ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡರು ಲೋಕಸಭೆಯಲ್ಲಿ ಮಹಿಳಾ ಮೀಸಲು ಮಸೂದೆ ಮಂಡಿಸಿ ಇಂದಿಗೆ 25 ವರ್ಷ!

Last Updated 12 ಸೆಪ್ಟೆಂಬರ್ 2021, 19:53 IST
ಅಕ್ಷರ ಗಾತ್ರ

ಲೋಕಸಭೆಯಲ್ಲಿ ಹಾಗೂ ರಾಜ್ಯ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು 1996ರಲ್ಲಿ ಎಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ಲೋಕಸಭೆಯಲ್ಲಿ ಮಂಡಿಸಿದ್ದರು. ಈ ಮಹಿಳಾ ಮೀಸಲು ಮಸೂದೆ ಮಂಡನೆಯಾಗಿ ಬರೋಬ್ಬರಿ ಎರಡೂವರೆ ದಶಕಗಳೇ ಕಳೆದು ಹೋಗಿವೆ. ಆದರೆ ಮಸೂದೆ ಮಾತ್ರ ಇಂದಿಗೂ ಅಂಗೀಕಾರಗೊಂಡಿಲ್ಲ.

ಮಹಿಳಾ ಮೀಸಲು ಮಸೂದೆ: ನಡೆದು ಬಂದ ಹಾದಿ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ಕಲ್ಪಿಸಿಕೊಡುವುದಕ್ಕೆ ಸಂಬಂಧಿಸಿದ ಈ ಮಸೂದೆ 1996ರಲ್ಲಿ ಮಂಡನೆಯಾದ ಬಳಿಕ ಅದನ್ನು ಜಂಟಿ ಸಂಸದೀಯ ಸಮಿತಿಯ ಪರಾಮರ್ಶೆಗೆ ಒಪ್ಪಿಸಲಾಗಿತ್ತು. ಅಷ್ಟರಲ್ಲಿ ಲೋಕಸಭೆ ವಿಸರ್ಜನೆಯಾಗುವುದರೊಂದಿಗೆ ಮಸೂದೆ ಮೂಲೆಗುಂಪಾಯಿತು. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರ ಮತ್ತೆ ಮಸೂದೆ ಮಂಡಿಸಿತು. ಆಗಲೂ ಅನುಮೋದನೆ ಪಡೆಯುವುದು ಸಾಧ್ಯವಾಗಲಿಲ್ಲ. 2008ರಲ್ಲಿ ಯುಪಿಎ ಸರ್ಕಾರ ಮಸೂದೆಗೆ ಅನುಮೋದನೆ ಪಡೆಯಲು ನಡೆಸಿದ ಪ್ರಯತ್ನವೂ ವಿಫಲವಾಗಿತ್ತು.

ಕೊನೆಗೆ 2010ರ ಮಾರ್ಚ್ 9ರಂದು ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯಸಭೆಯಲ್ಲಿ ಬಿಜೆಪಿ ಹಾಗೂ ಎಡ ಪಕ್ಷಗಳ ಸಹಮತದೊಂದಿಗೆ ಮಹಿಳಾ ಮೀಸಲು ಮಸೂದೆಗೆ ಅನುಮೋದನೆ ಪಡೆದು ಹೊಸ ಇತಿಹಾಸವನ್ನೇ ನಿರ್ಮಿಸಿತು. ಆದರೂ ಲೋಕಸಭೆಯಲ್ಲಿ ಅನುಮೋದನೆ ಪಡೆಯುವುದು ಸಾಧ್ಯವಾಗಲಿಲ್ಲ. ಹೀಗಾಗಿ 25 ವರ್ಷಗಳೇ ಕಳೆದರೂ ಕೂಡ ಮಸೂದೆ ಮತ್ತೆ ನನೆಗುದಿಗೆ ಬಿದ್ದಿದೆ.

ಮಸೂದೆಯಲ್ಲೇನಿದೆ?

* ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ

* ಮೀಸಲು ಸ್ಥಾನಗಳನ್ನು ಸಂಸತ್ ಸೂಚಿಸಿದ ಪ್ರಾಧಿಕಾರವೊಂದು ನಿರ್ಧರಿಸಬೇಕು

* ಮಹಿಳೆಯರಿಗೆ ಮೀಸಲಿರಿಸಿದ ಸ್ಥಾನಗಳಲ್ಲಿ ಮೂರನೇ ಒಂದನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಾಗಿ ಮೀಸಲಿಡಬೇಕು

* ಮೀಸಲಿರಿಸಿದ ಸ್ಥಾನಗಳನ್ನು ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಯ ವಿವಿಧ ಕ್ಷೇತ್ರಗಳಿಗೆ ರೊಟೇಶನ್ ಆಧಾರದಲ್ಲಿ ಹಂಚಿಕೆ ಮಾಡಬೇಕು

* ಕಾನೂನಾಗಿ ರೂಪುಗೊಂಡ 15 ವರ್ಷಗಳ ಬಳಿಕ ಮೀಸಲು ಮಸೂದೆ ಅಸ್ತಿತ್ವ ಕಳೆದುಕೊಳ್ಳಬೇಕು

2019ರಲ್ಲಿ 78 ಮಹಿಳೆಯರು ಲೋಕಸಭೆಗೆ ಆಯ್ಕೆಯಾದಾಗ ಒಂದು ಚಿಕ್ಕ ಸಂಭ್ರಮಾಚರಣೆಯೇ ನಡೆದಿತ್ತು. ಇದು ಸಂಸತ್ತಿನ ಕೆಳಮನೆಯ ಒಟ್ಟು ಸಾಮರ್ಥ್ಯದ ಶೇ 14 ರಷ್ಟಾಗಿತ್ತು. ಇದು ಈವರೆಗಿನ ಅತ್ಯಧಿಕ ಶೇಕಡವಾರು ಪ್ರಮಾಣವಾಗಿತ್ತು. ಹೀಗಿದ್ದರೂ ಅಂಕಿಅಂಶಗಳನ್ನು ಗಮನಿಸಿದಾಗ ದೇಶದ ಕಾನೂನು ರಚನೆಯಲ್ಲಿ ಮಹಿಳಾ ಪ್ರಾತಿನಿಧ್ಯ ಕಡಿಮೆ ಇರುವುದು ಕಂಡುಬರುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಕೂಡ ಶಾಸಕಾಂಗಗಳಲ್ಲಿ ಮಹಿಳೆಯರ ಪ್ರಾತಿನಿಧ್ಯದ ಪ್ರಮಾಣಕ್ಕೆ ಸಂಬಂಧಿಸಿದಂತೆ ದೇಶದ ಜಾಗತಿಕ ಶ್ರೇಯಾಂಕವು ಕಡಿಮೆಯಾಗಿದೆ. ಈ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆಯಾದ ಅಂತರರಾಷ್ಟ್ರೀಯ ಸಂಸದೀಯ ಒಕ್ಕೂಟದ ದತ್ತಾಂಶಗಳ ಪ್ರಕಾರ, ಕಾನೂನಿನಲ್ಲಿ ಮಹಿಳಾ ಪ್ರಾತಿನಿಧ್ಯದ ವಿಚಾರದಲ್ಲಿ ಭಾರತವು 148ನೇ ಸ್ಥಾನದಲ್ಲಿದೆ. 1998 ರಲ್ಲಿ ಅದು 95 ರಲ್ಲಿತ್ತು.

ಕಳೆದ ಏಳು ದಶಕಗಳಲ್ಲಿ, ಶಾಸಕಾಂಗಗಳಲ್ಲಿನ ಮಹಿಳೆಯರ ಸಂಖ್ಯೆಯಲ್ಲಿ ಭಾರತವು ಹಲವು ದೇಶಗಳಿಗಿಂತ ಹಿಂದುಳಿದಿದೆ. 1952 ರಲ್ಲಿ, ದೇಶವು ಮೊದಲ ಲೋಕಸಭಾ ಚುನಾವಣೆಯನ್ನು ಎದುರಿಸಿದಾಗ ಸುಮಾರು ಐದು ಪ್ರತಿಶತದಷ್ಟು ಸಂಸದರು ಮಹಿಳೆಯರಾಗಿದ್ದರು. ಅದೇ ವೇಳೆ, ಅಮೆರಿಕದ ಸಂಸತ್ತಿನಲ್ಲಿ ಕೇವಲ ಎರಡು ಪ್ರತಿಶತ ಮಹಿಳೆಯರು ಮತ್ತು ಇಂಗ್ಲೆಂಡ್‌ ಸಂಸತ್ತಿನಲ್ಲಿ ಶೇಕಡಾ ಮೂರರಷ್ಟು ಮಹಿಳೆಯರು ಮಾತ್ರ ಇದ್ದರು. ಸದ್ಯ ಅಮೆರಿಕ ಮತ್ತು ಇಂಗ್ಲೆಂಡ್‌ನಲ್ಲಿನ ಮಹಿಳಾ ಪ್ರಾತಿನಿಧ್ಯವು ಏರಿಕೆಯಾಗಿದ್ದು, ಕ್ರಮವಾಗಿ ಶೇಕಡಾ 27.33 ಮತ್ತು ಶೇಕಡಾ 33.9ರಷ್ಟಿದೆ.

ಒಂದು ಅಂದಾಜಿನ ಪ್ರಕಾರ, ಸದ್ಯ ಭಾರತದಲ್ಲಿ 4,000 ಕ್ಕಿಂತ ಹೆಚ್ಚು ಶಾಸಕರಿಗೆ ಕೇವಲ ಒಂಬತ್ತು ಪ್ರತಿಶತದಷ್ಟು ಮಹಿಳೆಯರು ಮಾತ್ರ ಇದ್ದಾರೆ ಮತ್ತು ಒಬ್ಬ ಮಹಿಳಾ ಮುಖ್ಯಮಂತ್ರಿ ಮಾತ್ರ ಇದ್ದಾರೆ.

ಈ ಅಂಕಿಅಂಶಗಳು ಶಾಸಕಾಂಗ ಸಂಸ್ಥೆಗಳಲ್ಲಿ ಪ್ರಾತಿನಿಧ್ಯವನ್ನು ಕಂಡುಕೊಳ್ಳಲು ಹೆಣಗಾಡುತ್ತಿರುವ ಮಹಿಳೆಯ ಕಥೆಯನ್ನು ತೆರೆದಿಡುತ್ತದೆ. ಹೆಚ್ಚಿನ ಮಹಿಳೆಯರನ್ನು ಶಾಸಕಾಂಗಕ್ಕೆ ಕರೆತರುವಲ್ಲಿ ಭಾರತೀಯ ರಾಜಕೀಯ ವ್ಯವಸ್ಥೆಯು ವಿಫಲವಾಗಿರುವುದು ಮಹಿಳಾ ಮಸೂದೆಯನ್ನು ಅಂಗೀಕರಿಸುವಂತೆ ಪದೇ ಪದೇ ಬೇಡಿಕೆ ಮುಂದಿಡಲು ಆಧಾರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT