ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನ; ಮೈಕೊರೆವ ಚಳಿ ಲೆಕ್ಕಿಸದ ಅನ್ನದಾತ

ಪ್ರತಿಭಟನೆಯಿಂದ ಹಿಂದೆ ಸರಿಯದ ರೈತರು
Last Updated 19 ಡಿಸೆಂಬರ್ 2020, 19:46 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮೈಕೊರೆಯುವ ಚಳಿಯಲ್ಲಿ ರೈತರ ಪ್ರತಿಭಟನೆ 24ನೇ ದಿನ ಪೂರ್ಣಗೊಳಿಸಿದೆ. ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ದೆಹಲಿಯ ಸಫ್ದರ್‌ಜಂಗ್ ವೀಕ್ಷಣಾಲಯದಲ್ಲಿ ಶನಿವಾರ 3.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಈ ಋತುವಿನ ಅತಿಕಡಿಮೆ ಉಷ್ಣಾಂಶ ಎಂದು ತಿಳಿಸಿದೆ.

ಕೆಲವು ಕಡೆ ಇದಕ್ಕಿಂತ ಕಡಿಮೆ ತಾಪಮಾನ ಕಂಡುಬಂದಿದೆ. ಲೋಧಿ ರಸ್ತೆ ಮತ್ತು ಅಯಾನಗರ್‌ನಲ್ಲಿ ಕ್ರಮವಾಗಿ 3.3 ಡಿಗ್ರಿ ಸೆಲ್ಸಿಯಸ್ ಮತ್ತು 3.4 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿದೆ. ಚಳಿಯ ನಡುವೆಯೂ ಮುಂದುವರಿದಿರುವ ರೈತರ ಪ್ರತಿಭಟನೆಯಿಂದ ವಾಹನ ಸವಾರರು ತೊಂದರೆ ಎದುರಿಸುತ್ತಿದ್ದಾರೆ.

ಪಂಜಾಬ್ ಹಾಗೂ ಹರಿಯಾಣದಿಂದ ಬಂದಿರುವ ಸಾವಿರಾರು ರೈತರು ಟಿಕ್ರಿ ಹಾಗೂ ಸಿಂಘು ಗಡಿಯಲ್ಲಿ ಠಿಕಾಣಿ ಹೂಡಿದ್ದಾರೆ. ರೈತರು ಮತ್ತು ಕೇಂದ್ರ ಸರ್ಕಾರದ ನಡುವಿನ ಮಾತುಕತೆ ಫಲಪ್ರದವಾಗದ ಕಾರಣ, ಬಿಕ್ಕಟ್ಟು ಮುಂದುವರಿದಿದೆ.

ಇ–ಪುಸ್ತಕ ಓದುವಂತೆ ಪ್ರಧಾನಿ ಸಲಹೆ: ಕೃಷಿ ಸುಧಾರಣೆಗಳು ರೈತರಿಗೆ ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ಎತ್ತಿ ತೋರಿಸುವ ಇ-ಪುಸ್ತಕವನ್ನು ಓದುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಜನರಲ್ಲಿ ಮನವಿ ಮಾಡಿದ್ದಾರೆ. ಇ–ಪುಸ್ತಕಗಳನ್ನು ಹೆಚ್ಚು ಜನರೊಂದಿಗೆ ಹಂಚಿಕೊಳ್ಳುವಂತೆ ಕೋರಿದ್ದಾರೆ.

ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಇ-ಪುಸ್ತಕವನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದ್ದು, ಸೆಪ್ಟೆಂಬರ್‌ನಲ್ಲಿ ಜಾರಿಗೆ ತಂದ ಸುಧಾರಣೆಗಳಿಂದ ಲಾಭ ಪಡೆದ ರೈತರ ಯಶಸ್ಸಿನ ಕಥೆಗಳನ್ನು ತಿಳಿಸುತ್ತವೆ ಎಂದಿದ್ದಾರೆ.

ಎಸ್‌ಪಿ, ಬಿಎಸ್‌ಪಿ ತರಾಟೆ (ಲಖನೌ ವರದಿ): ಕೃಷಿ ಮಾರುಕಟ್ಟೆ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತಂತೆ ಕೇಂದ್ರ ಸರ್ಕಾರವನ್ನು ಎಸ್‌ಪಿ ಹಾಗೂ ಬಿಎಸ್‌ಪಿ ಶನಿವಾರ ತರಾಟೆಗೆ ತೆಗೆದುಕೊಂಡಿವೆ. ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಒತ್ತಾಯಿಸಿದ್ದಾರೆ.

‘ಕೃಷಿ ಕಾನೂನುಗಳನ್ನು ಜಾರಿ ಮಾಡುವ ಮೊದಲು ರೈತರಿಗೆ ಸಣ್ಣ ಸುಳಿವನ್ನೂ ಬಿಜೆಪಿ ನೀಡಿರಲಿಲ್ಲ. ಈಗ, ರೈತ ಸಮಾವೇಶ ನಡೆಸಿ ಕಾಯ್ದೆಯ ಪ್ರಯೋಜನಗಳನ್ನು ಅರ್ಥಮಾಡಿಸುತ್ತೇವೆ ಎಂಬುದಾಗಿ ಅವರು ನಟಿಸುತ್ತಿದ್ದಾರೆ’ ಎಂದು ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.

ಬಿಜೆಪಿಯ ಬೀರೇಂದ್ರ‌ ಸಿಂಗ್ ಬೆಂಬಲ
(ಚಂಡೀಗಡ ವರದಿ):
ಕೇಂದ್ರದ ಮಾಜಿ ಸಚಿವ ಮತ್ತು ಬಿಜೆಪಿ ಹಿರಿಯ ಮುಖಂಡ ಬೀರೇಂದ್ರ ಸಿಂಗ್ ಅವರು ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.‘ಹೊಸ ಕಾಯ್ದೆಗಳು ತಮ್ಮ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ ಎಂಬ ಕಾರಣಕ್ಕೆ ರೈತರು ಭೀತಿಗೊಂಡಿದ್ದಾರೆ, ಚಿಂತಿತರಾಗಿದ್ದಾರೆ. ಈ ಸಂದರ್ಭದಲ್ಲಿ ರೈತರೊಂದಿಗೆ ನಿಲ್ಲುವುದು ನೈತಿಕ ಜವಾಬ್ದಾರಿಯಾಗಿದೆ’ ಎಂದು ಬೀರೇಂದ್ರ ಸಿಂಗ್ ಹೇಳಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ರೈತರ ಹಿತಾಸಕ್ತಿ ಧ್ಯೇಯವಾಗಿರಿಸಿಕೊಂಡಿದ್ದ ರಾಜಕಾರಣಿ ಸರ್ ಚೋಟು ರಾಮ್ ಅವರ ಮೊಮ್ಮಗ ಬೀರೇಂದ್ರ ಸಿಂಗ್. ಹಾಲಿ ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್ ಅವರು ಬೀರೇಂದ್ರ ಅವರ ಮಗ.

‘ನಾನು ರಾಜಕೀಯದಲ್ಲಿ ಏನೇ ಸಾಧಿಸಿದ್ದರೂ ಸರ್ ಚೋಟು ರಾಮ್ ಅವರ ಮೊಮ್ಮಗನಾಗಿರದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ’ ಎಂದು ಬೀರೇಂದ್ರ ನುಡಿದಿದ್ದಾರೆ.

ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ದೆಹಲಿ ಗಡಿಯ ಹರಿಯಾಣದ ಜಿಲ್ಲೆಯಲ್ಲಿ ತಮ್ಮ ಬೆಂಬಲಿಗರ ಜೊತೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅವರು ಘೋಷಿಸಿದ್ದಾರೆ. ರೈತರ ಬೆಂಬಲಾರ್ಥವಾಗಿ ತಮ್ಮ ಬೆಂಬಲಿಗರ ಜೊತೆ ರೋಹ್ಟಕ್‌ನಲ್ಲಿ ಶುಕ್ರವಾರ ಅವರು ಪ್ರತಿಭಟನೆ ನಡೆಸಿದ್ದರು. ಚೌಧರಿ ಚೋಟು ರಾಮ್ ವಿಚಾರ ಮಂಚ್ ವೇದಿಕೆಯಡಿ ಅವರು ಧರಣಿ ನಡೆಸಿದ್ದರು.

*
ರೈತರೊಂದಿಗೆ ವ್ಯವಹರಿಸುವಾಗ ಕೇಂದ್ರ ಸರ್ಕಾರವು ಸಹಾನುಭೂತಿಯ ವಿಧಾನ ಅಳವಡಿಸಿಕೊಳ್ಳಬೇಕೇ ವಿನಾ ಹಟಮಾರಿಯಾಗಬಾರದು.
-ಮಾಯಾವತಿ, ಬಿಎಸ್‌ಪಿ ನಾಯಕಿ

*
ಪಂಜಾಬ್‌ನಲ್ಲಿ ನಿಮ್ಮ ಸರ್ಕಾರ, ನಿಮ್ಮ ಮುಖ್ಯಮಂತ್ರಿಗಳು ದೊಡ್ಡ ಕಂಪನಿಗಳಿಗೆ ಗುತ್ತಿಗೆ ಕೃಷಿಗೆ ಅನುಮತಿ ನೀಡಿದ್ದು ಏಕೆ?
-ವಿಜಯ್ ರೂಪಾಣಿ, ಗುಜರಾತ್ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT