ಮಂಗಳವಾರ, ಸೆಪ್ಟೆಂಬರ್ 28, 2021
23 °C
ಐಎಎಸ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯ; ಜಿಲ್ಲಾಡಳಿತದ ಜೊತೆ ಮಾತುಕತೆ ವಿಫಲ

ರೈತರ ವಿರುದ್ಧ ‘ತಲೆ ಉರುಳಿಸುವ’ ಹೇಳಿಕೆ: ಐಎಎಸ್ ಅಧಿಕಾರಿ ವಿರುದ್ಧ ರೈತರ ಆಕ್ರೋಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕರ್ನಾಲ್ (ಹರಿಯಾಣ) (ಪಿಟಿಐ): ರೈತರ ವಿರುದ್ಧ ‘ತಲೆ ಉರುಳಿಸುವ’ ಹೇಳಿಕೆ ನೀಡಿದ್ದ ಐಎಎಸ್ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾದ (ಎಸ್‌ಕೆಎಂ) ನೇತೃತ್ವದಲ್ಲಿ ಮಂಗಳವಾರ ಇಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. 

ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಜಿಲ್ಲಾಡಳಿತ ಕಚೇರಿಯನ್ನು ವಶಕ್ಕೆ ತೆಗೆದುಕೊಳ್ಳುವುದಾಗಿ ರೈತರು ಎಚ್ಚರಿಸಿ ದರು. ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸುತ್ತಿದ್ದ ರೈತರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು. 

ಇದಕ್ಕೂ ಮುನ್ನ ರೈತ ಸಂಘಟನೆ ಗಳು ಮಹಾಪಂಚಾಯಿತಿ ಹಮ್ಮಿಕೊಂಡಿ ದ್ದವು. ರೈತರು ಸಮಾವೇಶ ಸ್ಥಳದಲ್ಲಿ ಒಟ್ಟುಗೂಡುತ್ತಿದ್ದಂತೆಯೇ ರೈತ ಮುಖಂಡರನ್ನು ಮಾತುಕತೆಗೆ ಆಹ್ವಾನಿ ಸಲಾಯಿತು. ಆದರೆ, ಕರ್ನಾಲ್ ಸ್ಥಳೀಯಾಡಳಿತದ ಜೊತೆಗಿನ ಮಾತುಕತೆ ಮುರಿದುಬಿದ್ದಿದೆ ಎಂದು ರೈತ ನಾಯ ಕರು ತಿಳಿಸುತ್ತಿದ್ದಂತೆಯೇ, ಸಾವಿರಾರು ರೈತರು ಇಲ್ಲಿನ ಜಿಲ್ಲಾ  ಕಚೇರಿಯತ್ತ ಸಂಜೆ ಮೆರವಣಿಗೆ ಆರಂಭಿಸಿದರು. 

ಆಗಸ್ಟ್ 28ರಂದು ಕರ್ನಾಲ್‌ನಲ್ಲಿ ಪ್ರತಿಭಟನಕಾರರ ಮೇಲೆ ಲಾಠಿಪ್ರಹಾರ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತರು ಬೇಡಿಕೆ ಇಟ್ಟಿದ್ದರು. ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ಅವರು ನೀಡಿದ್ದ ‘ತಲೆ ಉರುಳಿಸುವ’ ಹೇಳಿಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು’ ಎಂದು ಸಂಘಟನೆಗಳು ಒತ್ತಾಯಿಸಿವೆ.

‘ಈ ಸಂಬಂಧ ಚರ್ಚಿಸಲು 11 ಸದಸ್ಯರ ನಿಯೋಗವನ್ನು ಸ್ಥಳೀಯಾಡಳಿತವು ಆಹ್ವಾನಿಸಿತ್ತು. ಅಧಿಕಾರಿಗಳು ನಮ್ಮ ಬೇಡಿಕೆಗಳಿಗೆ ಒಪ್ಪದ ಕಾರಣ ಮಾತುಕತೆ ವಿಫಲವಾಯಿತು’ ಎಂದು ಹಿರಿಯ ರೈತ ನಾಯಕ ಜೋಗಿಂದರ್ ಸಿಂಗ್ ಉಗ್ರನ್ ಹೇಳಿದರು.

ಜಿಲ್ಲಾಧಿಕಾರಿ ನಿಶಾಂತ್ ಕುಮಾರ್ ಯಾದವ್, ಐಜಿಪಿ ಮಮತಾ ಸಿಂಗ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾರಾಮ್ ಪುನಿಯಾ ಅವರು ರೈತ ಮುಖಂಡರೊಂದಿಗೆ ನಡೆದ ಮಾತುಕತೆಯಲ್ಲಿ ಭಾಗವಹಿಸಿದ್ದರು.

ಮಾತುಕತೆ ವಿಫಲವಾಗಿದ್ದರಿಂದ ಸಚಿವಾಲಯದ ಕಡೆಗೆ ಶಾಂತಿಯುತವಾಗಿ ಮೆರವಣಿಗೆ ನಡೆಸುವಂತೆ ರೈತ ನಾಯಕರು ಕರೆಕೊಟ್ಟರು. ಮೆರವಣಿಗೆ ವೇಳೆ ಪೊಲೀಸರ ಜೊತೆ ಯಾವುದೇ ಕಾರಣಕ್ಕೂ ಸಂಘರ್ಷಕ್ಕೆ ಇಳಿಯಬಾರದು ಹಾಗೂ ಪೊಲೀಸರು ತಡೆ ಒಡ್ಡಿದ ಜಾಗದಲ್ಲಿ ಕುಳಿತು ಪ್ರತಿಭಟನೆ ಮುಂದುವರಿಸಬೇಕು ಎಂದು ತಿಳಿಸಲಾಯಿತು. ಸಾವಿರಾರು ಪ್ರತಿಭಟನಕಾರರು ರೈತ ಸಂಘದ ಧ್ವಜಗಳನ್ನು ಹಿಡಿದು ಹೆಜ್ಜೆಹಾಕಿದರು. ಈ ಮಾರ್ಗದಲ್ಲಿ ಹಲವಾರು ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು.  

ಇದಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ರೈತ ನಾಯಕ ರಾಕೇಶ್ ಟಿಕಾಯತ್, ಪ್ರತಿಭಟನನಿರತ ರೈತರ ಮೇಲೆ ಹಲ್ಲೆ ಮಾಡಲು ಪೊಲೀಸರಿಗೆ ಸೂಚನೆಗಳನ್ನು ನೀಡಿದ್ದ ಐಎಎಸ್ ಅಧಿಕಾರಿಯನ್ನು ಅಮಾನತು ಮಾಡುವಂತೆ ಒತ್ತಾಯಿಸಿದ್ದರು.

ರಾಕೇಶ್ ಟಿಕಾಯತ್, ಬಲಬೀರ್ ಸಿಂಗ್ ರಾಜೇವಾಲ್, ಜೋಗಿಂದರ್ ಸಿಂಗ್ ಉಗ್ರನ್, ದರ್ಶನ್ ಪಾಲ್ ಮತ್ತು ಯೋಗೇಂದ್ರ ಯಾದವ್ ಸೇರಿದಂತೆ ಸಂಯುಕ್ತ ಕಿಸಾನ್ ಮೋರ್ಚಾದ (ಎಸ್‌ಕೆಎಂ) ಹಿರಿಯ ನಾಯಕರು ಸಮಾವೇಶಕ್ಕಾಗಿ ಮಂಗಳವಾರ  ಕರ್ನಾಲ್‌ಗೆ ಬಂದಿದ್ದರು. ಉತ್ತರ ಪ್ರದೇ
ಶದ ಮುಜಫ್ಫರ್‌ನಗರದಲ್ಲಿ ನಡೆದ ಬೃಹತ್ ಮಹಾಪಂಚಾಯಿತಿ ಬಳಿಕ ಈ ಸಭೆಯನ್ನು ಆಯೋಜಿಸಲಾಗಿತ್ತು.  

ಹಿಂಸಾತ್ಮಕವಾಗಿ ಲಾಠಿ ಪ್ರಹಾರ ನಡೆಸಿ ರೈತರನ್ನು ಗಾಯಗೊಳಿಸಲು ಯಾವ ಕಾನೂನಿನಲ್ಲಿ ಅವಕಾಶವಿದೆ ಎಂದು ರೈತ ಮುಖಂಡ ಯೋಗೇಂದ್ರ ಯಾದವ್ ಪ್ರಶ್ನಿಸಿದ್ದಾರೆ.

ಆಗಸ್ಟ್ 28ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ ರೈತರ ಗುಂಪಿನ ಮೇಲೆ ಹರಿಯಾಣ ಪೊಲೀಸರು ಲಾಠಿ ಪ್ರಹಾರ ಮಾಡಿದ್ದರು. ಘಟನೆಯಲ್ಲಿ 10ಕ್ಕೂ ಹೆಚ್ಚು ಪ್ರತಿಭಟನಕಾರರು ಗಾಯಗೊಂಡಿದ್ದರು. ಆದರೆ ಯಾವ ರೈತರೂ ಲಾಠಿ ಪ್ರಹಾರದಿಂದ ಮೃತಪಟ್ಟಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

ಪೊಲೀಸ್ ಬಿಗಿ ಭದ್ರತೆ

ಮಹಾಪಂಚಾಯಿತಿ ಹಿನ್ನೆಲೆಯಲ್ಲಿ ಒಂದು ದಿನ ಮುಂಚಿತವಾಗಿಯೇ ಕರ್ನಾಲ್‌ನಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಕೇಂದ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿತ್ತು.

ಮಂಗಳವಾರ ಮಧ್ಯರಾತ್ರಿಯವರೆಗೆ ಕರ್ನಾಲ್ ಹಾಗೂ ಪಕ್ಕದ ನಾಲ್ಕು ಜಿಲ್ಲೆಗಳಾದ ಕುರುಕ್ಷೇತ್ರ, ಕೈತಲ್, ಜಿಂದ್ ಮತ್ತು ಪಾಣಿಪತ್‌ನಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಸಿಆರ್‌ಪಿಸಿ ಸೆಕ್ಷನ್ 144ರ ಅಡಿಯಲ್ಲಿ ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿತ್ತು.

‘ಪ್ರತಿಭಟನೆ ನಿಲ್ಲಿಸಲು ಯತ್ನಿಸಿ’
ನವದೆಹಲಿ: ಕೇಂದ್ರದ ಮೂರು ಕೃಷಿ ಕಾಯ್ದೆಗಳಿಗೆ ಸಂಬಂಧಿಸಿ ರೈತರು ಒಂಬತ್ತು ತಿಂಗಳಿಂದ ನಡೆಸುತ್ತಿರುವ ಪ್ರತಿಭಟನೆಯನ್ನು ಕೊನೆಗೊಳಿಸಲು ಕೇಂದ್ರ ಸರ್ಕಾರವು ಯತ್ನಿಸಬೇಕು ಎಂದು ಆರ್‌ಎಸ್‌ಎಸ್‌ನ ಅಂಗ ಸಂಸ್ಥೆ ಭಾರತೀಯ ಕಿಸಾನ್‌ ಸಂಘವು (ಬಿಕೆಎಸ್‌) ಹೇಳಿದೆ.

ಸಂಯುಕ್ತ ಕಿಸಾನ್‌ ಮೋರ್ಚಾದ (ಎಸ್‌ಕೆಎಂ) ಪ್ರತಿಭಟನೆಯ ರೀತಿಯ ಬಗ್ಗೆ ಒಪ್ಪಿಗೆ ಇಲ್ಲ. ಈ ಪ್ರತಿಭಟನೆಯು ರಾಜಕೀಯ ಸ್ವರೂಪದ್ದಾಗಿದೆ ಎಂದು ಬಿಕೆಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬದ್ರಿ ನಾರಾಯಣ ಚೌಧರಿ ಹೇಳಿದ್ಧಾರೆ. ‘ಎಸ್‌ಕೆಎಂನ ಪ್ರತಿಭಟನೆಯ ಹಕ್ಕನ್ನು ನಾವು ಪ್ರಶ್ನಿಸುತ್ತಿಲ್ಲ. ಅನಿರ್ದಿಷ್ಟಾವಧಿ ಪ್ರತಿಭಟನೆಗಾಗಿ ಯಾವ ರೈತನೂ ತನ್ನ ಹೊಲವನ್ನು ಬಿಟ್ಟು ಬರಲು ಸಾಧ್ಯವಿಲ್ಲ. ಶ್ರೀಮಂತ ರೈತರಿಗೆ ಇದು ಅನ್ವಯ ಆಗದು’ ಎಂದು ಅವರು ಅಭಿ‍ಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು