ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಆರ್‌ಎಸ್‌ ಭದ್ರಕೋಟೆಗೆ ಬಿಜೆಪಿ ಲಗ್ಗೆ

ನಾಲ್ಕು ವರ್ಷದ ಹಿಂದೆ 4 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 22 ಸ್ಥಾನ ಪಡೆದಿದೆ
Last Updated 4 ಡಿಸೆಂಬರ್ 2020, 22:31 IST
ಅಕ್ಷರ ಗಾತ್ರ

ಹೈದರಾಬಾದ್‌: ಗ್ರೇಟರ್‌ ಹೈದರಾಬಾದ್‌ ಮಹಾನಗರಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ಹಿಡಿಯಲು ತೆಲಂಗಾಣ ರಾಷ್ಟ್ರ ಸಮಿತಿಯು(ಟಿಆರ್‌ಎಸ್‌) ಸಜ್ಜಾಗಿದ್ದು, 150 ಸ್ಥಾನಗಳ ಪೈಕಿ 41 ಸ್ಥಾನಗಳನ್ನು ಟಿಆರ್‌ಎಸ್‌ ಗೆದ್ದಿದೆ.

ಸ್ಥಳೀಯಾಡಳಿತ ಸಂಸ್ಥೆಯ ಚುನಾವಣೆಗೂ ಬಿಜೆಪಿಯು ರಾಷ್ಟ್ರೀಯ ನಾಯಕರನ್ನು ಬಳಸಿಕೊಂಡು ಪ್ರಚಾರ ನಡೆಸಿದ್ದ ಫಲವು ಫಲಿತಾಂಶದಲ್ಲಿ ಗೋಚರಿಸಿದೆ. ಬಿಜೆಪಿಯು 22 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಸಂಸದ ಅಸಾದುದ್ದೀನ್‌ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷವು, ಹೈದರಾಬಾದ್‌ನಲ್ಲಿನ ತನ್ನ ಸಾಂಪ್ರದಾಯಿಕ ಭದ್ರವಾದ ನೆಲೆಗಳಲ್ಲಿ ಪ್ರಾಬಲ್ಯ ಮುಂದುವರಿಸಿದ್ದು, 34 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್‌ ಕೇವಲ ಎರಡು ವಾರ್ಡ್‌ಗಳಲ್ಲಿ ಗೆದ್ದಿದೆ. ಡಿ.1ರಂದು ಮತಪತ್ರದ ಮುಖಾಂತರ ಗ್ರೇಟರ್‌ ಹೈದರಾಬಾದ್‌ ಮಹಾನಗರ ಪಾಲಿಕೆಯ ಚುನಾವಣೆ ನಡೆದಿತ್ತು.

2016ರಲ್ಲಿ ತೆಲುಗು ದೇಶಂ ಪಕ್ಷ(ಟಿಡಿಪಿ) ಜೊತೆ ಮೈತ್ರಿಯಲ್ಲಿದ್ದ ಬಿಜೆಪಿ ಕೇವಲ ನಾಲ್ಕು ಸ್ಥಾನಗಳನ್ನು ಪಡೆದಿತ್ತು. ಪ್ರಸ್ತುತ ಇರುವ ಮುನ್ನಡೆಯನ್ನು ಗಮನಿಸಿದರೆ ಬಿಜೆಪಿಯು ಮತ್ತಷ್ಟು ಸ್ಥಾನಗಳನ್ನು ತೆಕ್ಕೆಗೆ ಹಾಕಿಕೊಳ್ಳುವ ಸಾಧ್ಯತೆ ಇದೆ. ಕಳೆದ ತಿಂಗಳು ದುಬಾಕ್‌ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿತ್ತು, ಇದರ ಬೆನ್ನಲ್ಲೇ ಸ್ಥಳೀಯಾಡಳಿತದಲ್ಲಿ ಬಿಜೆಪಿಯ ಈ ಸಾಧನೆಯು ಪಕ್ಷದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

ನಾಲ್ಕು ವರ್ಷಗಳ ಹಿಂದೆ ಕೆ.ಚಂದ್ರಶೇಖರ ರಾವ್‌ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿಯು(ಟಿಆರ್‌ಎಸ್‌) 150 ವಾರ್ಡ್‌ಗಳ ಪೈಕಿ 99 ವಾರ್ಡ್‌ಗಳಲ್ಲಿ ಗೆದ್ದು ಆಡಳಿತ ಚುಕ್ಕಾಣಿ ಹಿಡಿದಿತ್ತು.

ಈ ಬಾರಿ ಮತದಾನ ಪ್ರಮಾಣವೂ ಕಡಿಮೆಯಿತ್ತು. 74.67 ಲಕ್ಷ ಮತದಾರರ ಪೈಕಿ ಕೇವಲ 34.50 ಲಕ್ಷ ಜನರು(ಶೇ46.55) ಡಿ.1ರಂದು ನಡೆದ ಮತದಾನದಲ್ಲಿ ಭಾಗವಹಿಸಿದ್ದರು. ಚುನಾವಣೆಗೆ ಎಲ್ಲ ವಾರ್ಡ್‌ಗಳಿಂದ ಅಭ್ಯರ್ಥಿಗಳನ್ನು ಟಿಆರ್‌ಎಸ್‌ ಕಣಕ್ಕೆ ಇಳಿಸಿತ್ತು. ಬಿಜೆಪಿ 149 ವಾರ್ಡ್‌ಗಳಲ್ಲಿ, ಕಾಂಗ್ರೆಸ್‌, ಎಐಎಂಐಎಂ ಹಾಗೂ ಟಿಡಿಪಿ ಕ್ರಮವಾಗಿ 146, 51 ಹಾಗೂ 106 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು.

ಈ ಚುನಾವಣೆಗೆ ಬಿಜೆಪಿ ಹೆಚ್ಚಿನ ಆದ್ಯತೆಯನ್ನು ನೀಡಿತ್ತು. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ,ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿಶನ್‌ ರೆಡ್ಡಿ, ಪ್ರಕಾಶ್‌ ಜಾವಡೇಕರ್‌, ಸ್ಮೃತಿ ಇರಾನಿ ಮತ್ತು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಸೇರಿದಂತೆ ಪ್ರಮುಖ ನಾಯಕರೇ ಹೈದರಾಬಾದ್‌ಗೆ ಆಗಮಿಸಿ ಪ್ರಚಾರ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT