ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಂಕೆ ಪ್ರಣಾಳಿಕೆ: ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ 75ರಷ್ಟು ಮೀಸಲಾತಿ ಭರವಸೆ

Last Updated 13 ಮಾರ್ಚ್ 2021, 19:20 IST
ಅಕ್ಷರ ಗಾತ್ರ

ಚೆನ್ನೈ: ‘ಅಧಿಕಾರಕ್ಕೆ ಬಂದರೆ, ಉದ್ಯೋಗದಲ್ಲಿ ಶೇ 75ರಷ್ಟನ್ನು ಸ್ಥಳೀಯರಿಗೆ ಮೀಸಲಿರಿಸುವ ಕಾಯ್ದೆಯನ್ನು ಜಾರಿಗೊಳಿಸಲಾಗುವುದು’ ಎಂದು ಡಿಎಂಕೆ ಪ್ರಣಾಳಿಕೆ ಭರವಸೆ ನೀಡಿದೆ. ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆ ನಿಮಿತ್ತ ಶನಿವಾರ ಬಿಡುಗಡೆ ಮಾಡಲಾದ ಪಕ್ಷದ ಪ್ರಣಾಳಿಕೆಯಲ್ಲಿ ಸರ್ಕಾರಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಡೆಟಾ ಕಾರ್ಡ್ ಜೊತೆಗೆ ಉಚಿತ ಕಂಪ್ಯೂಟರ್ ಟ್ಯಾಬ್ಲೆಟ್ ನೀಡುವ ಭರವಸೆಯನ್ನೂ ನೀಡಲಾಗಿದೆ.

ಪ್ರಮುಖ ಹಿಂದೂ ಪುಣ್ಯಕ್ಷೇತ್ರಗಳಿಗೆ ತೀರ್ಥಯಾತ್ರೆಗೆ ತೆರಳುವ 1 ಲಕ್ಷ ಜನರಿಗೆ ₹25,000 ಆರ್ಥಿಕ ನೆರವು, ಹೆರಿಗೆ ರಜೆ ಅವಧಿ ವಿಸ್ತರಣೆ, ತೈಲೆ ಬೆಲೆ ನಿಯಂತ್ರಣ, ನೀಟ್‌ಗೆ ನಿರ್ಬಂಧ ಮೊದಲಾದ ಹಲವು ಘೋಷಣೆಗಳನ್ನು ಮಾಡಲಾಗಿದೆ.

ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್, ‘ಡಿಎಂಕೆ ಅಧಿಕಾರಕ್ಕೆ ಬಂದರೆ, ಮೊದಲ ತಲೆಮಾರಿನ ಪದವೀಧರರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಆದ್ಯತೆ ನೀಡಲಾಗುವುದು’ ಎಂದರು. ಖಾಸಗಿ ವಲಯದಲ್ಲಿ ಮೀಸಲಾತಿ ಮತ್ತು ಸಣ್ಣ ರೈತರಿಗೆ ಸಬ್ಸಿಡಿ ನೀಡುವ ಭರವಸೆಯನ್ನೂ ನೀಡಿದರು.

ತೈಲೋತ್ಪನ್ನಗಳ ಮೇಲಿನ ತೆರಿಗೆ ಇಳಿಸುವ ಸೂಚನೆಯನ್ನೂ ಪ್ರಣಾಳಿಕೆಯಲ್ಲಿ ನೀಡಲಾಗಿದ್ದು, ಪೆಟ್ರೋಲ್‌ ದರವನ್ನು ₹5ರಷ್ಟು ಹಾಗೂ ಡೀಸೆಲ್ ದರವನ್ನು ₹4ರಷ್ಟು ಇಳಿಸಲಾಗುವುದು ಎಂದಿದೆ. ಜತೆಗೆ, ಪ್ರತಿ ಎಲ್‌ಪಿಜಿ ಸಿಲಿಂಡರ್‌ಗೆ ₹100 ಸಬ್ಸಿಡಿ ನೀಡುವ ವಾಗ್ದಾನ ಮಾಡಿದೆ.

2016ರಲ್ಲಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಸಾವಿಗೆ ಕಾರಣವಾದ ಸಂದರ್ಭಗಳ ಬಗ್ಗೆ ತನಿಖೆ ನಡೆಸಲು ರಚಿಸಲಾದ ಅರ್ಮುಗಸ್ವಾಮಿ ಸಮಿತಿಯ ವರದಿಯನ್ನು ತ್ವರಿತವಾಗಿ ಪಡೆಯಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಕ್ಷ ತಿಳಿಸಿದೆ.

ರಾಜ್ಯದಲ್ಲಿ ಹಿಂದೂ ದೇವಸ್ಥಾನಗಳ ಪುನರುಜ್ಜೀವನ ಹಾಗೂ ನಿರ್ಮಾಣಕ್ಕೆ ₹1,000 ಕೋಟಿ ಅನುದಾನ ನೀಡುವುದರ ಜೊತೆಗೆ ಚರ್ಚ್‌ ಹಾಗೂ ಮಸೀದಿಗಳಿಗೆ ₹200 ಕೋಟಿ ನೀಡುವುದಾಗಿ ಸ್ಟಾಲಿನ್ ಭರವಸೆ ನೀಡಿದ್ದಾರೆ.

ನೀರಿನ ಸೂಕ್ತ ನಿರ್ವಹಣೆ, ಶುದ್ಧ ಕುಡಿಯುವ ನೀರು ಪೂರೈಕೆ, ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಮೀಸಲಾತಿ ಹೆಚ್ಚಳ, ಪಿಂಚಣಿ ಏರಿಕೆ, ಹಸಿವು ನಿರ್ಮೂಲನೆಯ ಭಾಗವಾಗಿ ‘ಕಲೈನಾರ್ ಉನವಾಗಂ’ ಉಪಾಹಾರ ತಾಣಗಳ ಸ್ಥಾಪನೆಗೆ ಪ್ರಣಾಳಿಕೆಯಲ್ಲಿ ಒತ್ತು ನೀಡಲಾಗಿದೆ.

‘ಸುಳ್ಳು ಭರವಸೆಗಳ ಪ್ರಣಾಳಿಕೆ’: ಡಿಎಂಕೆ ಹೊರಡಿಸಿರುವ ಪ್ರಣಾಳಿಕೆಯು ಸುಳ್ಳು ಭರವಸೆಗಳಿಂದ ತುಂಬಿದೆ ಎಂದು ತಮಿಳುನಾಡು ಸಚಿವ ಎಸ್.ಪಿ. ವೇಲುಮಣಿ ಆರೋಪಿಸಿದ್ದಾರೆ. ಎಐಎಡಿಎಂಕೆ ಹೊರಡಿಸುವ ಪ್ರಣಾಳಿಕೆಯಿಂದ ಜನರಿಗೆ ನಿಜಕ್ಕೂ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

ಟಿಎಂಸಿ ಸೇರಿದ ಯಶವಂತ್ ಸಿನ್ಹಾ
ಕೋಲ್ಕತ್ತ:
ಕೇಂದ್ರದಮಾಜಿ ಸಚಿವ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮುಖ ಟೀಕಾಕಾರರಲ್ಲಿ ಒಬ್ಬರಾಗಿರುವ ಯಶವಂತ್ ಸಿನ್ಹಾ ಅವರು ಶನಿವಾರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರ್ಪಡೆಯಾದರು.

‘2024ರಲ್ಲಿ ಮೋದಿ ನೇತೃತ್ವದ ಸರ್ಕಾರವನ್ನು ಸೋಲಿಸಲು ಹಾಗೂ ದೇಶವನ್ನು ರಕ್ಷಿಸಬೇಕಾದರೆ, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಅಭೂತಪೂರ್ವ ಗೆಲುವು ಕಾಣಬೇಕಾದ ಅನಿವಾರ್ಯತೆ ಇದೆ’ ಎಂದು ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಸಿನ್ಹಾ ಹೇಳಿದರು.

ಅಟಲ್ ಬಿಹಾರಿ ವಾಜಪೇಯಿ ಆಡಳಿತದಲ್ಲಿ ಹಿರಿಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಸಿನ್ಹಾ ಅವರು ಬಿಜೆಪಿ ನಾಯಕತ್ವದ ಬಗ್ಗೆ ತೀವ್ರ ಭಿನ್ನಾಭಿಪ್ರಾಯ ಹೊಂದಿದ್ದ ಕಾರಣ, 2018ರಲ್ಲಿ ಪಕ್ಷ ತ್ಯಜಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿ ಪರ ಪ್ರಚಾರ ನಡೆಸಿದ್ದರು. ಇವರ ಪುತ್ರ ಜಯಂತ್ ಸಿನ್ಹಾ ಅವರು ಜಾರ್ಖಂಡ್‌ನ ಹಜಾರಿಬಾಗ್‌ನ ಬಿಜೆಪಿ ಸಂಸದರಾಗಿದ್ದಾರೆ.

‘ಮಮತಾ ಬ್ಯಾನರ್ಜಿ ಜತೆ ಕೇವಲ 45 ನಿಮಿಷ ಮಾತುಕತೆ ನಡೆಸಿ, ಪಕ್ಷಕ್ಕೆ ಸೇರುವ ನಿರ್ಧಾರ ಮಾಡಿದೆ. ನಂದಿಗ್ರಾಮದಲ್ಲಿ ಮಮತಾ ಮೇಲಿನ ಹಲ್ಲೆಯು ಚುನಾವಣೆಯನ್ನು ಗೆಲ್ಲಲು ಕೇಂದ್ರ ಸರ್ಕಾರ ಏನು ಬೇಕಾದರೂ ಬಾಡಬಲ್ಲದು ಎಂಬುದಕ್ಕೆ ನಿದರ್ಶನದಂತಿಗೆ. ನಾನು ಟಿಎಂಸಿ ಸೇರಲು ಮಮತಾ ಮೇಲೆ ನಡೆದ ಹಲ್ಲೆಯ ಘಟನೆಯೇ ಕಾರಣ. ಅವರೊಂದಿಗೆ ಕೆಲಸ ಮಾಡಲು ಇದು ಪ್ರೇರಣೆಯಾಯಿತು’ ಎಂದು ಸಿನ್ಹಾ ಹೇಳಿದ್ದಾರೆ.

‘ಮೋದಿ ಹಾಗೂ ಗೃಹಸಚಿವ ಅಮಿತ್ ಶಾ ಅವರಿಂದ ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ. ಪ್ರಜಾಪ್ರಭುತ್ವ ಬಲಗೊಳ್ಳಬೇಕಾದರೆ ಸಂಸ್ಥೆಗಳು ದೃಢವಾಗಿರಬೇಕು. ಆದರೆ ಎಲ್ಲಾ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗಿದೆ ಎಂದು ಸಿನ್ಹಾ ಆರೋಪಿಸಿದ್ದಾರೆ.

‘ರೈತರು ದೆಹಲಿಯ ಗಡಿಯಲ್ಲಿ ತಿಂಗಳುಗಳಿಂದ ಧರಣಿ ಕುಳಿತಿದ್ದರೂ ಸರ್ಕಾರ ಅವರನ್ನು ಗಣನೆಗೆ ತೆಗೆದುಕೊಂಡಿಲ್ಲ. ಚುನಾವಣೆಗಳನ್ನು ಗೆಲ್ಲುವುದೊಂದೇ ಆಡಳಿತ ಪಕ್ಷದ ಮಂತ್ರವಾಗಿದೆ ಎಂದರು.

‘ಬಿಜೆಪಿ ವಿರುದ್ಧ ಹೋರಾಟ ನಡೆಸುತ್ತಿರುವ ತೃಣಮೂಲ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಭಾರಿ ಅಂತರದಲ್ಲಿ ಜಯ ಸಾಧಿಸಲಿದೆ. ನಾವು ಈ ಗೆಲುವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಬೇಕಿದೆ. ‘ಬಂಗಾಳ ಇಂದು ಏನು ಚಿಂತಿಸುತ್ತದೆಯೋ, ಭಾರತ ಅದರ ಬಗ್ಗೆ ನಾಳೆ ಆಲೋಚಿಸುತ್ತದೆ’ ಎಂದು ಗೋಪಾಲಕೃಷ್ಣ ಗೋಖಲೆ ಹೇಳಿದ್ದರು. ಬಂಗಾಳದಲ್ಲಿ ಈ ಬಾರಿ ತೃಣಮೂಲ ಕಾಂಗ್ರೆಸ್‌ನ ಗೆಲುವು, 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ–ಶಾ ಅಧಿಪತ್ಯದ ಪತನಕ್ಕೆ ಸೂಚನೆ ನೀಡಲಿದೆ’ ಎಂದು ಸಿನ್ಹಾ ವಿಶ್ಲೇಷಿಸಿದರು.

ದಿನದ ಬೆಳವಣಿಗೆ...

*ಕಾಂಗ್ರೆಸ್ ಜತೆಗಿನ ಸೀಟು ಹೊಂದಾಣಿಕೆ ಬಿಕ್ಕಟ್ಟಿನ ನಡುವೆಯೇ ಅಬ್ಬಾಸ್ ಸಿದ್ದಿಕಿ ನೇತೃತ್ವದ ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್‌ಎಫ್) ಪಶ್ಚಿಮ ಬಂಗಾಳ ಚುನಾವಣೆಗೆ 26 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿತು

*ಪುದುಚೇರಿ ಚುನಾವಣೆಯಲ್ಲಿ 13 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಡಿಎಂಕೆ ಪಕ್ಷ ಶನಿವಾರ ಬಿಡುಗಡೆ ಮಾಡಿತು

*ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಅಸ್ಸಾಂ ಬಿಸ್ವನಾಥ್ ಮತ್ತು ಗೋಲಘಾಟ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಭಾನುವಾರ ಪ್ರಚಾರ ನಡೆಲಿದ್ದಾರೆ

*ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದಲ್ಲಿರುವ ಕೇರಳ ಕಾಂಗ್ರೆಸ್‌ (ಜೋಸೆಫ್) ಬಣವು ಕೇರಳ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಜೋಸೆಫ್ ಅವರು ತೊಡುಪುಳ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ

*ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಭಾನುವಾರ ಹಾಗೂ ಸೋಮವಾರ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರವಾಸ ಮಾಡಲಿದ್ದಾರೆ. ಸಾರ್ವಜನಿಕ ರ‍್ಯಾಲಿಯಲ್ಲಿ ಭಾಷಣ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT