ಬುಧವಾರ, ಸೆಪ್ಟೆಂಬರ್ 22, 2021
27 °C
ಹಸುವಿನ ಸಗಣಿ, ಗಂಜಲ ಕೋವಿಡ್‌ ಗುಣಪಡಿಸದು ಎಂಬ ಹೇಳಿಕೆ ಪ್ರಕರಣ

ಮಣಿಪುರಿ ಹೋರಾಟಗಾರನಿಗೆ ಜಾಮೀನು ನೀಡಲು ಸುಪ್ರೀಂ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಣಿಪುರ ರಾಜ್ಯ ಬಿಜೆಪಿ ಅಧ್ಯಕ್ಷ ಟಿಕೇಂದ್ರ ಸಿಂಗ್‌ ಅವರು ಕೋವಿಡ್‌ 19 ಸಾಂಕ್ರಾಮಿಕದಿಂದ ಮೃತಪಟ್ಟ ನಂತರ ಹಸುವಿನ ಸಗಣಿ ಮತ್ತು ಗಂಜಲದಿಂದ ಕೋವಿಡ್‌ ಗುಣವಾಗದು ಎಂದು ಫೇಸ್‌ಬುಕ್‌ನಲ್ಲಿ ಹೇಳಿಕೆ ಪ್ರಕಟಿಸಿ, ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನಕ್ಕೊಳಗಾದ ಮಣಿಪುರದ ಹೋರಾಟಗಾರ ಎರೆಂಡ್ರೊ ಲೈಚೋಂಬಮ್ ಅವರನ್ನು ತಕ್ಷಣ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.

ಎರೆಂಡ್ರೊ ಲೈಚೋಂಬಮ್ ಅವರ ತಂದೆ ಎಲ್. ರಘುಮಣಿ ಸಿಂಗ್ ಪರ ವಕೀಲ ಶಾದನ್ ಫರಸತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಪೀಠ, ‘ಈ ವ್ಯಕ್ತಿಯ ಬಂಧನವನ್ನು ಇನ್ನು ಒಂದು ದಿನಕ್ಕೂ ಮುಂದುವರಿಸಲು ನಾವು ಅನುಮತಿಸುವುದಿಲ್ಲ’ ಎಂದು ಖಡಕ್‌ ಆಗಿ ಹೇಳಿತು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮಂಗಳವಾರ ಈ ವಿಷಯವನ್ನು ಆಲಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಆಗ ನ್ಯಾಯಪೀಠ ‘ಇದಕ್ಕಾಗಿ ಅವರು ರಾತ್ರಿಯಿಡೀ ಜೈಲಿನಲ್ಲಿರಲು ಸಾಧ್ಯವಿಲ್ಲ. ಸೋಮವಾರವೇ ಆತನ ಬಿಡುಗಡೆಗೆ ಆದೇಶ ಹೊರಡಿಸುತ್ತೇವೆ’ ಎಂದು ಹೇಳಿತು.

‘ಅರ್ಜಿದಾರನನ್ನು ನಿರಂತರ ಬಂಧಿಸಿಡುವುದರಿಂದ ಅವರ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಈ ನ್ಯಾಯಾಲಯದ ಮಧ್ಯಂತರ ಆದೇಶದಂತೆ ನಾವು ಅವರ ಬಿಡುಗಡೆಗೆ ಕೂಡಲೇ ನಿರ್ದೇಶಿಸುತ್ತೇವೆ. ಸೋಮವಾರ ಸಂಜೆ 5 ಗಂಟೆಯ ಮೊದಲು ಹೋರಾಟಗಾರನನ್ನು ಬಿಡುಗಡೆ ಮಾಡುವ ಆದೇಶವನ್ನು ಮಣಿಪುರ ಕೇಂದ್ರ ಜೈಲಿಗೆ ತಲುಪಿಸಬೇಕು’ ಎಂದು ನ್ಯಾಯಾಲಯವು ರಿಜಿಸ್ಟ್ರಾರ್‌ಗೆ ನಿರ್ದೇಶನ ನೀಡಿತು.

ಮೇ 13ರಂದು ಮಗನನ್ನು ಎನ್‌ಎಸ್‌ಎ ಅಡಿಯಲ್ಲಿ ಬಂಧಿಸಲಾಗಿತ್ತು ಎಂದು ಅರ್ಜಿದಾರರು ವಾದಿಸಿದರು. ‘ಕೋವಿಡ್ -19 ಅನ್ನು ಗುಣಪಡಿಸುವುದು ವಿಜ್ಞಾನ, ಹಸುವಿನ ಸಗಣಿ ಅಲ್ಲ’ ಎಂದು ಬಿಜೆಪಿ ಮುಖಂಡರಿಗೆ ನೆನಪಿಸಿ, ಎರೆಂಡ್ರೊ ಲೈಚೋಂಬಮ್ ಅವರು ಮೇ 13ರಂದು ಫೇಸ್‌ಬುಕ್‌ನಲ್ಲಿ ಹೇಳಿಕೆ ಪ್ರಕಟಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು