ಮಂಗಳವಾರ, ಮೇ 24, 2022
30 °C
ಜಾಮೀನು ರದ್ದು ಕೋರಿ ಮುಂಬೈ ಪೊಲೀಸರಿಂದ ವಿಶೇಷ ನ್ಯಾಯಾಲಯಕ್ಕೆ ಮನವಿ

ಜಾಮೀನು ಷರತ್ತು ಉಲ್ಲಂಘಿಸಿದ ರಾಣಾ ದಂಪತಿಗೆ ಕೋರ್ಟ್ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ದೇಶದ್ರೋಹ ಪ್ರಕರಣದಲ್ಲಿ ಬಂಧಿತರಾಗಿದ್ದ ಮಹಾರಾಷ್ಟ್ರ ಪಕ್ಷೇತರ ಸಂಸದೆ ನವನೀತ್‌ ರಾಣಾ ಮತ್ತು ಪತಿ, ಶಾಸಕ ರವಿ ರಾಣಾ ಅವರಿಗೆ ಜಾಮೀನು ಮಂಜೂರು ಮಾಡುವ ಮುನ್ನ ನ್ಯಾಯಾಲಯ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಿದ ಆರೋಪ ಸಂಬಂಧ ಮುಂಬೈ ಕೋರ್ಟ್‌ ಸೋಮವಾರ ದಂಪತಿಗೆ ನೋಟಿಸ್‌ ಜಾರಿ ಮಾಡಿದೆ. ಹಾಗೆಯೇ ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್‌ ಏಕೆ ಜಾರಿ ಮಾಡಬಾರದು ಎಂದು ಪ್ರಶ್ನಿಸಿದೆ.

ಈ ಮಧ್ಯೆ ದಂಪತಿಗೆ ನೀಡಿರುವ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಮುಂಬೈನ ಖಾರ್‌ ನಗರದ ಪೊಲೀಸರು ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.  ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸ ’ಮಾತೋಶ್ರೀ‘ ಎದುರು ಹನುಮಾನ್ ಚಾಲೀಸಾ ಪಠಣ ಮಾಡುವುದಾಗಿ ಹೇಳಿದ್ದ ದಂಪತಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಏ.23ರಂದು ಬಂಧಿಸಲಾಗಿತ್ತು.  ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಮೇ 4ರಂದು ಜಾಮೀನು ಮಂಜೂರು ಮಾಡಿತ್ತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡದಂತೆ ಮತ್ತು ಇಂಥದ್ದೇ ತಪ್ಪು ಪುನರಾವರ್ತಿಸದಂತೆ ನಿಬಂಧನೆ ವಿಧಿಸಿತ್ತು.  ಆದರೆ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದ್ದಂತೆಯೇ ರಾಣಾ ದಂಪತಿ ಷರತ್ತನ್ನು ಗಾಳಿಗೆ ತೂರಿ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಹೀಗಾಗಿ ಜಾಮೀನು ರದ್ದು ಮಾಡಿ, ವಾರಂಟ್‌ ಜಾರಿಗೊಳಿಸಬೇಕು. ತತ್‌ಕ್ಷಣವೇ ಆರೋಪಿಗಳ  ಬಂಧನಕ್ಕೆ ಸೂಚಿಸಬೇಕು ಎಂದು  ಅರ್ಜಿಯಲ್ಲಿ ಕೋರಿದ್ದಾರೆ. 

––

ಜೈಲಿನಲ್ಲಿ ಅಧಿಕಾರಿಗಳ ಕೆಟ್ಟ ನಡೆ ಬಗ್ಗೆ ಮೋದಿಗೆ ದೂರು ನೀಡುತ್ತೇವೆ: ರಾಣಾ ದಂಪತಿ

ಮುಂಬೈ (ಪಿಟಿಐ): ಜೈಲಿನಲ್ಲಿದ್ದಾಗ ಮಹಾರಾಷ್ಟ್ರ ಅಧಿಕಾರಿಗಳು ಹೇಗೆ ನಮ್ಮನ್ನು ಹಿಂಸಿಸಿದರು ಎಂಬುದನ್ನು  ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಗಮನಕ್ಕೆ ತರುತ್ತೇವೆ. ತನ್ಮೂಲಕ ಇದರ ಬಗ್ಗೆ ಧ್ವನಿ ಎತ್ತುತ್ತೇವೆ ಎಂದು ಪಕ್ಷೇತರ ಸಂಸದೆ ನವನೀತ್‌ ರಾಣಾ ಮತ್ತು ಪತಿ, ಶಾಸಕ ರವಿ ರಾಣಾ ಸೋಮವಾರ ತಿಳಿಸಿದ್ದಾರೆ.

ಹನುಮಾನ್‌ ಚಾಲೀಸಾ ಪಠಣ ಪ್ರಕರಣದಲ್ಲಿ ಜಾಮೀನಿನ ಆಧಾರದಲ್ಲಿ ಬಿಡುಗಡೆಗೊಂಡ ಬಳಿಕ ನವನೀತ್‌ ರಾಣಾ ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡು ದೆಹಲಿಗೆ ತೆರಳಿದರು.

ಅದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ನಾವು ದೆಹಲಿಗೆ ತೆರಳಿ ಮಹಿಳೆಯರನ್ನು ಗೌರವಿಸುವ ನಾಯಕರನ್ನು ಭೇಟಿಯಾಗುತ್ತೇವೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಲೋಕಸಭಾ ಸಭಾಪತಿ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಮಹಾರಾಷ್ಟ್ರ ಅಧಿಕಾರಿಗಳು ಜೈಲಿನಲ್ಲಿ ನಮಗೆ ನೀಡಿದ್ದ ಹಿಂಸೆಯ ಬಗ್ಗೆ  ಮತ್ತು ನಮ್ಮ ಅನಾರೋಗ್ಯವನ್ನು ನಿರ್ಲಕ್ಷಿಸಿದ ಬಗ್ಗೆ ವಿವರಿಸಿ ದೂರು ನೀಡುತ್ತೇವೆ‘ ಎಂದು ಹೇಳಿದರು. ಇದೇ ವೇಳೆ, ಒಬ್ಬ ಜನಪ್ರತಿನಿಧಿಯನ್ನೇ ಹೀಗೆ ನಡೆಸಿಕೊಳ್ಳುತ್ತಾರೆ ಎಂದರೆ ಸಾಮಾನ್ಯ ಜನರ ಕತೆ ಏನು. ಜನಪ್ರತಿನಿಧಿಯಾಗಿ ನಾನು ಈ ಬಗ್ಗೆ ಧ್ವನಿ ಎತ್ತಲೇಬೇಕು. ಸಂವಿಧಾನ ನಮಗೆ ಆ ಹಕ್ಕು ನೀಡಿದೆ. ಅದನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಹಾಗೆಯೇ, ಬಿಜೆಪಿಗೆ ಬೆನ್ನ ಹಿಂದೆ ಚೂರಿ ಇರಿದ ಠಾಕ್ರೆ ಅವರಿಂದ ನಾವು ನೀತಿಪಾಠ ಕಲಿಯಬೇಕಿಲ್ಲ. ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಹಿಂದಿನ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಅವರಿಂದ ರಾಜ್ಯದ ಆಡಳಿತ ನಡೆಸುವುದು ಹೇಗೆಂದು ಕಲಿಯಬೇಕು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು