ಬುಧವಾರ, ಜನವರಿ 19, 2022
18 °C
ಕಾರ್ಮಿಕರ ಸಮಸ್ಯೆ ಅರಿಯಲು ಕೇಂದ್ರದ ನಿರ್ಧಾರ

ಮನೆ ಕೆಲಸ: ರಾಷ್ಟ್ರ ಮಟ್ಟದ ಸಮೀಕ್ಷೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅಡುಗೆಯವರು, ಕಾವಲುಗಾರರು, ಸ್ವಚ್ಛತಾ ಸಿಬ್ಬಂದಿ, ಚಾಲಕರು, ಟ್ಯೂಷನ್‌ ನೀಡುವವರು ಸೇರಿದಂತೆ ಎಲ್ಲ ರೀತಿಯ ಸೇವೆ ಒದಗಿಸುವ ಮನೆ ಕೆಲಸದವರ ಅಖಿಲ ಭಾರತ ಮಟ್ಟದ ಸಮೀಕ್ಷೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ.

ದೇಶದ ಒಟ್ಟು 742 ಜಿಲ್ಲೆಗಳಲ್ಲಿ ಏಕಕಾಲಕ್ಕೆ ನಡೆಯಲಿರುವ ಸಮೀಕ್ಷೆಗೆ ಕೇಂದ್ರದ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಸೋಮವಾರ ಚಾಲನೆ ನೀಡಿದ್ದಾರೆ.

ಮನೆ ಕೆಲಸದವರ ನಿಖರವಾದ ಸಂಖ್ಯೆ ಮತ್ತು ಅನುಪಾತವನ್ನು ಅಂದಾಜು ಮಾಡುವುದು ಹಾಗೂ ವಿವಿಧ ಕುಟುಂಬಗಳಲ್ಲಿ ತೊಡಗಿರುವ ಮನೆ ಕೆಲಸದವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪುರಾವೆ ಆಧರಿತ, ದತ್ತಾಂಶ -ಚಾಲಿತ ನೀತಿಗಳನ್ನು ಅರ್ಥಮಾಡಿಕೊಳ್ಳಲು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಈ ಸಮೀಕ್ಷೆಯು ನೆರವು ನೀಡಲಿದೆ ಎಂದು ಸಚಿವರು ಹೇಳಿದ್ದಾರೆ.

ಬೆಳೆಯುತ್ತಿರುವ ನಗರಗಳತ್ತ ಕಾರ್ಮಿಕರ ವಲಸೆಯೂ ಹೆಚ್ಚಿದ್ದು, ಮನೆ ಕೆಲಸ ನೆಚ್ಚಿಕೊಂಡಿರುವ ಕಾರ್ಮಿಕರ ಸಂಖ್ಯೆಯಲ್ಲೂ ತೀವ್ರ ಹೆಚ್ಚಳ ಕಂಡುಬರುತ್ತಿದೆ. ಈ ವಲಯದಲ್ಲಿ ತೊಡಗಿರುವವರ ಸುರಕ್ಷತೆ ಮತ್ತು ಹಕ್ಕು ರಕ್ಷಣೆ ನಿಟ್ಟಿನಲ್ಲಿ ಸೂಕ್ತ ನೀತಿ ರೂಪಿಸಲು ದತ್ತಾಂಶದ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಮನೆ ಕೆಲಸದವರ ರಾಷ್ಟ್ರವ್ಯಾಪಿ ಸಮೀಕ್ಷೆಯನ್ನು ಇದೇ ಮೊದಲ ಬಾರಿಗೆ ನಡೆಸಲಾಗುತ್ತಿದೆ. ಈ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ಸೂಕ್ತ ನೀತಿ ರೂಪಿಸುತ್ತಿರುವುದು, ಸಮಾಜದ ಕಟ್ಟೆಕಡೆಯ ವ್ಯಕ್ತಿಗೂ ಸೌಲಭ್ಯ ದೊರೆಯಬೇಕೆಂಬ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ನೆರವು ನೀಡುವ ಈ ಸಮೀಕ್ಷೆಯು ಒಂದು ವರ್ಷದೊಳಗೆ ಮುಕ್ತಾಯಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಇ–ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಕೊಂಡಿರುವ ಅಸಂಘಟಿತ ವಲಯದ ಒಟ್ಟು 8.56 ಕೋಟಿ ಕಾರ್ಮಿಕರ ಪೈಕಿ, ಅಂದಾಜು ಶೇ 8.8ರಷ್ಟು ಕಾರ್ಮಿಕರು ಮನೆ ಕೆಲಸದ ವರ್ಗಕ್ಕೆ ಸೇರಿದ್ದಾರೆ. ಈ ವರ್ಗವು ಕೃಷಿ ಮತ್ತು ನಿರ್ಮಾಣ ವಲಯದ ನಂತರ ಮೂರನೇ ಅತಿದೊಡ್ಡ ವರ್ಗವಾಗಿದೆ.

ಮನೆ ಕೆಲಸ ನೆಚ್ಚಿಕೊಂಡಿರುವ ಕಾರ್ಮಿಕರು ಅನೌಪಚಾರಿಕ ವಲಯದ ಒಟ್ಟು ಉದ್ಯೋಗದ ಗಮನಾರ್ಹ ಭಾಗವನ್ನು ಹೊಂದಿದ್ದಾರೆ. ಆದರೆ, ಅವರ ಉದ್ಯೋಗದ ವಿವರ, ವಲಸೆ/ ವಲಸೆಯೇತರ ಕಾರ್ಮಿಕರ ಸಂಖ್ಯೆ, ವೇತನ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ಉದ್ಯೋಗದ ಸ್ಥಿತಿಗತಿ ಕುರಿತ ದತ್ತಾಂಶದ ಕೊರತೆ ಇರುವುದರಿಂದ ಸಮೀಕ್ಷೆಯ ಅಗತ್ಯವಿದೆ.

ಮನೆ ಕೆಲಸ ಆರಂಭಿಸಿದಾಗಿನ ವಯಸ್ಸು, ವಲಸೆಯ ಸ್ಥಿತಿ, ಔದ್ಯೋಗಿಕ ತರಬೇತಿ/ ಶಿಕ್ಷಣ, ಚಟುವಟಿಕೆ, ಕೆಲಸ ಮಾಡಿದ ದಿನಗಳ ಸಂಖ್ಯೆ, ಕೆಲಸದ ಅವಧಿ, ಸಂಭಾವನೆ, ಒಪ್ಪಂದ, ವೈವಾಹಿಕ ಸ್ಥಿತಿ, ಸಾಮಾನ್ಯ ಶಿಕ್ಷಣದ ಮಟ್ಟ ಮತ್ತಿತರ ಎಲ್ಲ ರೀತಿಯ ಮಾಹಿತಿಯನ್ನೂ ಸಮೀಕ್ಷೆ ವೇಳೆ ಸಂಗ್ರಹಿಸಲಾಗುತ್ತದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು