ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ನೇರವಾಗಿ ರೈತರೊಂದಿಗೆ ಮಾತನಾಡಬೇಕು: ರಾಜಸ್ಥಾನ ಸಿಎಂ

Last Updated 30 ಜನವರಿ 2021, 13:47 IST
ಅಕ್ಷರ ಗಾತ್ರ

ಜೈಪುರ: ಹಲವು ಸುತ್ತಿನ ಮಾತುಕತೆಯ ಬಳಿಕವೂ ಕೇಂದ್ರ ಸರ್ಕಾರ ಹಾಗೂ ರೈತರ ನಡುವಣ ಬಿಕ್ಕಟ್ಟು ಮುಂದುವರಿದಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇರವಾಗಿ ರೈತರೊಂದಿಗೆ ಚರ್ಚಿಸಬೇಕು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶನಿವಾರ ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು 2020 ನವೆಂಬರ್ 26ರಿಂದಲೇ ರಾಷ್ಟ್ರ ರಾಜಧಾನಿ ನವದೆಹಲಿಯ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಳೆದ ಎರಡು ತಿಂಗಳ ಅವಧಿಯಲ್ಲಿ ಕೇಂದ್ರ ಸರ್ಕಾರದ ಜೊತೆಗೆ 11 ಸುತ್ತಿನ ಮಾತುಕತೆಗಳು ನಡೆದರೂ ಯಾವುದೇ ಪ್ರಯೋಜನವುಂಟಾಗಲಿಲ್ಲ. ಈ ನಡುವೆ ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಹಿಂಸಾಚಾರ ಸಂಭವಿಸಿತ್ತು.

ಸರ್ಕಾರವು ತನ್ನ ಕೆಟ್ಟ ನೀತಿಗಳನ್ನು ಸರಿಪಡಿಸಲು ಇನ್ನೂ ಅವಕಾಶವಿದೆ. ಸ್ವತಃ ಪ್ರಧಾನಿ ಅವರೇ ವಿಷಯದ ಗೌರವವನ್ನು ಅರಿತುಕೊಂಡು ರೈತರೊಂದಿಗೆ ಮಾತನಾಡಬೇಕು. ವಿವಾದಿತ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಬೇಕು. ನಿರ್ಧಾರಗಳನ್ನು ಬದಲಾಯಿಸುವುದರಿಂದ ಯಾವುದೇ ತಪ್ಪಿಲ್ಲ. ಇದು ಪ್ರಜಾಪ್ರಭುತ್ವದಲ್ಲಿ ಸಹಜ. ಜನರು ಅದನ್ನು ಸ್ವಾಗತಿಸುತ್ತಾರೆ ಎಂದು ಅಶೋಕ್ ಗೆಹ್ಲೋಟ್ ತಿಳಿಸಿದರು.

ಹೊಸ ಕಾನೂನುಗಳು ಮುಂದಿನ ಪೀಳಿಗೆಯ ಜೀವನೋಪಾಯಕ್ಕೆ ಮಾರಕವಾಗಿದ್ದರಿಂದ ರೈತರ ಕಳವಳಗಳು ಪ್ರಮಾಣಿಕವಾಗಿದೆ ಎಂದವರು ಹೇಳಿದರು.

ಗಣರಾಜ್ಯೋತ್ಸವದ ದಿನದಂದು ಕೆಲವು ಸಮಾಜ ದ್ರೋಹಿಗಳು ನಡೆಸಿದ ಹಿಂಸಾಚಾರ ಕೃತ್ಯವನ್ನುನಾನು ಖಂಡಿಸುತ್ತೇನೆ. ರೈತರು ಕಳೆದ 70 ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಈ ರೀತಿ ಮಾಡಲು ಸಾಧ್ಯವಿಲ್ಲ. ನ್ಯಾಯಾಂಗ ವಿಚಾರಣೆ ಏಕೆ ನಡೆಸಲಿಲ್ಲ? ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಬಿಜೆಪಿಯ ಆದೇಶದ ಮೆರೆಗೆ ಘರ್ಷಣೆಗಳು ನಡೆದಿವೆ. ರೈತರೊಂದಿಗೆ ಘರ್ಷಣೆಗಿಳಿಯುವಂತೆ ಗ್ರಾಮಸ್ಥರನ್ನು ಬಿಜೆಪಿ ಪ್ರಚೋದಿಸುತ್ತಿದೆ. ಇದು ಒಳ್ಳೆಯದಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT