ಡಿಆರ್ಡಿಒ ಮುಖ್ಯಸ್ಥ ಜಿ.ಸತೀಶ್ ರೆಡ್ಡಿ ಕಾರ್ಯಾವಧಿ 2 ವರ್ಷ ವಿಸ್ತರಣೆ

ನವದೆಹಲಿ: ವಿಜ್ಞಾನಿ ಜಿ.ಸತೀಶ ರೆಡ್ಡಿ ಅವರಿಗೆ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಮುಖ್ಯಸ್ಥರ ಜವಾಬ್ದಾರಿಯನ್ನು ಎರಡು ವರ್ಷಗಳು ವಿಸ್ತರಿಸಿ ಸೋಮವಾರ ಕೇಂದ್ರ ಸರ್ಕಾರ ಆದೇಶಿಸಿದೆ.
2018ರ ಆಗಸ್ಟ್ನಲ್ಲಿ ಸತೀಶ್ ರೆಡ್ಡಿ ಅವರನ್ನು ಎರಡು ವರ್ಷಗಳ ಅವಧಿಗೆ ಡಿಆರ್ಡಿಒ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.
ಸಚಿವ ಸಂಪುಟದ ನೇಮಕಾತಿ ಮಂಡಳಿಯು ಸತೀಶ್ ರೆಡ್ಡಿ ಅವರನ್ನು ಡಿಆರ್ಡಿಒ ಅಧ್ಯಕ್ಷರು ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿ ಮುಂದಿನ ಎರಡು ವರ್ಷಗಳು ಮುಂದುವರಿಸಲು ಅನುಮೋದನೆ ನೀಡಿದೆ.
ದೇಸೀಯ ಕ್ಷಿಪಣಿಗಳ ವಿನ್ಯಾಸ, ಅಭಿವೃದ್ಧಿ ಹಾಗೂ ವೈಮಾನಿಕ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸತೀಶ ರೆಡ್ಡಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಅವರು ಮೂಲತಃ ಆಂಧ್ರ ಪ್ರದೇಶದವರು. ಅನಂತಪುರದ ಜವಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಿಂದ (ಜೆಎನ್ಟಿಯು) ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಹೈದರಾಬಾದ್ ಜೆಎನ್ಟಿಯುದಿಂದ ಎಂ.ಎಸ್ ಮತ್ತು ಪಿಎಚ್.ಡಿ ಪಡೆದಿದ್ದಾರೆ. ವಿಜ್ಞಾನಿ ಡಾ. ಅಬ್ದುಲ್ ಕಲಾಂ ಅವರ ಕನಸಿನ ರಕ್ಷಣಾ ಸಂಶೋಧನಾ ಸಂಸ್ಥೆ ‘ರಿಸರ್ಚ್ ಸೆಂಟರ್ ಇಮಾನತ್’ನಲ್ಲಿ ವಿಜ್ಞಾನಿಯಾಗಿ ವೃತ್ತಿಜೀವನ ಆರಂಭಿಸಿದರು. 2015ರ ಮೇನಲ್ಲಿ ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರರಾಗಿ ನೇಮಕಗೊಂಡರು.
ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳ ವೈಜ್ಞಾನಿಕ ಮಹತ್ವ ಮತ್ತು ಸಂಶೋಧನಾ ಸ್ವರೂಪ, ವಿನ್ಯಾಸ ಮತ್ತು ಅಭಿವೃದ್ಧಿ ಯೋಜನೆಗಳ ಕುರಿತು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವ ಕಾರ್ಯವನ್ನು ಡಿಆರ್ಡಿಒ ಮುಖ್ಯಸ್ಥರು ಮಾಡುತ್ತಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.