ಶನಿವಾರ, ಜೂನ್ 25, 2022
27 °C

ರೈತ ಪ್ರತಿಭಟನೆಗೆ ಹೊಸ ತಿರುವು? ಜೂ.9ರಂದು ಮಮತಾ ಜೊತೆ ಟಿಕಾಯತ್ ಚರ್ಚೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಫತೇಹಾಬಾದ್‌ (ಹರಿಯಾಣ): ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಅವರು ಜೂನ್ 9ರಂದು ಕೋಲ್ಕತ್ತದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆಗೆ ಮಹತ್ವದ ಚರ್ಚೆ ನಡೆಸಲಿದ್ದು, ರೈತ ಹೋರಾಟಕ್ಕೆ ಹೊಸ ತಿರುವು ಸಿಗುವ ಸಾಧ್ಯತೆಗಳಿವೆ.

ಕೇಂದ್ರ ಸರ್ಕಾರದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ತಂತ್ರಗಾರಿಕೆಯನ್ನು ಹೆಣೆಯುವ ನಿಟ್ಟಿನಲ್ಲಿ ಮಮತಾ ಜೊತೆಗೆ ಟಿಕಾಯತ್ ಚರ್ಚೆ ನಡೆಸಲಿದ್ದಾರೆ.

ರಾಕೇಶ್ ಟಿಕಾಯತ್ ಅವರು ಜೂನ್ 9ರಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಲಿದ್ದಾರೆ. ಇತ್ತೀಚಿನ ವಿಧಾನಸಭಾ ಚುನಾವಣಾ ವಿಜಯಕ್ಕೆ ಮಮತಾ ಅವರನ್ನು ಅಭಿನಂದಿಸಲಿದ್ದಾರೆ. ರೈತರ ಪ್ರತಿಭಟನೆ ಕುರಿತಾಗಿಯೂ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: 

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯಕ್ಕೆ ಭೇಟಿ ನೀಡಿದ್ದ ಟಿಕಾಯತ್, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪರ ಮತಯಾಚಿಸಿದ್ದರು ಎಂಬುದು ಇಲ್ಲಿ ಗಮನಾರ್ಹವೆನಿಸುತ್ತದೆ.

ಹೊಸ ಕೃಷಿ ಕಾಯ್ದೆಗಳ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಧ್ವನಿಯೆತ್ತಿದ್ದಾರೆ. ಅಲ್ಲದೆ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಕಳೆದ ವರ್ಷ ನವೆಂಬರ್‌ನಿಂದ ರೈತರು ಪ್ರತಿಭಟನೆ ನಿರತವಾಗಿರುವ ದೆಹಲಿ ಗಡಿಗೆ ಹಲವಾರು ಟಿಎಂಸಿ ಸಂಸದರು ಭೇಟಿ ನೀಡಿದ್ದರು. ಈಗ ಕೋವಿಡ್ ಪರಿಸ್ಥಿತಿ ಸುಧಾರಿಸುತ್ತಿರುವುದರಿಂದ ಪ್ರತಿಭಟನೆಯನ್ನು ತೀವ್ರಗೊಳಿಸಲು ಯೋಜಿಸುತ್ತಿದ್ದಾರೆ.

ಏತನ್ಮಧ್ಯೆ ಬಂಧಿತ ರೈತರ ಬಿಡುಗಡೆಗೆ ಆಗ್ರಹಿಸಿ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ಭಾರಿ ಸಂಖ್ಯೆ ರೈತರು ಫತೇಹಾಬಾದ್‌ನ ಸದರ್ ಪೊಲೀಸ್ ಠಾಣೆ ಮುಂಭಾಗದಲ್ಲಿ ಧರಣಿ ನಡೆಸುತ್ತಿದ್ದಾರೆ.

ಜನನಾಯಕ ಜನತಾ ಪಕ್ಷದ ಶಾಸಕ ದೇವೇಂದ್ರ ಸಿಂಗ್ ಬಬ್ಲಿ ನಿವಾಸಕ್ಕೆ ಮುತ್ತಿಗೆ ಹಾಕಲು ರೈತರು ಬುಧವಾರ ರಾತ್ರಿ ಯತ್ನಿಸಿದ್ದರು. ಇದಕ್ಕೆ ಸಂಬಂಧಿಸಿ ವಿಕಾಸ್ ಮತ್ತು ರವಿ ಆಜಾದ್ ಅವರನ್ನು ಪೊಲೀಸರು ಬಂಧಿಸಿದ್ದರು.

ಅತ್ತ ದೆಹಲಿ ಗಡಿಯಲ್ಲಿ ಕೇಂದ್ರ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ಕಳೆದ ಆರು ತಿಂಗಳಿನಿಂದ ಪ್ರತಿಭಟಿಸುತ್ತಿದ್ದಾರೆ. ಸರ್ಕಾರದ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದರೂ ಬಿಕ್ಕಟ್ಟು ಇತ್ಯರ್ಥಗೊಂಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು