ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಪ್ರಸ್ತಾವ, ರೈತರ ನಕಾರ: ಕೇಂದ್ರ ಸರ್ಕಾರದ ಪ್ರಸ್ತಾವಗಳೇನು?

Last Updated 9 ಡಿಸೆಂಬರ್ 2020, 20:24 IST
ಅಕ್ಷರ ಗಾತ್ರ

ನವದೆಹಲಿ: ರೈತರ ಪ್ರತಿಭಟನೆಯ ಒತ್ತಡಕ್ಕೆ ಮಣಿದ ಸರ್ಕಾರ ಕೃಷಿ ಕ್ಷೇತ್ರದ ಸುಧಾರಣೆಗೆ ಇತ್ತೀಚೆಗೆ ಜಾರಿಗೆ ತಂದ ಮೂರು ಕಾಯ್ದೆಗಳಿಗೆ ಗಮನಾರ್ಹವಾದ ತಿದ್ದುಪಡಿ ತರುವ ಪ್ರಸ್ತಾವ ಮುಂದಿಟ್ಟಿದೆ. ಆದರೆ, ಈ ಮೂರೂ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂಬ ರೈತರ ಆಗ್ರಹವನ್ನು ತಿರಸ್ಕರಿಸಿದೆ.

ಸರ್ಕಾರದ ಪ್ರಸ್ತಾವವನ್ನು ಪ್ರತಿಭಟನಾನಿರತ ರೈತರು ತಿರಸ್ಕರಿಸಿದ್ದಾರೆ. ಹೋರಾಟವನ್ನು ಇನ್ನಷ್ಟು ಬಿರುಸುಗೊಳಿಸಲು ನಿರ್ಧರಿಸಿದ್ದಾರೆ.

ಇದೇ 14ರಂದು (ಸೋಮವಾರ) ರಾಷ್ಟ್ರದಾದ್ಯಂತ ಪ್ರತಿಭಟನೆ ನಡೆಸಲಾಗುವುದು. ತಮ್ಮ ಬೇಡಿಕೆಗಳು ಈಡೇರದೇ ಇದ್ದರೆ, ಇದೇ 12ಕ್ಕೆ (ಶನಿವಾರ) ಮೊದಲು ಜೈಪುರ–ದೆಹಲಿ, ದೆಹಲಿ–ಆಗ್ರಾ ಎಕ್ಸ್‌ಪ್ರೆಸ್‌ ವೇಗಳು ಹಾಗೂ ದೆಹಲಿ ಪ್ರವೇಶದ ಎಲ್ಲ ರಸ್ತೆಗಳನ್ನು ಒಂದೊಂದಾಗಿ ಬಂದ್‌ ಮಾಡುವುದಾಗಿ ರೈತ ಸಂಘಟನೆಗಳು ಹೇಳಿವೆ.

ಸರ್ಕಾರವು ಬುಧವಾರ ಮುಂದಿಟ್ಟಿರುವ ಪ್ರಸ್ತಾವಗಳಲ್ಲಿ ಹೊಸದೇನೂ ಇಲ್ಲ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರ ಪ್ರಸ್ತಾವದಲ್ಲಿ ಇದ್ದ ಅಂಶಗಳೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿದ ಪ್ರಸ್ತಾವದಲ್ಲಿಯೂ ಇವೆ. ಸಂಯುಕ್ತ ಕಿಸಾನ್‌ ಸಮಿತಿಯು ಇದನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ ಎಂದು ರೈತ ಮುಖಂಡ ಶಿವಕುಮಾರ್‌ ಕಾಕಾ ಹೇಳಿದ್ದಾರೆ.

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಬಗೆಗಿನ ನಿಲುವನ್ನು ಕೇಂದ್ರ ಸರ್ಕಾರ ಮೃದುಗೊಳಿಸಿದೆ. ಕಾಯ್ದೆಗಳಲ್ಲಿ ಹಲವು ಬದಲಾವಣೆಗಳನ್ನು ತರುವುದಾಗಿ ರೈತರಿಗೆ ಲಿಖಿತ ಪ್ರಸ್ತಾವ ನೀಡಿದೆ. ರೈತರು ಈ ಪ್ರಸ್ತಾವನ್ನು ತಿರಸ್ಕರಿಸಿದ್ದಾರೆ.

ವಿಪಕ್ಷ ನಿಯೋಗದಿಂದ ರಾಷ್ಟ್ರಪತಿ ಭೇಟಿ

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್ ನೇತೃತ್ವದ ವಿರೋಧ ಪಕ್ಷಗಳ ಮುಖಂಡರ ನಿಯೋಗವು ಬುಧವಾರ ಭೇಟಿಯಾಗಿ ಮೂರು ಹೊಸ ಕಾಯ್ದೆಗಳನ್ನು ರದ್ದುಪಡಿಸುವಂತೆ ಕೋರಿದೆ.

ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ, ಡಿಎಂಕೆ ಮುಖಂಡ ಟಿ.ಕೆ.ಎಸ್‌. ಇಳಂಗೋವನ್‌ ಅವರು ನಿಯೋಗದಲ್ಲಿ ಇದ್ದರು.

ಈ ಸಮಸ್ಯೆ ಪರಿಹಾರಕ್ಕಾಗಿ ಜಂಟಿ ಕಾರ್ಯತಂತ್ರ ರೂಪಿಸುವುದಕ್ಕಾಗಿ ಸಮಾನಮನಸ್ಕ ಪಕ್ಷಗಳ ಸಭೆ ಕರೆಯಲು ವಿರೋಧ ಪಕ್ಷಗಳು ಚಿಂತನೆ ನಡೆಸಿವೆ.

ಕೇಂದ್ರಪ್ರಸ್ತಾವದ ಮುಖ್ಯ ಅಂಶಗಳು ಹೀಗಿವೆ:

* ಎಪಿಎಂಸಿ ಮಂಡಿಗಳಲ್ಲಿ ವಿಧಿಸುವ ಅದೇ ಪ್ರಮಾಣದ ಲೆವಿಯನ್ನು ಖಾಸಗಿ ವ್ಯಾಪಾರ ಪ್ರದೇಶಗಳಲ್ಲಿಯೂ ವಿಧಿಸಲು ರಾಜ್ಯ ಸರ್ಕಾರಗಳಿಗೆ ಅವಕಾಶ

* ಪ್ಯಾನ್‌ ಕಾರ್ಡ್‌ ಇರುವ ಯಾರು ಬೇಕಿದ್ದರೂ ರೈತರಿಂದ ಖರೀದಿ ಮಾಡಬಹುದು ಎಂಬ ನಿಯಮಕ್ಕೆ ತಿದ್ದುಪಡಿ: ವ್ಯಾಪಾರಿಗಳ ನೋಂದಣಿಗೆ ನಿಯಮ ರೂಪಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ

* ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ವ್ಯವಸ್ಥೆ ಮುಂದುವರಿಸುವುದಾಗಿ ಲಿಖಿತ ಭರವಸೆ; ಆದರೆ ಅದನ್ನು ಕಾನೂನುಬದ್ಧ ಹಕ್ಕಾಗಿ ರೂಪಿಸಲು ನಕಾರ

* ಕೃಷಿ ಉತ್ಪನ್ನ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ವ್ಯಾಜ್ಯಗಳ ಪರಿಹಾರಕ್ಕೆ ನ್ಯಾಯಾಲಯಕ್ಕೆ ಹೋಗಲು ಅವಕಾಶ: ಇಂತಹ ವ್ಯಾಜ್ಯಗಳನ್ನು ಉಪವಿಭಾಗಾಧಿಕಾರಿ ಮಟ್ಟದಲ್ಲಿಯೇ ಪರಿಹರಿಸಿಕೊಳ್ಳಬೇಕು ಎಂದು ಕಾಯ್ದೆ ಹೇಳುತ್ತದೆ

* ಗುತ್ತಿಗೆ ಕೃಷಿಗೆ ಪಡೆದುಕೊಂಡ ಜಮೀನಿನನ್ನು ಮಾರಾಟ ಮಾಡಲು, ಭೋಗ್ಯ ಅಥವಾ ಬಾಡಿಗೆಗೆ ನೀಡಲು ಅವಕಾಶ ಇಲ್ಲ; ಹಾಗೆಯೇ ಗುತ್ತಿಗೆಗೆ ಪಡೆದ ಜಮೀನಿನಲ್ಲಿ ಕಟ್ಟಡ ಮತ್ತಿತರ ರಚನೆಗಳಿಗೂ ಅನುಮತಿ ಇಲ್ಲ

* ಬೆಳೆ ಖರೀದಿದಾರರು ಜಮೀನಿನಲ್ಲಿ ಇರುವ ಕಟ್ಟಡದ ಮೇಲೆ ಸಾಲ ಪಡೆಯುವಂತಿಲ್ಲ ಅಥವಾ ಅಂತಹ ಕಟ್ಟಡದ ಮೇಲೆ ಹಕ್ಕು ಸಾಧಿಸುವಂತಿಲ್ಲ ಎಂಬುದನ್ನು ಕಾಯ್ದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗುವುದು

* ಕೃಷಿ ಜಮೀನು ಮುಟ್ಟುಗೋಲು: ಇಂತಹ ಯಾವುದೇ ವಿಚಾರ ಹೊಸ ಕಾಯ್ದೆಗಳಲ್ಲಿ ಇಲ್ಲ. ಈ ವಿಚಾರಕ್ಕೆ ಸಂಬಂಧಿಸಿ ಯಾವುದೇ ಸ್ಪಷ್ಟೀಕರಣ ಬೇಕಿದ್ದರೆ ಕಾಯ್ದೆಯಲ್ಲಿ ಸೇರಿಸಲು ಸರ್ಕಾರ ಸಿದ್ಧ

* ವಿದ್ಯುತ್‌ (ತಿದ್ದುಪಡಿ) ಕಾಯ್ದೆ ಸಮಾಲೋಚನೆ ಹಂತದಲ್ಲಿಯೇ ಇದೆ. ಈ ಕಾಯ್ದೆ
ಯಿಂದಾಗಿ ವಿದ್ಯುತ್‌ ಬಿಲ್‌ ಪಾವತಿಗೆ ಈಗ ಇರುವ ವ್ಯವಸ್ಥೆಯಲ್ಲಿ ಯಾವ ಬದಲಾವಣೆಯೂ ಆಗದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT