ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ ಅಯೋಧ್ಯೆಯತ್ತ ಗಮನ

ದೀಪೋತ್ಸವಕ್ಕೆ ಮೋದಿ ಭೇಟಿ ಸಾಧ್ಯತೆ
Last Updated 8 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ಪುರಾಣ ಪ್ರಸಿದ್ಧ ಅಯೋಧ್ಯೆ ಪಟ್ಟಣವು ಮತ್ತೆ ರಾಜಕೀಯ ಗಮನ ಕೇಂದ್ರವಾಗಿ ಬದಲಾಗುತ್ತಿದೆ. ಅಯೋಧ್ಯೆಯಲ್ಲಿ ಕೈಗೆತ್ತಿಕೊಳ್ಳಲಾಗಿದ್ದ ವಿವಿಧ ಯೋಜನೆಗಳನ್ನು ಫೂರ್ಣಗೊಳಿಸಲು ಉತ್ತರ ಪ್ರದೇಶ ಸರ್ಕಾರವು ಭಾರಿ ಉತ್ಸಾಹ ತೋರುತ್ತಿದೆ. ಈ ಬಾರಿಯ ದೀಪಾವಳಿಗೆ ಮೊದಲು ಬೃಹತ್‌ ‘ದೀಪೋತ್ಸವ’ ನಡೆಸಲು ಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂದರ್ಭದಲ್ಲಿ ಅಯೋಧ್ಯೆಗೆ ಭೇಟಿ ನೀಡುವ ಸಾಧ್ಯತೆ ಇದೆ. ಉತ್ತರ ಪ್ರದೇಶ ವಿಧಾನಸಭೆಗೆ 2022ರ ಮಾರ್ಚ್‌ ಒಳಗೆ ಚುನಾವಣೆ ನಡೆಯಬೇಕಿದೆ.

ದೀಪೋತ್ಸವಕ್ಕಾಗಿ 7.50 ಲಕ್ಷ ದೀಪಗಳನ್ನು ಉರಿಸಲು ಅಯೋಧ್ಯೆ ಜಿಲ್ಲಾಡಳಿತ ಯೋಜನೆ ಹಾಕಿಕೊಂಡಿದೆ. ಈ ಮೂಲಕ ದಾಖಲೆಯೊಂದರ ಸೃಷ್ಟಿಯ ಉದ್ದೇಶವೂ ಇದೆ. ಎರಡು ದಿನಗಳ ದೀಪಾವಳಿ ಉತ್ಸವಕ್ಕೆ ದೀಪೋತ್ಸವದ ಮೂಲಕ ಚಾಲನೆ ನೀಡುವ ಯೋಚನೆಯೂ ಜಿಲ್ಲಾಡಳಿತಕ್ಕೆ ಇದೆ ಎನ್ನಲಾಗಿದೆ. ದೀಪೋತ್ಸವ ಕಾರ್ಯಕ್ರಮದ ವಿನ್ಯಾಸಕ್ಕಾಗಿ ಬಾಲಿವುಡ್‌ನ ಪ್ರಸಿದ್ಧ ಕಲಾ ನಿರ್ದೇಶಕರೊಬ್ಬರನ್ನು ಸಂಪರ್ಕಿಸಲಾಗಿದೆ ಎಂದು ಮೂಲಗಳು ಹೇಳಿವೆ. ಪ್ರಧಾನಿ ಮೋದಿ ಅವರು ದೀಪೋತ್ಸವದಲ್ಲಿ ಭಾಗಿಯಾಗುವ ಬಗ್ಗೆ ಗೊತ್ತಿಲ್ಲ ಎಂದು ಜಿಲ್ಲಾಡಳಿತವು ಹೇಳಿದೆ. ಆದರೆ, ಪ್ರಧಾನಿ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕದ ಮೂಲಗಳು ತಿಳಿಸಿವೆ.

ಕೇಂದ್ರದ ಸಚಿವರು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಲ್ಲದೆ, ಪ್ರಧಾನಿ ಮೋದಿ ಅವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದು ಬಿಜೆಪಿಯ ಮುಖಂಡರೊಬ್ಬರು ಹೇಳಿದ್ದಾರೆ.

ರಾಮಾಯಣದ ಕತೆಯನ್ನು ನಾಟಕ ರೂಪದಲ್ಲಿ ಹೇಳುವ ರಾಮಲೀಲಾ ಕಾರ್ಯಕ್ರಮವನ್ನು ನಡೆಸಲು ಜಿಲ್ಲಾಡಳಿತ ಉದ್ದೇಶಿಸಿದೆ. ಬಿಜೆಪಿ ಸಂಸದ ಮತ್ತು ಭೋಜ್‌ಪುರಿ ಸಿನಿಮಾ ನಟ ರವಿಕಿಶನ್‌ ಅವರು ಪರಶುರಾಮನ ಪಾತ್ರ ನಿರ್ವಹಿಸಲಿದ್ದಾರೆ ಎಂದು ಹೇಳಲಾಗಿದೆ.

‘ಅಯೋಧ್ಯೆಯು ಶ್ರೀರಾಮನ ಊರು. ಲಕ್ಷಾಂತರ ಹಿಂದೂ ತೀರ್ಥಯಾತ್ರಿಕರು ಇಲ್ಲಿಗೆ ಬರುತ್ತಾರೆ. ಹಾಗಾಗಿ, ಅಯೋಧ್ಯೆಯ ಮುಖಚಹರೆಯನ್ನೇ ಬದಲಿಸಲು ಬಯಸಿದ್ದೇವೆ. ಈ ಹಿಂದಿನ ಸರ್ಕಾರಗಳು ಈ ಕೆಲಸಗಳನ್ನು ನಿರ್ಲಕ್ಷಿಸಿದ್ದವು’ ಎಂದು ಅಯೋಧ್ಯೆಯ ಬಿಜೆಪಿ ಸಂಸದ ಲಲ್ಲು ಸಿಂಗ್‌ ಹೇಳಿದ್ಧಾರೆ.

ಬಿಎಸ್‌ಪಿ ತನ್ನ ಪ್ರಬುದ್ಧ ಸಮ್ಮೇಳನ (ಬ್ರಾಹ್ಮಣ ಸಮಾವೇಶ) ಸರಣಿಯನ್ನು ಅಯೋಧ್ಯೆಯಿಂದಲೇ ಆರಂಭಿಸಿತ್ತು.

ಕಾಮಗಾರಿ ತ್ವರಿತಕ್ಕೆ ಸೂಚನೆ

ಅಯೋಧ್ಯೆಯಲ್ಲಿ ಗುರುತಿಸಲಾಗಿರುವ ವಿವಿಧ ಧಾರ್ಮಿಕ ಕೇಂದ್ರಗಳ ನವೀಕರಣ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಲು ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರವು ಸೂಚಿಸಿದೆ. ಅಯೋಧ್ಯೆ ರೈಲು ನಿಲ್ದಾಣದ ಕಾಮಗಾರಿ ಯನ್ನೂ ಬೇಗ ಮುಗಿಸಲು ತಿಳಿಸಲಾಗಿದೆ. ಅಯೋಧ್ಯೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಶ್ರೀರಾಮ ವಿಮಾನ ನಿಲ್ದಾಣದ ಕಾಮಗಾರಿ ಮುಂದಿನ ತಿಂಗಳು ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT