ಶುಕ್ರವಾರ, ಆಗಸ್ಟ್ 12, 2022
27 °C

ಪ್ರಣವ್‌: ಕಾಂಗ್ರೆಸ್‌ ಎಲೆ ಮೇಲಿನ ಜಲಬಿಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರ ಣವ್‌ ಮುಖರ್ಜಿ, ಅತಿ ವಿರಳ ರಾಜಕಾರಣಿಗಳ ಪಟ್ಟಿಗೆ ಸೇರುವ ನಾಯಕ. ಇಷ್ಟೊಂದು ಜವಾಬ್ದಾರಿಗಳನ್ನು ನಿರಾಯಾಸವಾಗಿ ನಿಭಾಯಿಸಿದ ಬೇರೊಬ್ಬ ರಾಜಕಾರಣಿ ಭಾರತದಲ್ಲಿ ಇಲ್ಲವೇ ಇಲ್ಲ ಎನ್ನಬಹುದು. 1969ರಲ್ಲಿ ಮೊದಲ ಬಾರಿ ರಾಜ್ಯಸಭೆ ಸದಸ್ಯರಾದ ಬಳಿಕ ಅವರು ರಕ್ಷಣೆ, ವಿದೇಶಾಂಗ ವ್ಯವಹಾರ, ಹಣಕಾಸು ಖಾತೆಗಳಂತಹ ಮಹತ್ವದ ಹೊಣೆಗಾರಿಕೆಗಳನ್ನು ನಿರ್ವಹಿಸಿದ್ದಾರೆ. ರಾಷ್ಟ್ರಪತಿಯಾಗಿ ಅವರ ಅವಧಿಯೂ ಗಮನಾರ್ಹ. ಗಾಂಧಿ ಕುಟುಂಬದ ಪ್ರಾಬಲ್ಯದ ಮಧ್ಯೆಯೂ ಕಾಂಗ್ರೆಸ್‌ ಪಕ್ಷದಲ್ಲಿ ಅವರು ಮೂಡಿಸಿದ ಛಾಪು ಅನನ್ಯ. ಅಪಾರ ಅನುಭವ ಮತ್ತು ರಾಜಕೀಯ ಚಾಣಾಕ್ಷತೆಯಿಂದಾಗಿ ಪ್ರಣವ್‌ ಅವರು ರಾಜಕೀಯ ಚಟುವಟಿಕೆಗಳ ಕೇಂದ್ರದಿಂದ ಬಹುಕಾಲ ನೇಪಥ್ಯಕ್ಕೆ ಸರಿಯುವಂತಹ ಪ್ರಸಕ್ತಿ ಉಂಟಾಗಲೇ ಇಲ್ಲ. 

ಈಗಿನ ಪಶ್ಚಿಮ ಬಂಗಾಳದ ಮಿರತಿ ಎಂಬಲ್ಲಿ 1935ರ ಡಿಸೆಂಬರ್‌ 11ರಂದು ಪ್ರಣವ್‌ ಜನಿಸಿದರು. ಅವರು ರಾಜಕೀಯ ಆರಂಭಿಸಿದ್ದು ಕಾಂಗ್ರೆಸ್‌ನಿಂದ ಸಿಡಿದು ಸೃಷ್ಟಿಯಾಗಿದ್ದ ಬಾಂಗ್ಲಾ ಕಾಂಗ್ರೆಸ್‌ ಮೂಲಕ. ಸ್ವಲ್ಪ ಕಾಲದಲ್ಲಿಯೇ ಆ ಪಕ್ಷವು ಕಾಂಗ್ರೆಸ್‌ನೊಂದಿಗೆ ವಿಲೀನಗೊಂಡಿತು. ಪ್ರಣವ್‌ ಅವರ ಚುರುಕುತನವನ್ನು ಇಂದಿರಾ ಗಾಂಧಿ ಗುರುತಿಸಿದ್ದರು. ಹಾಗಾಗಿಯೇ ಅವರನ್ನು ಜಲಸಾರಿಗೆ, ಕೈಗಾರಿಕೆ ಖಾತೆಗಳ ಸಹಾಯಕ ಸಚಿವರನ್ನಾಗಿ ನೇಮಿಸಿದ್ದರು. 1982ರಲ್ಲಿ ಪ್ರಣವ್‌ ಅವರು ಹಣಕಾಸಿನಂತಹ ಮಹತ್ವದ ಖಾತೆಯ ಸಂಪುಟ ದರ್ಜೆ ಸಚಿವರಾದರು. 

ಇಂದಿರಾ ಹತ್ಯೆಯ ಬಳಿಕದ ಕೆಲ ಕಾಲ ಪ್ರಣವ್‌ ಪ್ರಭಾವ ಕಾಂಗ್ರೆಸ್‌ನಲ್ಲಿ ಮಂಕಾಗಿತ್ತು. ರಾಜೀವ್‌ ಗಾಂಧಿ ಅವರು ಪ್ರಣವ್‌ ಅವರನ್ನು ತಮ್ಮ ಸಚಿವ ಸಂಪುಟದಿಂದ ಕೈಬಿಟ್ಟರು. 1986ರಲ್ಲಿ ಕಾಂಗ್ರೆಸ್‌ ಕಾರ್ಯಕಾರಿಯಿಂದಲೂ ಅವರನ್ನು ಹೊರಗಟ್ಟಲಾ ಯಿತು. ಅದೇ ವರ್ಷ ಅವರನ್ನು ಪಕ್ಷದಿಂದ ಆರು ವರ್ಷಗಳಿಗೆ ಉಚ್ಚಾ ಟನೆ ಮಾಡಲಾಯಿತು. ಆದರೆ, ಈ ಹಿನ್ನಡೆ ಅಲ್ಪಾವಧಿಯದ್ದು ಮಾತ್ರ. 1988ರಲ್ಲಿ ಅವರು ಪಕ್ಷಕ್ಕೆ ಮರಳಿದರು. 1991ರಲ್ಲಿ ಪಿ.ವಿ.ನರಸಿಂಹರಾವ್‌ ಪ್ರಧಾನಿ
ಯಾದಾಗ ಪ್ರಣವ್‌ ಅವರನ್ನು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಯಿತು. 1993ರಲ್ಲಿ ಅವರು ಕೇಂದ್ರದ ವಾಣಿಜ್ಯ ಸಚಿವ ಮತ್ತು 1995ರಲ್ಲಿ ವಿದೇಶಾಂಗ ಸಚಿವರಾದರು.

2004ರಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ರಚನೆಯ ಹೊಸ್ತಿಲಲ್ಲಿತ್ತು. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ಹುದ್ದೆ ಒಲ್ಲೆ ಅಂದಿದ್ದರು. ಆಗ ಮುನ್ನೆಲೆಯಲ್ಲಿದ್ದ ಹೆಸರೇ ಪ್ರಣವ್‌ ಅವರದ್ದಾಗಿತ್ತು. ಆದರೆ, ಪ್ರಣವ್‌ ಪ್ರಧಾನಿಯಾಗಲಿಲ್ಲ. ಮನಮೋಹನ್‌ ಸಿಂಗ್‌ ಅವರಿಗೆ ಈ ಅದೃಷ್ಟ ಒಲಿಯಿತು. ಪ್ರಧಾನಿ ಹುದ್ದೆ ದೊರೆಯದಿದ್ದರೂ ಯುಪಿಎ ಸರ್ಕಾರದಲ್ಲಿ ಪ್ರಣವ್‌ ಅವರ ಪ್ರಾಮುಖ್ಯಕ್ಕೆ ಯಾವುದೇ ಕುಂದು ಉಂಟಾಗಲಿಲ್ಲ. ಎಂಟು ವರ್ಷ ಅವರು ಹಣಕಾಸು, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರದಂತಹ ಮಹತ್ವದ ಖಾತೆಗಳನ್ನು ನಿರ್ವಹಿಸಿದರು. ಭಾರತ–ಅಮೆರಿಕ ಪರಮಾಣು ಒಪ್ಪಂದವು ಅವರು ವಿದೇಶಾಂಗ ಸಚಿವರಾಗಿದ್ದಾಗಲೇ ಆಯಿತು. ಯುಪಿಎ ಎರಡನೇ ಅವಧಿಯಲ್ಲಿ ಹಣಕಾಸು ಸಚಿವರಾಗಿ ಅವರು ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ಮತ್ತು ಟೀಕೆಗಳೆರಡೂ ವ್ಯಕ್ತವಾಗಿದ್ದವು.

2012ರಲ್ಲಿ ಯುಪಿಎ–2ನೇ ಅವಧಿಯಲ್ಲಿ ಪ್ರಣವ್‌ ಅವರು ದೇಶದ 13ನೇ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಈ ಉನ್ನತ ಹುದ್ದೆಗೆ ಪ್ರಣವ್‌ ಅವರನ್ನು ಆಯ್ಕೆ ಮಾಡುವುದು ಕಾಂಗ್ರೆಸ್‌ ಪಕ್ಷಕ್ಕೆ ಇಷ್ಟವಿರಲಿಲ್ಲ ಎಂಬ ಮಾತು ಆಗಲೂ ಕೇಳಿ ಬಂದಿತ್ತು. ಮುಂದೆ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂತು. ಆಗಲೂ ಯಾವುದೇ ವಿವಾದಕ್ಕೆ ಆಸ್ಪದ ಇಲ್ಲದಂತೆ ಪ್ರಣವ್‌ ಕೆಲಸ ಮಾಡಿದ್ದರು. ಎನ್‌ಡಿಎ ಸರ್ಕಾರವೇ ಅವರಿಗೆ ದೇಶದ ಅತ್ಯುನ್ನತ ಪುರಸ್ಕಾರವಾದ ‘ಭಾರತ ರತ್ನ’ವನ್ನೂ ನೀಡಿದ್ದು ಈ ಸಾಮರಸ್ಯದ ಸಂಕೇತದಂತಿದೆ. 

ರಾಷ್ಟ್ರಪತಿ ಭವನದಲ್ಲಿ ಛಾಪು

ತಾವು ನಿರ್ವಹಿಸಿದ್ದ ಎಲ್ಲಾ ಹುದ್ದೆಗಳಲ್ಲೂ ಛಾಪು ಮೂಡಿಸಿದ್ದ ಪ್ರಣವ್‌ ಅವರು ರಾಷ್ಟ್ರಪತಿ ಭವನದಲ್ಲೂ ಅಳಿಸಲಾಗದ ಗುರುತುಗಳನ್ನು ಬಿಟ್ಟುಹೋಗಿದ್ದಾರೆ. ತಮ್ಮ ಅವಧಿಯಲ್ಲಿ ರಾಷ್ಟ್ರಪತಿಭವನವನ್ನು ಜನರಿಗೆ ಹತ್ತಿರವಾಗಿಸಿ, ಅದನ್ನು ಹೆಚ್ಚು ಪ್ರಜಾಸತ್ತಾತ್ಮಕಗೊಳಿಸಿದ್ದಾರೆ. 

ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ದರ್ಬಾರ್‌ ಹಾಲ್‌ ಅನ್ನು ನವೀಕರಿಸಿ, ಪ್ರಮುಖ ಕಾರ್ಯಕ್ರಮಗಳೆಲ್ಲವೂ ಅಲ್ಲಿಯೇ ನಡೆಯುವಂತೆ ಮಾಡಿದರು. ರಾಷ್ಟ್ರಪತಿ ಭವನ ದೊಳಗಿನ ಗ್ರಂಥಾಲಯಕ್ಕೆ ಹೊಸ ರೂಪ ನೀಡಿದರು. ಅಪರೂಪದ ಗ್ರಂಥಗಳನ್ನೆಲ್ಲ ಕಾಪಿಡುವ ವ್ಯವಸ್ಥೆ ಮಾಡಿದ್ದಷ್ಟೇ ಅಲ್ಲ, ಸಂಶೋಧಕರು ಮತ್ತು ಆಸಕ್ತರಿಗೆ ಆ ಗ್ರಂಥಾಲಯದ ಬಾಗಿಲುಗಳನ್ನು ತೆರೆದರು.

ಲೇಖಕರು, ಕಲಾವಿದರು, ಸಂಶೋಧಕರು, ವಿಜ್ಞಾನಿ
ಗಳು, ವಿದ್ಯಾರ್ಥಿಗಳು ಮುಂತಾಗಿ ಆಸಕ್ತರಿಗೆ ರಾಷ್ಟ್ರಪತಿ ಭವನದಲ್ಲಿ ಉಳಿದುಕೊಳ್ಳಲು ಸಾಧ್ಯವಾಗುವ ವ್ಯವಸ್ಥೆ ಮಾಡಿದರು.

ರಾಷ್ಟ್ರಪತಿಯನ್ನು ಉಲ್ಲೇಖಿಸುವಾಗ ‘ಹಿಸ್‌ ಎಕ್ಸಲೆನ್ಸಿ’ ‘ಮಹಾಮಹಿಮ್‌’ ಎಂಬ ಪದಗಳನ್ನು ಬಳಸುವ ಪದ್ಧತಿಗೆ ಇತಿಶ್ರೀ ಹಾಕಿದರು. ರಾಷಷ್ಟ್ರಪತಿಯ ಓಡಾಟದಿಂದ ರಾಜಧಾನಿಯ ಸಂಚಾರ ವ್ಯವಸ್ಥೆ ಅಸ್ತವ್ಯಸ್ತ ಗೊಂಡು, ಜನಸಾಮಾನ್ಯರಿಗೆ ತೊಂದರೆ ಯಾಗುವುದನ್ನು ಮನಗಂಡ ಅವರು, ಸಾಧ್ಯವಾದಷ್ಟು ಮಟ್ಟಿಗೆ ಎಲ್ಲಾ ಕಾರ್ಯ
ಕ್ರಮಗಳನ್ನು ರಾಷ್ಟ್ರಪತಿ ಭವನದಲ್ಲೇ ಆಯೋಜಿಸಲು ಪ್ರಯತ್ನಿಸಿದರು.

ಮಕ್ಕಳಿಗೆ ಪಾಠ ಮಾಡಿದ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಮುಖರ್ಜಿ ಅವರು ಪಾತ್ರರಾಗಿದ್ದರು. ಸುಮಾರು 50 ವರ್ಷಗಳ ಹಿಂದೆ ಶಿಕ್ಷಕರಾಗಿಯೇ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದ ಪ್ರಣವ್‌ ಅವರು ರಾಷ್ಟ್ರಪತಿಯಾಗಿದ್ದ ಅವಧಿಯ ಕೊನೆಯ ಎರಡು ವರ್ಷಗಳಲ್ಲಿ ದೆಹಲಿಯ ರಾಜೇಂದ್ರಪ್ರಸಾದ್‌ ಸರ್ವೋದಯ ವಿದ್ಯಾಲಯಯದ 11 ಮತ್ತು 12ನೇ ತರಗತಿಯ ಮಕ್ಕಳಿಗೆ ಭಾರತದ ರಾಜಕೀಯ ಇತಿಹಾಸದ ಪಾಠ ಮಾಡಿದ್ದರು.

ರಾಷ್ಟ್ರಪತಿ ಭವನಕ್ಕೆ ಜನಸಾಮಾನ್ಯರಿಗೆ ನೇರ ಸಂಪರ್ಕ ಒದಗಿಸುವ ಉದ್ದೇಶದಿಂದ 2014ರಲ್ಲಿ ಅವರು ರಾಷ್ಟ್ರಪತಿ ಭವನದ ಅಧಿಕೃತ ಟ್ವಿಟರ್‌ ಖಾತೆಯನ್ನು ತೆರೆದಿದ್ದರು. 20 ದಿನಗಳಲ್ಲಿ 1.02 ಲಕ್ಷ ಹಿಂಬಾಲಕರು ಈ ಖಾತೆಗೆ ಬಂದಿದ್ದರು. ಅವರು ಆ ಹುದ್ದೆಯಿಂದ ಹೊರಹೋದಾಗ 3.29 ಲಕ್ಷ ಹಿಂಬಾಲಕರು ಇದ್ದರು.

ಕುದುರೆಗಳನ್ನು ಕಟ್ಟಲು ಬಳಸುತ್ತಿದ್ದ ಪಾರಂಪರಿಕ ಕಟ್ಟಡವನ್ನು ನವೀಕರಿಸಿ ಅಲ್ಲಿ ಒಂದು ಅಪರೂಪದ ವಸ್ತು ಸಂಗ್ರಹಾಲಯ ಆರಂಭಿಸಿದರು. ಅತಿ ಅಪರೂಪದ ವಸ್ತುಗಳು, ಚಿತ್ರಗಳು, ರಾಷ್ಟ್ರಪತಿಗಳಿಗೆ ಲಭಿಸಿರುವ ಅಪರೂಪದ ಮತ್ತು ದುಬಾರಿ ಕೊಡುಗೆಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ.

ಬಾಂಗ್ಲಾದಲ್ಲೂ ಜನಪ್ರಿಯ

ಭಾರತವಷ್ಟೇ ಅಲ್ಲ ಪ್ರಣವ್‌ ಮುಖರ್ಜಿ ಅವರನ್ನು ಬಾಂಗ್ಲಾದೇಶೀಯರೂ ವಿಶೇಷವಾಗಿ ಗೌರವಿಸುತ್ತಾರೆ. ಆ ದೇಶದ ಜತೆಗೆ ಅವರಿಗೆ ಕೌಟುಂಬಿಕ ಸಂಬಂಧಗಳಿವೆ.

ಪ್ರಣವ್‌ ಅವರ ಪತ್ನಿ ಸುವರಾ ಮುಖರ್ಜಿ ಅವರು ಹುಟ್ಟಿದ್ದು ಬಾಂಗ್ಲಾದೇಶದ ನರೈಲ್‌ನಲ್ಲಿ. ತಮ್ಮ 10ನೇ ವಯಸ್ಸಿನಲ್ಲಿ, ಸುವರಾ ಅವರ ಕುಂಟುಂಬ ಕೋಲ್ಕತ್ತಾಗೆ ಸ್ಥಳಾಂತರಗೊಂಡಿತ್ತು.

1971ರ ಯುದ್ಧದಲ್ಲಿ ಬಾಂಗ್ಲಾದೇಶವನ್ನು ಪಾಕಿಸ್ತಾನದಿಂದ ಪ್ರತ್ಯೇಕಿಸಿ, ಸ್ವತಂತ್ರಗೊಳಿಸಲು ಸಹಕಾರ ನೀಡಿದ ವಿದೇಶಿಯರಿಗೆ ನೀಡುವ ದೇಶದ ಅತ್ಯುನ್ನತ ಗೌರವ ‘ಬಾಂಗ್ಲಾದೇಶ್ ಸ್ವಾಧೀನತಾ ಸನ್ಮಾನೊನ್‌’ ಅನ್ನು 2013ರಲ್ಲಿ ಪ್ರಣವ್‌ ಅವರಿಗೆ ನೀಡಲಾಗಿತ್ತು.

ಲೇಖಕನಾಗಿ ಪ್ರಣವ್‌

ದೇಶದ ರಾಜಕೀಯ ಒಳಸುಳಿಗಳು, ಪ್ರಜಾಪ್ರಭುತ್ವ ವ್ಯವಸ್ಥೆ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಸ್ಪಷ್ಟ ಚಿತ್ರಣ ನೀಡುವ ಹತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಣವ್‌ ಮುಖರ್ಜಿ ಬರೆದಿದ್ದಾರೆ. 

ಬಿಯಾಂಡ್‌ ಸರ್ವೈವಲ್‌: ಎಮರ್ಜಿಂಗ್‌ ಡೈಮನ್ಶನ್ಸ್‌ ಆಫ್‌ ಇಂಡಿಯನ್‌ ಎಕಾನಮಿ (1984), ಆಫ್‌ ದಿ ಟ್ರ್ಯಾಕ್ (1987)‌, ಚಾಲೆಂಜ್‌ ಬಿಫೋರ್‌ ದ ನೇಷನ್ (1992)‌, ಸಾಗಾ ಆಫ್‌ ಸ್ಟ್ರಗಲ್‌ ಆಂಡ್‌ ಸ್ಯಾಕ್ರಿಫೈಸ್‌ (1993) ಮುಂತಾದ ಕೃತಿಗಳು ಗಮನ ಸೆಳೆಯುತ್ತವೆ. 

ಮುಖರ್ಜಿ ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ಹೊರತಂದ ‘ದ ಡೆಮಾಕ್ರಟಿಕ್ ಡಿಕೇಡ್‌: ದಿ ಇಂದಿರಾ ಗಾಂಧಿ ಇಯರ್ಸ್‌’ ಪುಸ್ತಕ ಇಂದಿರಾ ಗಾಂಧಿ ಅವರ ರಾಜಕೀಯ ಜೀವನ, ಆಡಳಿತ ವೈಖರಿ ಕುರಿತ ಪುಸ್ತಕ. ಅದರೊಂದಿಗೆ 70ರ ದಶಕದ ದೇಶದ ರಾಜಕೀಯ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು