ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಆಡಳಿತಾತ್ಮಕ ಸೇವೆಗಳ ನಿಯಂತ್ರಣ ವಿವಾದ ಸಾಂವಿಧಾನಿಕ ಪೀಠಕ್ಕೆ: 'ಸುಪ್ರೀಂ'

ದೆಹಲಿ ಆಡಳಿತಾತ್ಮಕ ಸೇವೆಗಳ ನಿಯಂತ್ರಣ ವಿವಾದ;
Last Updated 28 ಏಪ್ರಿಲ್ 2022, 14:30 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿಯ ಆಡಳಿತಾತ್ಮಕ ಸೇವೆಗಳ ಮೇಲಿನ ನಿಯಂತ್ರಣ ಸಾಧಿಸುವ ಸಂಬಂಧ ಕೇಂದ್ರ ಮತ್ತು ದೆಹಲಿ ಸರ್ಕಾರಗಳ ನಡುವೆ ಉದ್ಭವಿಸಿರುವ ಕಾನೂನಾತ್ಮಕ ವಿವಾದ ಕುರಿತ ವಿಚಾರಣೆಯನ್ನು ಸಾಂವಿಧಾನಿಕ ಪೀಠಕ್ಕೆ ವಹಿಸುವ ನಿಟ್ಟಿನಲ್ಲಿ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

‘ಪ್ರಕರಣದ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವಹಿಸುವ ಕುರಿತು ಪರಿಶೀಲನೆ ನಡೆಸಿ, ಆದಷ್ಟು ಶೀಘ್ರ ನಿರ್ಧಾರ ಪ್ರಕಟಿಸುತ್ತೇವೆ’ ಎಂದು ಗುರುವಾರ ಹೇಳಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ, ಈ ಸಂಬಂಧದ ತೀರ್ಪನ್ನು ಕಾಯ್ದಿರಿಸಿತು.

ಸಾಂವಿಧಾನಿಕ ಪೀಠದ ಮೂಲಕ ಈ ವಿಷಯವನ್ನು ಇತ್ಯರ್ಥಪಡಿಸುವಂತೆ ಕೋರಿ ಕೇಂದ್ರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಅದನ್ನು ವಿರೋಧಿಸಿ ದೆಹಲಿ ಸರ್ಕಾರದ ಪರ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ಮಂಡಿಸಿದ ವಾದವನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ಆಲಿಸಿತು.

2018ರಲ್ಲಿ ಸಾಂವಿಧಾನಿಕ ಪೀಠ ನೀಡಿರುವ ತೀರ್ಪಿನಲ್ಲಿ ಯಾವುದೇ ರೀತಿಯ ಅಸ್ಪಷ್ಟತೆ ಇಲ್ಲ. ಒಂದೊಮ್ಮೆ ಅಸ್ಪಷ್ಟತೆ ಇದ್ದರೆ, ಅದನ್ನು ಇದೇ ಪೀಠ ನಿರ್ಧರಿಸಬಹುದಾಗಿದೆ ಎಂದು ಸಿಂಘ್ವಿ ಹೇಳಿದರು.

‘ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವಹಿಸಿದಲ್ಲಿ ದೆಹಲಿ ಸರ್ಕಾರಕ್ಕೆ ಏನಾದರೂ ಸಮಸ್ಯೆ ಇದೆಯೇ?’ ಎಂದು ಪೀಠವು ಸಿಂಘ್ವಿ ಅವರನ್ನು ಪ್ರಶ್ನಿಸಿತು.

ಪ್ರಕರಣ ಕುರಿತು ಸಾಂವಿಧಾನಿಕ ಪೀಠ ಈ ಹಿಂದೆ ನೀಡಿರುವ ತೀರ್ಪಿನಲ್ಲಿ ಯಾವುದೇ ವಿಧವಾದ ಮಾರ್ಗಸೂಚಿಯನ್ನು ನೀಡಿಲ್ಲ. ಈ ಕಾರಣದಿಂದ ಪ್ರಕರಣವನ್ನು ಮತ್ತೊಮ್ಮೆ ವಿಸ್ತೃತ ಪೀಠದೆದುರೇ ವಿಚಾರಣೆಗೆ ಇರಿಸಬೇಕು ಎಂದು ತುಷಾರ್ ಮೆಹ್ತಾ ಕೋರಿದರು.

ದೆಹಲಿಯು ರಾಷ್ಟ್ರದ ರಾಜಧಾನಿ ಆಗಿರುವುದರಿಂದ ಇಲ್ಲಿನ ಆಡಳಿತಾತ್ಮಕ ಸೇವೆಗಳ ಮೇಲೆ ತಾನೇ ನಿಯಂತ್ರಣ ಹೊಂದುವ ಅಗತ್ಯವಿದೆ ಎಂದು ಬುಧವಾರ ನಡೆದ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಪ್ರತಿಪಾದಿಸಿತ್ತು.

ದೆಹಲಿ ಸರ್ಕಾರವು ಶಾಸಕಾಂಗ ಸಭೆ ಅಥವಾ ಮಂತ್ರಿಮಂಡಳವನ್ನು ಹೊಂದಿದ್ದರೂ ಕೇಂದ್ರ ಸರ್ಕಾರ ಪ್ರಮುಖ ಪಾತ್ರ ನಿರ್ವಹಿಸುವ ಅಗತ್ಯವಿದೆ ಎಂದೂ ಕೇಂದ್ರ ವಾದಿಸಿತ್ತು. ಇದಕ್ಕೆ ದೆಹಲಿ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT