ಬುಧವಾರ, ಜೂನ್ 29, 2022
27 °C
ಜಮ್ಮು–ಕಾಶ್ಮೀರದ ಆಲ್‌ ಪಾರ್ಟೀಸ್‌ ಹುರಿಯತ್‌ ಕಾನ್ಫರೆನ್ಸ್‌ ಆರೋಪ

ಕ್ಷೇತ್ರ ಮರುವಿಂಗಡಣೆ ಕ್ರಮವು ಮುಸ್ಲಿಂ ಭೂಪ್ರದೇಶ ವಿಭಜಿಸುವ ಯತ್ನ: ಹುರಿಯತ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮ್ಮು ಮತ್ತು ಕಾಶ್ಮೀರ

ಶ್ರೀನಗರ: ‘ಇತ್ತೀಚೆಗೆ ಜಮ್ಮು–ಕಾಶ್ಮೀರದ ವಿಧಾನಸಭಾ ಕ್ಷೇತ್ರಗಳ ಪುನರ್‌ ರಚನೆ ಮಾಡಿರುವ ಬಿಜೆಪಿ ಸರ್ಕಾರದ ಕ್ರಮವು ಕಣಿವೆಯಲ್ಲಿನ ಮುಸ್ಲಿಂ ಬಾಹುಳ್ಯದ ಭೂಪ್ರದೇಶವನ್ನು ವಿಭಜಿಸುವ ಪ್ರಯತ್ನವಾಗಿದೆ’ ಎಂದು ಹುರಿಯತ್‌ ಕಾನ್ಫರೆನ್ಸ್‌ ಆರೋಪಿಸಿದೆ.

ಈ ಕುರಿತು ಬುಧವಾರ ಹೇಳಿಕೆ ನೀಡಿರುವ ಹುರಿಯತ್‌ ಕಾನ್ಫರೆನ್ಸ್‌ನ ಸಂಚಾಲಕ ಮಿರ್ವೈಜ್ ಉಮರ್‌ ಫಾರೂಕ್‌, ಆಯೋಗದ ಇತ್ತೀಚಿನ ಲಜ್ಜಾಹೀನ ಶಿಫಾರಸುಗಳು ಸಂಘರ್ಷಮಯವಾದ ರಾಜ್ಯದಲ್ಲಿ ಮುಸ್ಲಿಂ ಪ್ರಾತಿನಿಧ್ಯವನ್ನು ಕಡಿಮೆ ಮಾಡುವ ಮತ್ತೊಂದು ನಡೆಯಾಗಿದೆ. ಕ್ರಮೇಣ ಶಾಸನ ಸಭೆಗಳಲ್ಲಿ ಮುಸ್ಲಿಮರ ಸಂಖ್ಯೆಯನ್ನು ಕುಗ್ಗಿಸುವ ತಂತ್ರವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಈ ಹಿಂದೆ 83 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನ ಪ್ರಕಾಶ್‌ ದೇಸಾಯಿ ನೇತೃತ್ವದ ಕ್ಷೇತ್ರ ಪುನರ್‌ ವಿಂಗಡಣ ಆಯೋಗವು ಅವುಗಳ ಸಂಖ್ಯೆಯನ್ನು 90ಕ್ಕೆ ಏರಿಕೆ ಮಾಡಿದೆ. ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾದ ಏಳು ಮತಕ್ಷೇತ್ರಗಳಲ್ಲಿ ಆರು ಸ್ಥಾನಗಳನ್ನು ಜಮ್ಮು ಪ್ರಾಂತ್ಯಕ್ಕೂ, ಒಂದು ಸ್ಥಾನವನ್ನು ಕಾಶ್ಮೀರ ಪ್ರಾಂತ್ಯದಲ್ಲಿ ಸೇರ್ಪಡೆ ಮಾಡುವಂತೆ ತನ್ನ ಅಂತಿಮ ವರದಿಯಲ್ಲಿ ಶಿಫಾರಸು ಮಾಡಿದೆ.

‘ಇಲ್ಲಿನ ಆಡಳಿತವು ಸರ್ಕಾರದ ಸಂಸ್ಥೆಗಳನ್ನು ಬಳಸಿಕೊಂಡು ಬಲಪ್ರಯೋಗ ಹಾಗೂ ಬೆದರಿಕೆ ಮೂಲಕ ವೈಯಕ್ತಿಕ ಹಾಗೂ ಸಾಮೂಹಿಕ ಅಭಿವ್ಯಕ್ತಿಗೆ ಸಂಪೂರ್ಣ ನಿರ್ಬಂಧ ಹೇರಿದ್ದು, ಆಲ್‌ ಪಾರ್ಟೀಸ್‌ ಹುರಿಯತ್‌ ಕಾನ್ಫರೆನ್ಸ್‌ (ಎಪಿಎಚ್‌ಸಿ) ಅಧ್ಯಕ್ಷ ಮಿರ್ವೈಜ್‌ ಉಮರ್‌ ಫಾರೂಕ್‌ ಮೂರು ವರ್ಷಗಳಿಂದ ಬಂಧಿಸಿ ಜೈಲಿನಲ್ಲಿರಿಸಿರುವುದು ಇದಕ್ಕೆ ಉದಾಹರಣೆಯಾಗಿದೆ. ಇಲ್ಲಿನ ಜನರನ್ನು ದಮನ ಮಾಡುವುದರ ಜತೆಗೆ ಅವರನ್ನು ಆರ್ಥಿಕ ಅಶಕ್ತರನ್ನಾಗಿ ಮಾಡುವ ಕೆಲಸ ಏಕಕಾಲಕ್ಕೆ ನಿರಂತರವಾಗಿ ನಡೆಯುತ್ತಿದೆ’ಎಂದು ಆರೋಪಿಸಿದೆ.

‘ಭಯೋತ್ಪಾದಕ ಸಂಘಟನೆಗಳ ಜತೆಗೆ ನಂಟಿನ ಆರೋಪದ ಮೇಲೆ ಕಾಶ್ಮೀರ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರೊಬ್ಬರು ಸೇರಿ ಮೂವರು ಮುಸ್ಲಿಂ ಸಮುದಾಯದ ಸರ್ಕಾರಿ ನೌಕರರನ್ನು ಇಲ್ಲಿನ ಆಡಳಿತವು ಕಳೆದ ವಾರ ಸೇವೆಯಿಂದ ವಜಾಗೊಳಿಸಿರುವುದು ಪ್ರತೀಕಾರದ ಕ್ರಮ. 2021ರಿಂದ ಈವರೆಗೆ 24ಕ್ಕೂ ಹೆಚ್ಚು ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿದೆ’ ಎಂದು ದೂರಿದೆ.

ಸ್ಥಳೀಯರ ಆದಾಯದ ಪ್ರಮುಖ ಮೂಲವಾದ ಉದ್ಯೋಗವನ್ನು ಕಸಿದುಕೊಳ್ಳಲಾಗುತ್ತಿದೆ. ಯುವಕರು ಬಂಧನ ಹಾಗೂ ದೇಶ ವಿರೋಧಿ ಕಾಶ್ಮೀರಿ ಮಹಿಳೆಯರ ಬಂಧನವು ಪ್ರತಿದಿನ ನಡೆಯುತ್ತಿದೆ. ಉಗ್ರರ ವಿರುದ್ಧ ಕಾರ್ಯಾಚರಣೆ ವೇಳೆ ನಾಗರಿಕರ ಹತ್ಯೆಗಳು ನಿರಂತರವಾಗಿ ನಡೆಯುತ್ತಿದೆ ಎಂದು ಆಪಾದಿಸಿದೆ.

‘ಸೆನ್ಸಾರ್‌ಶಿಪ್‌ ಹೆಸರಿನಲ್ಲಿ ಸ್ಥಳೀಯ ಮಾಧ್ಯಮಗಳಿಗೆ ನಿರ್ಬಂಧಿಸಲಾಗಿದೆ. ಪತ್ರಕರ್ತರು ಹಾಗೂ ಬರಹಗಾರರಿಗೆ ಕಿರುಕುಳ ಹಾಗೂ ಬೆದರಿಕೆ ಒಡ್ಡಲಾಗುತ್ತಿದೆ. ಬೆದರಿಕೆ ಮೂಲಕ ಜನರನ್ನು ಮೌನವಾಗಿ ಇರಿಸಲಾಗಿದೆ.ಕಣಿವೆಯಲ್ಲಿ ಸಂಘರ್ಷಕ್ಕೆ ಸಂಬಂಧಿಸಿದ ಮುಂದುವರೆದ ಹಿಂಸಾಚಾರವು ಕಂದಾಯ ಇಲಾಖೆ ನೌಕರ ರಾಹುಲ್‌ ಭಟ್‌ ಹಾಗೂ ಪೊಲೀಸ್‌ ಅಧಿಕಾರಿ ರಿಯಾಜ್‌ ಅಹ್ಮದ್‌ ಥೋಕರಿ ಅವರಂತಹ ಅಮೂಲ್ಯ ಜೀವಗಳನ್ನು ಬಲಿತೆಗೆದುಕೊಂಡಿದೆ. ಇದೊಂದು ದುರಂತ ಹಾಗೂ ನೋವಿನ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದೆ.

ಸರ್ಕಾರದ ಈ ಎಲ್ಲ ಕ್ರಮಗಳನ್ನು ಖಂಡಿಸಿ ಹುರಿಯತ್ ಮೇ 21 ರಂದು ಮುಷ್ಕರಕ್ಕೆ ಕರೆ ನೀಡಿದ್ದು, ಅಂದು ಈದ್ಗಾ ಹುತಾತ್ಮರ ಸ್ಮಶಾನದ ಬಳಿ ಬರುವಂತೆ ಮನವಿ ಮಾಡಿದೆ.

ಹುರಿಯತ್‌ ಕಾನ್ಫರೆನ್ಸ್‌ 2019ರ ಆಗಸ್ಟ್‌ ನಂತರ ಬಹುತೇಕ ಮೌನಕ್ಕೆ ಶರಣಾಗಿತ್ತು. ಬುಧವಾರ ಬಿಡುಗಡೆ ಮಾಡಿರುವ ಹೇಳಿಕೆಯು ಇತ್ತೀಚಿನ ವರ್ಷಗಳಲ್ಲಿ ನೀಡಿದ ರಾಜಕೀಯ ಹೇಳಿಕೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು