ಮಂಗಳವಾರ, ಏಪ್ರಿಲ್ 20, 2021
26 °C
ಇ-ವಿಜಿಲ್‌ನಲ್ಲಿ 1,000 ದೂರು

ಟಿಎಂಸಿ ದೂರಿನ ಬೆನ್ನಲ್ಲೇ ಚುನಾವಣಾ ಆಯೋಗ ಆದೇಶ- ‘ಮೋದಿ ಬ್ಯಾನರ್‌ ತೆಗೆಯಿರಿ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಗಳಿರುವ ಹೋರ್ಡಿಂಗ್‌ ಮತ್ತು ಬ್ಯಾನರ್‌ಗಳನ್ನು ತೆರವು ಮಾಡುವಂತೆ ಪಶ್ಚಿಮ ಬಂಗಾಳದಲ್ಲಿರುವ ಕೇಂದ್ರ ಸರ್ಕಾರದ ಸಂಸ್ಥೆಗಳಿಗೆ ಚುನಾವಣಾ ಆಯೋಗವು ಸೂಚನೆ ನೀಡಿದೆ.

ಕೋವಿಡ್‌-19 ಲಸಿಕೆಯ ಬಾಟಲಿ, ಬಾಕ್ಸ್‌, ಪ್ರಮಾಣಪತ್ರ, ಬ್ಯಾನರ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವಿದೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಟಿಎಂಸಿ ಬುಧವಾರವಷ್ಟೇ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಇದರ ಬೆನ್ನಲ್ಲೇ ಆಯೋಗವು ಈ ಆದೇಶ ನೀಡಿದೆ.

‘ಪೆಟ್ರೋಲ್‌ ಬಂಕ್‌ಗಳು, ಕೇಂದ್ರ ಸರ್ಕಾರದ ಕಚೇರಿಗಳು ಮತ್ತು ಏಜೆನ್ಸಿಗಳ ಬ್ಯಾನರ್‌ ಮತ್ತು ಹೋರ್ಡಿಂಗ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವಿದೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ. ಈ ಸಂಬಂಧ ಇ-ವಿಜಿಲ್ ಅಪ್ಲಿಕೇಷನ್‌ನಲ್ಲಿ 1,000ಕ್ಕೂ ಹೆಚ್ಚು ದೂರುಗಳು ಬಂದಿವೆ. ಇದರಲ್ಲಿ 450 ದೂರುಗಳು ಸಮಂಜಸವಾಗಿವೆ. ಹೀಗಾಗಿ ರಾಜ್ಯದ ಎಲ್ಲೆಡೆ ಮೋದಿ ಅವರ ಚಿತ್ರವಿರುವ ಹೋರ್ಡಿಂಗ್ ಮತ್ತು ಬ್ಯಾನರ್‌ಗಳನ್ನು ತೆರವು ಮಾಡಲು ಸೂಚಿಸಿದ್ದೇವೆ’ ಎಂದು ಆಯೋಗವು ಹೇಳಿದೆ.

‘ಕಾನೂನಿನ ಮುಂದೆ ಎಲ್ಲರೂ ಸಮಾನರು. ನೀತಿಸಂಹಿತೆಯನ್ನು ಉಲ್ಲಂಘಿಸಿದರೆ ಏನಾಗುತ್ತದೆ ಎಂಬುದು ಸಾರ್ವಜನಿಕರಿಗೆ ಗೊತ್ತಾಗಲಿದೆ. ಈ ಹೋರ್ಡಿಂಗ್‌ಗಳು ಮತ್ತು ಬ್ಯಾನರ್‌ಗಳನ್ನು 72 ಗಂಟೆಗಳ ಒಳಗೆ ತೆರವು ಮಾಡಿ ಎಂದು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ’ ಎಂದು ಆಯೋಗವು ಹೇಳಿದೆ.

200ಕ್ಕೂ ಹೆಚ್ಚು ಸ್ಥಾನಗಳು: ‘ಮುಖ್ಯಮಂತ್ರಿಯಾಗಿ ತಮ್ಮ ಕಡೆಯ ದಿನಗಳನ್ನು ಮಮತಾ ಬ್ಯಾನರ್ಜಿ ಅವರು ಎಣಿಸಬೇಕು. ಮೇ 3ರ ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಇರಲಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲಿದೆ’ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

‘ಕಮ್ಯುನಿಸ್ಟರ ರಕ್ತಪಾತವನ್ನು ಮಮತಾ ಬ್ಯಾನರ್ಜಿ ಮುಂದುವರಿಸಿದ್ದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ರಕ್ತಪಾತ ಮತ್ತು ರಾಜಕೀಯ ಕೊಲೆಗಳು ನಿಲ್ಲಲಿವೆ’ ಎಂದು ಅವರು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

‘ಏಕ್‌ ಔರ್ ನರೇನ್‌...’

ಪ್ರಧಾನಿ ನರೇಂದ್ರ ಮೋದಿ ಅವರ ಜೀವನವನ್ನು ಆಧರಿಸಿದ ಚಲನಚಿತ್ರ ನಿರ್ಮಾಣಕ್ಕೆ ಚಾಲನೆ ದೊರೆತಿದೆ. ಕೋಲ್ಕತ್ತ ಮೂಲದ ಚಲನಚಿತ್ರ ನಿರ್ದೇಶಕ ಮಿಲನ್ ಭೌಮಿಕ್ ‘ಏಕ್‌ ಔರ್ ನರೇನ್‌...’ ಎಂಬ ಸಿನಿಮಾವನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಬಿ.ಆರ್.ಛೋಪ್ರಾ ಅವರ ಮಹಾಭಾರತ ಧಾರಾವಾಹಿಯಲ್ಲಿ ಯುಧಿಷ್ಠಿರನ ಪಾತ್ರ ನಿರ್ವಹಿಸಿದ್ದ ಗಜೇಂದ್ರ ಚೌಹಾಣ್ ಅವರು ಈ ಸಿನಿಮಾದಲ್ಲಿ ಮೋದಿ ಅವರ ಪಾತ್ರವನ್ನು ನಿರ್ವಹಿಸಲಿದ್ದಾರೆ.

‘ಈ ಸಿನಿಮಾದಲ್ಲಿ ಎರಡು ಪ್ರಮುಖ ಭಾಗಗಳು ಇರಲಿವೆ. ಒಂದು ವಿವೇಕಾನಂದ ಅವರದ್ದು. ಸೋದರತ್ವವನ್ನು ವಿವೇಕಾನಂದ ಅವರು ವಿಶ್ವದಾದ್ಯಂತ ಹೇಗೆ ಪಸರಿಸಿದರು ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗುತ್ತದೆ. ನಂತರ ಮೋದಿ ಅವರು ಜಾಗತಿಕ ಮಟ್ಟದಲ್ಲಿ ಭಾರತವನ್ನು ಎತ್ತರಕ್ಕೆ ಕೊಂಡೊಯ್ದ ಬಗೆಯನ್ನು ತೋರಿಸಲಾಗುತ್ತದೆ’ ಎಂದು ಮಿಲನ್ ಹೇಳಿದ್ದಾರೆ.

ಕಲಾಂ ಆಪ್ತ ಕಮಲ್‌ ಪಕ್ಷಕ್ಕೆ ಸೇರ್ಪಡೆ

ಡಾ. ಎಪಿಜೆ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಹುದ್ದೆಯಲ್ಲಿದ್ದಾಗ ಅವರ ವೈಜ್ಞಾನಿಕ ಸಲಹೆಗಾರ ಮತ್ತು ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದ ವಿ.ಪೊನ್ರಾಜ್ ಅವರು ನಟ ಕಮಲ ಹಾಸನ ನೇತೃತ್ವದ ಮಕ್ಕಳ್ ನೀಧಿ ಮಯ್ಯಂ (ಎಂಎನ್‌ಎಂ) ಪಕ್ಷಕ್ಕೆ  ಸೇರಿದರು.

ಕಲಾಂ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದ ಅವರು, ತಮಿಳುನಾಡಿನ ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆ ಬಗೆಗಿದ್ದ ಆತಂಕ ನಿವಾರಿಸುವ ವರದಿ ಸಿದ್ಧಪಡಿಸಿದ್ದರು. ಎಂಎನ್‌ಎಂ ಸೇರ್ಪಡೆಗೆ ಪೊನ್ರಾಜ್‌ ಹರ್ಷ ವ್ಯಕ್ತಪಡಿಸಿದ್ದಾರೆ. ‘ಕಲಾಂ ಅವರ ಚಿಂತನೆಗಳನ್ನು ಪೂರ್ಣಗೊಳಿಸುವ ಸಾಮರ್ಥ್ಯ ಕಮಲಹಾಸನ್ ಅವರಿಗಿದೆ’ ಎಂದು ಹೇಳಿದ್ದಾರೆ.

***

ಗೆಲುವು ಮಮತಾ ಬ್ಯಾನರ್ಜಿಯವರದ್ದಾಗಲಿ ಎಂದು ನಾವು ಆಶಿಸುತ್ತೇವೆ. ಏಕೆಂದರೆ ಅವರು ನಿಜವಾದ ಬಂಗಾಳ ಹುಲಿ. ಅವರಿಗೆ ಬೆಂಬಲವಾಗಿ ನಾವು ನಿಲ್ಲುತ್ತೇವೆ

- ಸಂಜಯ್ ರಾವುತ್, ಶಿವಸೇನಾ ವಕ್ತಾರ ಮತ್ತು ಸಂಸದ

***

ಶಿವಸೇನಾಗೆ ಪಶ್ಚಿಮ ಬಂಗಾಳದಲ್ಲಿ ನೆಲೆಯೇ ಇಲ್ಲ. ಅಂಥದ್ದರಲ್ಲಿ, ಅವರು ಬೆಂಬಲ ನೀಡುವುದರಿಂದ ಟಿಎಂಸಿಗೆ ಯಾವ ಲಾಭವೂ ಆಗುವುದಿಲ್ಲ. ಇದು ನಿಜಕ್ಕೂ ಅಪಹಾಸ್ಯ

- ಪಶ್ಚಿಮ ಬಂಗಾಳ ಬಿಜೆಪಿ ಘಟಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು