ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಾಂ ನಬಿ ಆಜಾದ್‌ ಡಿಎನ್‌ಎ ‘ಮೋದಿ’ಫೈಡ್‌ ಆಗಿದೆ: ಜೈರಾಮ್‌ ರಮೇಶ್‌ ಗೇಲಿ 

Last Updated 26 ಆಗಸ್ಟ್ 2022, 10:47 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ತೊರೆದಿರುವ ಗುಲಾಂ ನಬಿ ಆಜಾದ್‌ ಅವರ ವಿರುದ್ಧ ಪಕ್ಷದ ನಾಯಕರು ತಿರುಗಿಬಿದ್ದಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಆಜಾದ್‌ ಉಲ್ಲೇಖಿಸಿರುವ ಆರೋಪಗಳಿಗೆ ತೀಕ್ಷ್ಣ ತಿರುಗೇಟು ನೀಡುತ್ತಿದ್ದಾರೆ.

ಗುಲಾಂ ನಬಿ ಆಜಾದ್‌ ಅವರ ಡಿಎನ್‌ಎ ‘ಮೋದಿ’ಫೈಡ್‌ (ಮಾಡಿಫೈಡ್‌–ಬದಲಾವಣೆ) ಆಗಿದೆ ಎಂದು ರಾಜ್ಯಸಭೆಯ ಕಾಂಗ್ರೆಸ್‌ ಸದಸ್ಯ ಜೈರಾಮ್‌ ರಮೇಶ್‌ ಟ್ವೀಟ್‌ ಮಾಡಿ ಗೇಲಿ ಮಾಡಿದ್ದಾರೆ.

‘ಕಾಂಗ್ರೆಸ್ ನಾಯಕರ ಗೌರವಕ್ಕೆ ಪಾತ್ರರಾಗಿದ್ದ ವ್ಯಕ್ತಿಯೊಬ್ಬರು ತಮ್ಮ ಕೆಟ್ಟ, ವೈಯಕ್ತಿಕ ದಾಳಿಯಿಂದ ದ್ರೋಹ ಎಸಗಿದ್ದಾರೆ. ಇದು, ಅವರ ನಿಜವಾದ ವ್ಯಕ್ತಿತ್ವವನ್ನು ಬಹಿರಂಗಪಡಿಸಿದೆ. ಆಜಾದ್‌ ಅವರ ಡಿಎನ್‌ಎ ‘ಮೋದಿ’ಫೈಡ್‌ ಆಗಿದೆ ಎಂದು ಅವರು ಟೀಕಿಸಿದ್ದಾರೆ.

‘ಆಜಾದ್‌ ಅವರ ರಾಜೀನಾಮೆಯು ದಿಗ್ಭ್ರಮೆ ಮೂಡಿಸಿದೆ. ದ್ರೋಹದ ಅನುಭವವಾಗಿದೆ’ ಎಂದು ಕಾಂಗ್ರೆಸ್‌ ನಾಯಕ ಸಂದೀಪ್‌ ದೀಕ್ಷಿತ್‌ ಹೇಳಿದ್ದಾರೆ. ಮಾಜಿ ಸಂಸದ ದೀಕ್ಷಿತ್‌, ‘ಜಿ 23‘ ತಂಡದಲ್ಲಿ ಇದ್ದರು.

‘ರಾಜ್ಯಸಭೆಯ ಅಧಿಕಾರಾವಧಿ ಮುಗಿದ ತಕ್ಷಣ, ನೀವು ವಿಚಲಿತರಾಗಿದ್ದೀರಿ. ಅಧಿಕಾರವಿಲ್ಲದೇ ನೀವು ಒಂದು ಕ್ಷಣವೂ ಇರಲು ಸಾಧ್ಯವಿಲ್ಲ‘ ಎಂದು ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದ ಗುಲಾಂ ನಬಿ ಆಜಾದ್‌ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲ ಹುದ್ದೆಗಳಿಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಐದು ಪುಟಗಳ ಪತ್ರವನ್ನು ರವಾನಿಸಿದ್ದಾರೆ. ಪಕ್ಷದೊಂದಿಗಿನ ತಮ್ಮ ಸುದೀರ್ಘ ಒಡನಾಟ ಮತ್ತು ಇಂದಿರಾ ಗಾಂಧಿ ಜೊತೆಗಿನ ನಿಕಟ ಸಂಬಂಧವನ್ನು ಪತ್ರದಲ್ಲಿ ವಿವರಿಸಿದ್ದಾರೆ.

ರಾಜೀನಾಮೆ ಪತ್ರದಲ್ಲಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಆಜಾದ್, ‘ಕಳೆದ ಎಂಟು ವರ್ಷಗಳಲ್ಲಿ ಕಾಂಗ್ರೆಸ್‌ ನಾಯಕತ್ವದ ಚುಕ್ಕಾಣಿಯನ್ನು ಗಂಭೀರವಲ್ಲದ ವ್ಯಕ್ತಿಯೊಬ್ಬರ ಕೈಗೆ ನೀಡಲು ಯತ್ನಗಳು ನಡೆದವು. ಪಕ್ಷಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಪ್ರಮುಖ ನಾಯಕರನ್ನು ಕಡೆಗಣಿಸಲಾಯಿತು. ಕಾಂಗ್ರೆಸ್‌ನ ಇಂದಿನ ಪರಿಸ್ಥಿತಿಗೆ ಇವೆಲ್ಲವೂ ಕಾರಣ’ ಎಂದು ತಿಳಿಸಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT