ಭಾನುವಾರ, ಏಪ್ರಿಲ್ 11, 2021
33 °C

ರಕ್ಷಣಾ ಸಚಿವಾಲಯ: ಬೆಂಗಳೂರಿನಲ್ಲೇ ನಡೆಯಲಿದೆ 2021ರ ಏರೋ ಇಂಡಿಯಾ; ಫೆ. 3–5 ನಿಗದಿ

ಪಿಟಿಐ Updated:

ಅಕ್ಷರ ಗಾತ್ರ : | |

ಏರೋ ಇಂಡಿಯಾ ವೈಮಾನಿಕ ಪ್ರದರ್ಶನ–ಸಾಂದರ್ಭಿಕ ಚಿತ್ರ

ನವದೆಹಲಿ: ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಎಂದು ಪರಿಗಣಿಸಲಾಗಿರುವ 'ಏರೋ ಇಂಡಿಯಾ'ದ ಮುಂದಿನ ಆವೃತ್ತಿ ಬಗ್ಗೆ ರಕ್ಷಣಾ ಸಚಿವಾಲಯ ನಿರ್ಧಾರ ಕೈಗೊಂಡಿದೆ. ಮುಂದಿನ ವರ್ಷ ಫೆಬ್ರುವರಿ 3ರಿಂದ 5ರ ವರೆಗೂ ಬೆಂಗಳೂರಿನಲ್ಲಿಯೇ ಪ್ರದರ್ಶನ ಆಯೋಜನೆಯಾಗಲಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.

ಏರೋ ಇಂಡಿಯಾ ವೈಮಾನಿಕ ಪ್ರದರ್ಶವನ್ನು 1996ರಿಂದಲೂ ಬೆಂಗಳೂರಿನಲ್ಲಿಯೇ ಆಯೋಜಿಸಲಾಗುತ್ತಿದೆ. 13ನೇ ಆವೃತ್ತಿಯ ಏರೋ ಇಂಡಿಯಾ 2021ರ ಫೆಬ್ರುವರಿ 3ರಿಂದ 5ರ ವರೆಗೂ ನಡೆಯಲಿದೆ.

ಪ್ರತಿ ಎರಡು ವರ್ಷಗಳಿಗೆ ಒಮ್ಮೆ ರಕ್ಷಣಾ ಸಚಿವಾಲಯ ವೈಮಾನಿಕ ಪ್ರದರ್ಶನ ಆಯೋಜಿಸುತ್ತಿದೆ. ಕೋವಿಡ್‌ ಪರಿಸ್ಥಿತಿಯ ನಡುವೆ ಜಾಗತಿಕ ಪ್ರಮುಖ ವೈಮಾನಿಕ ಸಂಸ್ಥೆಗಳು ಹಾಗೂ ಸ್ಥಳೀಯ ರಕ್ಷಣಾ ವಲಯದ ಕೈಗಾರಿಕೆಗಳಿಂದ ಮಾಹಿತಿ ಪಡೆದು ಈ ನಿರ್ಧಾರ ಕೈಗೊಳ್ಳಲಾಗಿದೆ.

ವೈಮಾನಿಕ ಪ್ರದರ್ಶನ ಆಯೋಜನೆಯ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಈಗಾಗಲೇ ಹಲವು ಬಾರಿ ಆಂತರಿಕ ಸಭೆಗಳನ್ನು ನಡೆಸಿದ್ದಾರೆ. ಕೊರೊನಾ ವೈರಸ್‌ ಸಾಂಕ್ರಾಮಿಕದ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.

ಹಲವು ರಾಷ್ಟ್ರಗಳ ಪ್ರತಿನಿಧಿಗಳು, ರಕ್ಷಣಾ ಕ್ಷೇತ್ರದಲ್ಲಿ ಪ್ರಮುಖ ಸಂಸ್ಥೆಗಳು ಹಾಗೂ ದೊಡ್ಡ ಹೂಡಿಕೆದಾರರು ಭಾಗಿಯಾಗುವ ಸಾಧ್ಯತೆ ಇದೆ. ಭಾರತದ ರಕ್ಷಣಾ ವಲಯಗಳಿಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳು, ಸಲಕರಣೆ ಹಾಗೂ ಸಾಧನಗಳನ್ನು ಸ್ಥಳೀಯವಾಗಿ ತಯಾರಿಸಿಕೊಳ್ಳಲು ನಡೆಸಿರುವ ಪ್ರಯತ್ನಗಳನ್ನು ಪ್ರದರ್ಶಿಸಲೂ ಸಚಿವಾಲಯ ಯೋಚಿಸುತ್ತಿದೆ.

2024ರ ವೇಳೆಗೆ ವಿದೇಶದಿಂದ 101 ರಕ್ಷಣಾ ಸಾಮಗ್ರಿಗಳ ಆಮದು‌‌ ನಿಲ್ಲಿಸುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಸ್ಟ್ 9ರಂದು ಘೋಷಿಸಿದ್ದರು. ಹಗುರ ಯುದ್ಧ‌ ಹೆಲಿಕಾಪ್ಟರ್‌ಗಳು, ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳು, ನೌಕಾ ಕ್ಷಿಪಣಿಗಳು ಹಾಗೂ ಸೋನಾರ್‌ ಸಿಸ್ಟಮ್‌ಗಳು, ಶಸ್ತ್ರಾಸ್ತ್ರಗಳು ಸೇರಿದಂತೆ ಹಲವು ರಕ್ಷಣಾ ಸಾಮಗ್ರಿಗಳನ್ನು ದೇಶೀಯವಾಗಿ ತಯಾರಿಸುವ ಗುರಿ ಇದೆ.

ರಕ್ಷಣಾ ಕಾರ್ಯಾಗಳಿಗೆ ಅಗತ್ಯವಿರುವ ವ್ಯವಸ್ಥೆಗಳ ಪೈಕಿ 108 ಮಿಲಿಟರಿ ಸಿಸ್ಟಮ್‌ಗಳು ಹಾಗೂ ಸಬ್‌ಸಿಸ್ಟಮ್‌ಗಳನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸುವುದು, ಅಭಿವೃದ್ಧಿ ಹಾಗೂ ತಯಾರಿಕೆಗೆ ಡಿಆರ್‌ಡಿಒ ಗುರುತಿಸಿದೆ. ಮಾರ್ಗಸೂಚಿ ರಡಾರ್‌ಗಳು, ಯುದ್ಧ ಟ್ಯಾಂಕ್‌ಗಳನ್ನು ಸಾಗಿಸುವ ಟ್ಯಾಂಕ್‌ ಟ್ರಾನ್ಸ್‌ಪೋರ್ಟರ್‌ಗಳು ಡಿಆರ್‌ಡಿಒ ಪಟ್ಟಿಯಲ್ಲಿವೆ. ಮುಂದಿನ ವರ್ಷದೊಳಗೆ ಅಗತ್ಯ ವ್ಯವಸ್ಥೆಗಳ ಅಭಿವೃದ್ಧಿಗೆ ಡಿಆರ್‌ಡಿಒ ಸಮಯದ ಗುರಿ ನಿಗದಿ ಪಡಿಸಿಕೊಂಡಿದೆ.

ಜಾಗತಿಕವಾಗಿ ಭಾರತ ಅತಿ ಹೆಚ್ಚು ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿರುವ ರಾಷ್ಟ್ರವಾಗಿದೆ. ₹35,000 ಕೋಟಿ ಮೌಲ್ಯದ ಮಿಲಿಟರಿ ಸಂಬಂಧಿತ ವಸ್ತುಗಳ ರಫ್ತು ಸೇರಿದಂತೆ ಮುಂದಿನ ಐದು ವರ್ಷಗಳಲ್ಲಿ ರಕ್ಷಣಾ ಸಾಮಗ್ರಿಗಳ ತಯಾರಿ ಮೂಲಕ ₹1.75 ಲಕ್ಷ ಕೋಟಿ ವಹಿವಾಟು ನಡೆಸಲು ರಕ್ಷಣಾ ಇಲಾಖೆ ಯೋಜನೆ ರೂಪಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು