ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಶಿಕ್ಷಣ: ತಮಿಳುನಾಡು, ಕೇರಳ ಅತ್ಯುತ್ತಮ

ಶಿಕ್ಷಣ ಸಚಿವಾಲಯದ 2019–20ನೇ ಸಾಲಿನ ಕಾರ್ಯಕ್ಷಮತೆ ಶ್ರೇಣೀಕರಣ ಸೂಚ್ಯಂಕದಲ್ಲಿ ಎ++
Last Updated 6 ಜೂನ್ 2021, 16:23 IST
ಅಕ್ಷರ ಗಾತ್ರ

ನವದೆಹಲಿ: ಶಾಲಾ ಶಿಕ್ಷಣದ ಗುಣಮಟ್ಟ ಗುರುತಿಸುವ ‘ಕಾರ್ಯಕ್ಷಮತೆ ಶ್ರೇಣಿಕೃತ ಸೂಚ್ಯಂಕ’ದಲ್ಲಿ (ಪಿಜಿಐ) ಪಂಜಾಬ್‌, ತಮಿಳುನಾಡು, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು ಹಾಗೂ ಕೇರಳ ಎ++ ಪಡೆದಿವೆ.

ಶಿಕ್ಷಣ ಸಚಿವಾಲಯ 2019–20ನೇ ಸಾಲಿನ ಪಿಜಿಐ ವರದಿಯನ್ನು ಭಾನುವಾರ ಬಿಡುಗಡೆ ಮಾಡಿದೆ. 70 ಮಾನದಂಡಗಳ ಆಧಾರದ ಮೇಲೆ ಶ್ರೇಣಿಕೃತ ಸೂಚ್ಯಂಕ ನೀಡಲಾಗಿದೆ.

ಕರ್ನಾಟಕದ ಶಿಕ್ಷಣ ಗುಣಮಟ್ಟ ಹಿಂದಿನ ವರ್ಷಗಳಿಗೆ ಹೋಲಿಸಿದಾಗ ಅಲ್ಪಮಟ್ಟಿಗೆ ಸುಧಾರಣೆ ಕಂಡಿದ್ದು, ‘ಎ’ ಸೂಚ್ಯಂಕ ಪಡೆದಿದೆ. ಅಂದರೆ, ಗ್ರೇಡ್‌ 1ರಲ್ಲಿದೆ.

ದೆಹಲಿ, ಗುಜರಾತ್‌, ಹರಿಯಾಣ, ರಾಜಸ್ಥಾನ, ಪುದುಚೇರಿ, ದಾದ್ರಾ ಮತ್ತು ನಗರ ಹವೇಲಿ ಎ+ ವಿಭಾಗದಲ್ಲಿ ಸ್ಥಾನ ಪಡೆದಿವೆ.

ಆಡಳಿತ ಮತ್ತು ನಿರ್ವಹಣೆಯಲ್ಲಿ ಪಂಜಾಬ್‌ ಗರಿಷ್ಠ ಅಂಕಗಳನ್ನು ಪಡೆದಿದೆ. ಮೂಲಸೌಕರ್ಯಗಳು ಮತ್ತು ಸೌಲಭ್ಯಗಳ ವಿಷಯದಲ್ಲಿ ಬಿಹಾರ ಮತ್ತು ಮೇಘಾಲಯ ಅತಿ ಕಡಿಮೆ ಅಂಕಗಳನ್ನು ಪಡೆದಿವೆ.

13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮೂಲಸೌಕರ್ಯಗಳು ಮತ್ತು ಇತರ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಶೇಕಡ 10ರಷ್ಟು ಸುಧಾರಣೆಯಾಗಿವೆ. ಅದರಲ್ಲೂ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು ಹಾಗೂ ಒಡಿಶಾ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಮಹತ್ವದ ಸುಧಾರಣೆ ಕ್ರಮಗಳನ್ನು ಕೈಗೊಂಡಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆಡಳಿತ ಪ್ರಕ್ರಿಯೆಯಲ್ಲಿ ಶೇಕಡ 10ರಷ್ಟು ಮಾತ್ರ ಸುಧಾರಣೆ ಕ್ರಮಗಳನ್ನು ಕೈಗೊಂಡಿವೆ ಎಂದು ತಿಳಿಸಿದೆ.

‘ಶಿಕ್ಷಕರು, ಪ್ರಾಂಶುಪಾಲರು ಮತ್ತು ಆಡಳಿತ ಸಿಬ್ಬಂದಿ ಕೊರತೆ, ನಿಯಮಿತವಾಗಿ ಶಾಲೆಗಳ ತಪಾಸಣೆ ಮಾಡದಿರುವುದು, ಸಕಾಲಕ್ಕೆ ಹಣಕಾಸು ಲಭ್ಯವಾಗದಿರುವುದು ಸೇರಿದಂತೆ ಹಲವು ಸಮಸ್ಯೆಗಳಿಂದ ದೇಶದ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಅಡ್ಡಿಯಾಗಿವೆ’ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

’ಸೂಚ್ಯಂಕದ ಆಧಾರದ ಮೇಲೆ ಕೊರತೆಗಳನ್ನು ವಸ್ತುನಿಷ್ಠವಾಗಿ ಮತ್ತು ನಿಯಮಿತವಾಗಿ ಪರಿಶೀಲಿಸಿ ನಿವಾರಿಸಿಕೊಳ್ಳಬಹುದು. ಜತೆಗೆ ಯಾವ ವಲಯಕ್ಕೆ ಆದ್ಯತೆ ನೀಡಬೇಕು ಎನ್ನುವುದು ಸಹ ರಾಜ್ಯಗಳಿಗೆ ತಿಳಿಯಲಿದೆ’ ಎಂದು ಸಲಹೆ ನೀಡಲಾಗಿದೆ.

ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬಹುತೇಕ ರಾಜ್ಯಗಳು ಸೂಚ್ಯಂಕದಲ್ಲಿ ಸುಧಾರಣೆ ಕಂಡಿವೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಿಜಿಐ ಅನ್ನು ಮೊದಲ ಬಾರಿ 2019ರಲ್ಲಿ ಬಿಡುಗಡೆ ಮಾಡಲಾಗಿತ್ತು. 2017–18ನೇ ಶೈಕ್ಷಣಿಕ ವರ್ಷವನ್ನು ಆಧಾರವಾಗಿಟ್ಟುಕೊಂಡು ಈ ಪಿಜಿಐ ವರದಿ ಬಿಡುಗಡೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT