ಕೋವಿಡ್– 19 ಎರಡನೇ ಅಲೆ: ಒಡಿಶಾದಲ್ಲೂ 12ನೇ ತರಗತಿ ಪರೀಕ್ಷೆ ರದ್ದು

ಭುವನೇಶ್ವರ: ಒಡಿಶಾ ಸರ್ಕಾರವು ಕೌನ್ಸಿಲ್ ಆಫ್ ಹೈಯರ್ ಸೆಕೆಂಡರಿ ಎಜುಕೇಷನ್ (ಸಿಎಚ್‌ಎಸ್‌ಇ) ನಡೆಸುವ 12ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ.
ಈ ನಿರ್ಧಾರವನ್ನು ಪ್ರಕಟಿಸುವಾಗ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ‘ಪರೀಕ್ಷೆಗಳಿಗಿಂತ ವಿದ್ಯಾರ್ಥಿಗಳ ಸುರಕ್ಷತೆ ಮುಖ್ಯ’ ಎಂದು ಹೇಳಿದರು.
‘ಕೋವಿಡ್– 19 ಪಿಡುಗಿನ ಎರಡನೇ ಅಲೆಯು ದೇಶದಾದ್ಯಂತ ಹಿಂದೆಂದೂ ಕಂಡರಿಯದ ಪರಿಸ್ಥಿತಿ ಸೃಷ್ಟಿಸಿದೆ. ಸದ್ಯದ ಪರಿಸ್ಥಿತಿಯು ಮಕ್ಕಳ ಶಿಕ್ಷಣದ ಮೇಲೆ ತೀವ್ರ ಪರಿಣಾಮ ಬೀರಿದೆ. ಆದಾಗ್ಯೂ, ವಿದ್ಯಾರ್ಥಿಗಳ ಜೀವದ ರಕ್ಷಣೆ ಎಲ್ಲ ಪರೀಕ್ಷೆಗಳಿಗಿಂತ ಹೆಚ್ಚಿನದು’ ಎಂದು ಅವರು ಹೇಳಿದರು.
‘ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ಮೌಲ್ಯಮಾಪನಕ್ಕೆ ವಸ್ತುನಿಷ್ಠ ಮಾನದಂಡಗಳನ್ನು ಅನುಸರಿಸಲಾಗುವುದು’ ಎಂದ ಪಟ್ನಾಯಕ್, ಪರಿಸ್ಥಿತಿಗೆ ಅನುಗುಣವಾದ ಮಾನದಂಡಗಳನ್ನು ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯ ಸರ್ಕಾರದ ಮಾನದಂಡಗಳ ಬಗ್ಗೆ ಯಾರಿಗಾದರೂ ಆಕ್ಷೇಪಣೆ ಇದ್ದರೆ, ಯಾವುದೇ ವಿದ್ಯಾರ್ಥಿ ಪರೀಕ್ಷೆಗಳಿಗೆ ಹಾಜರಾಗಬಹುದು. ಸದ್ಯದ ಪರಿಸ್ಥಿತಿ ಆಧರಿಸಿ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಸಿಎಚ್‌ಎಸ್‌ಇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಇಲ್ಲ: ಶಿಕ್ಷಣ ಸಚಿವ ಸುರೇಶ್ ಕುಮಾರ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.