ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ರಾಜಕೀಯ: ‘ಬಿಜೆಪಿ ಸಖ್ಯ ತೊರೆಯಿರಿ’–ದಿಗ್ವಿಜಯ್‌ ಸಿಂಗ್‌

ನಿತೀಶ್‌ ಕುಮಾರ್‌ಗೆ ಆಹ್ವಾನ
Last Updated 11 ನವೆಂಬರ್ 2020, 19:28 IST
ಅಕ್ಷರ ಗಾತ್ರ

ನವದೆಹಲಿ: ‘ಬಿಜೆಪಿಯ ಸಖ್ಯವನ್ನು ತೊರೆದುಬಿಡಿ, ಜಾತ್ಯತೀತ ಮತ್ತು ಸಮಾಜವಾದಿ ಪಕ್ಷಗಳನ್ನು ಸಂಘಟಿಸುವಂಥ ಕೆಲಸದಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಿ’ ಎಂದು ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಅವರು ನಿತೀಶ್‌ ಕುಮಾರ್‌ಗೆ ಆಹ್ವಾನ ನೀಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ‘ಬಿಜೆಪಿಯು ರಾಜಕೀಯ ತಂತ್ರಗಾರಿಕೆಯ ಮೂಲಕ ನಿತೀಶ್‌ ಅವರ ಘನತೆಯನ್ನು ಕುಂದಿಸಿದೆ ಮತ್ತು ರಾಮ್‌ವಿಲಾಸ್‌ ಪಾಸ್ವಾನ್‌ ಅವರ ಪರಂಪರೆಯನ್ನು ಕೊನೆಗೊಳಿಸಿದೆ. ನಿತೀಶ್‌ ಅವರೇ, ಬಿಹಾರವು ನಿಮಗೆ ತುಂಬಾ ಸಣ್ಣದು, ನೀವೀಗ ರಾಷ್ಟ್ರಮಟ್ಟದ ರಾಜಕೀಯವನ್ನು ಪ್ರವೇಶಿಸಬೇಕು. ಸಮಾಜವಾದ ಹಾಗೂ ಜಾತ್ಯತೀತ ತತ್ವಗಳಲ್ಲಿ ವಿಶ್ವಾಸ ಇಟ್ಟುಕೊಂಡವರನ್ನು ಒಗ್ಗೂಡಿಸುವ ಕೆಲಸವನ್ನು ನೀವು ಮಾಡಬೇಕೇ ವಿನಾ ಸಂಘ ಪರಿವಾರದ ಒಡೆದಾಳುವ ನೀತಿಯನ್ನು ಬೆಂಬಲಿಸುವುದಲ್ಲ ಎಂದಿದ್ದಾರೆ.

‘ಬಿಹಾರದ ಮುಖ್ಯಮಂತ್ರಿ ಹುದ್ದೆಗೆ ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್‌ ಅವರ ಹೆಸರನ್ನು ನಿತೀಶ್‌ ಅವರೇ ಪ್ರಸ್ತಾಪಿಸಬೇಕು ಮತ್ತು ಜೆಡಿಯು ನಾಯಕರಿಗೆ ಉಪಮುಖ್ಯಮಂತ್ರಿ ಅಥವಾ ಅವರು ಬಯಸುವ ಇನ್ಯಾವುದಾದರೂ ಹುದ್ದೆಯನ್ನು ನೀಡಬೇಕು. ‘ನೀವು ಮಹಾತ್ಮ ಗಾಂಧಿ ಹಾಗೂ ಜಯಪ್ರಕಾಶ್‌ ನಾರಾಯಣ ಅವರ ಪರಂಪರೆಯನ್ನು ಮುಂದುವರಿಸುತ್ತಿರುವ ನಾಯಕ. ಎಲ್ಲಿಗೆ ಸಲ್ಲಬೇಕೋ ಅಲ್ಲಿಗೆ ಮರಳಿ ಬನ್ನಿ. ಬಿಜೆಪಿ–ಆರ್‌ಎಸ್‌ಎಸ್ ಅನ್ನು ತೊರೆದು, ದೇಶ ಹಾಳಾಗದಂತೆ ರಕ್ಷಿಸಿ. ಆರ್‌ಎಸ್‌ಎಸ್‌ನ ದ್ವಿಸದಸ್ಯತ್ವ ವಿಚಾರದ ಕಾರಣಕ್ಕೇ ಜನತಾ ಪಕ್ಷವು ಒಡೆದಿತ್ತು ಎಂಬುದನ್ನು ಮರೆಯಬೇಡಿ’ ಎಂದು ಸಿಂಗ್‌ ಸಲಹೆ ನೀಡಿದ್ದಾರೆ.

ಆದರೆ, ದಿಗ್ವಿಜಯ್‌ ಅವರ ಈ ಸಲಹೆಗೆ ಕಾಂಗ್ರೆಸ್‌ ಅಂಥ ಮಹತ್ವ ನೀಡಲಿಲ್ಲ. ಫಲಿತಾಂಶದ ನಂತರ ಬಿಜೆಪಿ ನಾಯಕರು ನಿತೀಶ್‌ ಅವರನ್ನು ಭೇಟಿಮಾಡಿ, ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಹೀಗೆ ಆಗಿರಲಿಲ್ಲ. ಆದ್ದರಿಂದ ಮಹಾರಾಷ್ಟ್ರ ಮಾದರಿಯನ್ನು ಬಿಹಾರದಲ್ಲಿ ಅನುಸರಿಸುವ ಸಾಧ್ಯತೆ ಇಲ್ಲ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ. ಸಿಂಗ್‌ ಅವರ ಆಹ್ವಾನವನ್ನು ಜೆಡಿಯು ಸಹ ಸಾರಾಸಗಟಾಗಿ ತಿರಸ್ಕರಿಸಿದೆ.

ಟೀಕಾಕಾರರಿಗೆ ಉತ್ತರ!

‘ಬಿಜೆಪಿಯ ‘ಬಿ– ಟೀಮ್‌’ ಎಂದು ನಮ್ಮ ಪಕ್ಷವನ್ನು ಟೀಕಿಸಿದವರಿಗೆ ಮತದಾರರು ಕೆನ್ನೆಗೆ ಹೊಡೆದಂಥ ಉತ್ತರ ನೀಡಿದ್ದಾರೆ’ ಎಂದು ಎಐಎಂಐಎಂ ಪಕ್ಷದ ಸಂಸದ ಇಮ್ತಿಯಾಜ್‌ ಜಲೀಲ್‌ ಹೇಳಿದ್ದಾರೆ.

ಬಿಹಾರದ ಮುಸ್ಲಿಂ ಪ್ರಾಬಲ್ಯದ ಐದು ಕ್ಷೇತ್ರಗಳಲ್ಲಿ ಈ ಪಕ್ಷ ಗೆಲುವು ಸಾಧಿಸಿದೆ. ‘ಚುನಾವಣೆಗೂ ಮುನ್ನ ಎಐಎಂಐಎಂ ಬಿಜೆಪಿಯ ಬಿ–ಟೀಮ್‌ ಎಂದು ಕಾಂಗ್ರೆಸ್‌ ಟೀಕಿಸಿತ್ತು. ಈಗ ಆ ಪಕ್ಷ ಆತ್ಮವಿಮರ್ಶೆ ಮಾಡಿಕೊಳ್ಳಬೇಕು’ ಎಂದು ಅವರು ಮಾಧ್ಯಮಪ್ರತಿನಿಧಿಗಳ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲೂ ನಾವು ಸ್ಪರ್ಧಿಸಲಿದ್ದೇವೆ. ಯಾವುದೇ ಪಕ್ಷ ನಮ್ಮ ಜತೆ ಮೈತ್ರಿ ಮಾಡಲು ಬಯಸುವುದಾದರೆ ಪಕ್ಷದ ಮುಖಂಡರನ್ನು ಸಂಪರ್ಕಿಸಬೇಕು ಎಂದು ಅವರು ಹೇಳಿದ್ದಾರೆ.

ಜೆಡಿಯು ದುರ್ಬಲಗೊಳಿಸುವುದೇ ಗುರಿ

‘ನಿತೀಶ್‌ ಕುಮಾರ್‌ ಅವರ ಪಕ್ಷವನ್ನು ದುರ್ಬಲಗೊಳಿಸುವುದು ನನ್ನ ಗುರಿಯಾಗಿತ್ತು. ಅದರಲ್ಲಿ ನಾನು ಯಶಸ್ವಿಯಾಗಿದ್ದೇನೆ’ ಎಂದು ಎಲ್‌ಜೆಪಿ ಮುಖಂಡ ಚಿರಾಗ್‌ ಪಾಸ್ವಾನ್‌ ಮಂಗಳವಾರ ಹೇಳಿದ್ದಾರೆ.

ಚುನಾವಣೆಗೂ ಮುನ್ನ ಎನ್‌ಡಿಎ ಮೈತ್ರಿಕೂಟದಿಂದ ಹೊರಹೋಗಿದ್ದ ಚಿರಾಗ್‌ ಅವರ ಲೋಕಜನಶಕ್ತಿ ಪಕ್ಷವು, ಜೆಡಿಯು ವಿರುದ್ಧ ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

ಶ್ರೇಯಸ್ಸು ನಮಗೆ ಸಲ್ಲಬೇಕು

‘ಬಿಹಾರದಲ್ಲಿ ನಿತೀಶ್‌ ಕುಮಾರ್‌ ಅವರೇ ಪುನಃ ಮುಖ್ಯಮಂತ್ರಿಯಾದರೆ ಅದರ ಶ್ರೇಯಸ್ಸು ನಮ್ಮ ಪಕ್ಷಕ್ಕೆ ಸಲ್ಲಬೇಕು’ ಎಂದು ಶಿವಸೇನಾ ಹೇಳಿದೆ.

‘ಯಾರು ಎಷ್ಟು ಸ್ಥಾನಗಳನ್ನೂ ಪಡೆದರೂ, ನಿತೀಶ್‌ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಬಿಜೆಪಿ ಮುಖಂಡ ಅಮಿತ್‌ ಶಾ ಅವರು ಮೊದಲೇ ಘೋಷಿಸಿದ್ದರು. ಅಂಥದ್ದೇ ಭರವಸೆಯನ್ನು 2019ರಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅವರು ಶಿವಸೇನಾಗೂ ನೀಡಿದ್ದರು. ಆದರೆ ಅದನ್ನು ಪಾಲಿಸಲಿಲ್ಲ. ಇದರಿಂದಾಗಿ ಮಹಾರಾಷ್ಟ್ರದಲ್ಲಿ ‘ಮಹಾಭಾರತ’ವೇ ನಡೆದುಹೋಯಿತು ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಬರೆಯಲಾಗಿದೆ.

2020 ಹಾಗೂ 2015ರ ಚುನಾವಣೆಯಲ್ಲಿ ವಿವಿಧ ಪಕ್ಷಗಳ ಸಾಧನೆ

ಪಕ್ಷ;2020ರಲ್ಲಿ;2015ರಲ್ಲಿ

ಎಐಎಂಐಎಂ;5;0

ಬಿಎಸ್‌ಪಿ;1;0

ಬಿಜೆಪಿ;74;53

ಸಿಪಿಐ;2;0

ಸಿಪಿಎಂ;2;0

ಸಿಪಿಐ–ಎಂಎಲ್‌;12;3

ಎಚ್‌ಎಎಂ;4;1

ಕಾಂಗ್ರೆಸ್‌;19;27

ಜೆಡಿಯು;43;71

ಎಲ್‌ಜೆಪಿ;1;0

ಆರ್‌ಜೆಡಿ;75;80

ವಿಐಪಿ;4;0

ಆರ್‌ಎಲ್‌ಎಸ್‌ಪಿ;0;2

ಎಲ್‌ಜೆಪಿ;0;2

ಪಕ್ಷೇತರ;1;4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT