ.

ಕೋವಿಡ್ -19 ದತ್ತಾಂಶ ನಿರ್ವಹಣೆಗೆ ಸಂಬಂಧಿಸಿದಂತೆ ಭಾರತ ಸರ್ಕಾರವು ಪಾರದರ್ಶಕವಾಗಿದೆ ಎಂದು ಕೇಂದ್ರ ಸ್ಪಷ್ಟನೆ ನೀಡಿದೆ.

ಸಾವಿನ ಅಂಕಿ-ಅಂಶಗಳ ಬಗ್ಗೆ ಗೊಂದಲಗಳನ್ನು ನಿವಾರಿಸುವ ಸಲುವಾಗಿ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಕಳೆದ ವರ್ಷ ಮೇ ತಿಂಗಳಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಾವುಗಳನ್ನು ದಾಖಲಿಸಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರವು ತಂಡಗಳನ್ನು ನಿಯೋಜಿಸಿದೆ ಎಂದು ಅದು ಹೇಳಿದೆ.

ಈ ವರೆಗೆ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2,94,39,989ಕ್ಕೆ ತಲುಪಿದ್ದು, ಮೃತರ ಸಂಖ್ಯೆ 3,70,384ಕ್ಕೆ ಏರಿದೆ ಎಂದು ಸಚಿವಾಲಯವು ಪ್ರಕಟಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು