ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ ವಿಧಾನಸಭೆ ಚುನಾವಣೆ: ಪಕ್ಷ ಬಿಡೆವು ಎಂದು ಕಾಂಗ್ರೆಸ್ ಅಭ್ಯರ್ಥಿಗಳ ಪ್ರಮಾಣ

ಮೈತ್ರಿ ನಕಾರಕ್ಕೆ ಪಕ್ಷಾಂತರವೇ ಕಾರಣ- ಪಿ.ಚಿದಂಬರಂ
Last Updated 23 ಜನವರಿ 2022, 19:45 IST
ಅಕ್ಷರ ಗಾತ್ರ

ಪಣಜಿ: ಶಾಸಕರಾಗಿ ಆಯ್ಕೆಯಾದ ಬಳಿಕ ಪಕ್ಷ ಬದಲಿಸುವುದಿಲ್ಲ ಎಂದು ಗೋವಾ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳನ್ನು ಕಾಂಗ್ರೆಸ್‌ ಪಕ್ಷವು ದೇವರ ಮುಂದೆ ಪ್ರಮಾಣ ಮಾಡಿಸಿದೆ. ಕಳೆದ ಐದು ವರ್ಷಗಳಲ್ಲಿ ಪಕ್ಷವು ಪಕ್ಷಾಂತರದಿಂದ ಜರ್ಜರಿತೊಂಡಿತ್ತು. ಹಾಗಾಗಿ, ಪಕ್ಷವು ಈ ಕ್ರಮಕ್ಕೆ ಮುಂದಾಗಿದೆ.

ಎಲ್ಲ 34 ಅಭ್ಯರ್ಥಿಗಳನ್ನು ಬಸ್ಸೊಂದರಲ್ಲಿ ದೇವಾಲಯ, ಚರ್ಚ್‌ ಮತ್ತು ದರ್ಗಾಕ್ಕೆ ಕರೆದೊಯ್ದು ಪಕ್ಷಾಂತರದ ವಿರುದ್ಧ ಶನಿವಾರ ಪ್ರಮಾಣ ಮಾಡಿಸಲಾಯಿತು. ಕಳೆದ ವಿಧಾನಸಭೆ ಚುನಾವಣೆಯ ಬಳಿಕ ಕಾಂಗ್ರೆಸ್‌ನ ಅತಿ ಹೆಚ್ಚು ಶಾಸಕರು ಪಕ್ಷ ತೊರೆದು ಬಿಜೆಪಿ ಮತ್ತು ಇತರ ಪಕ್ಷಗಳಿಗೆ ಹೋಗಿದ್ದರು.

2017ರ ವಿಧಾನಸಭಾ ಚುನಾವಣೆಯಲ್ಲಿ 17 ಅಭ್ಯರ್ಥಿಗಳು ಕಾಂಗ್ರೆಸ್‌ನಿಂದ ಗೆದ್ದಿದ್ದರು. ಗೋವಾ ವಿಧಾನಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿಕಾಂಗ್ರೆಸ್‌ ಮೂಡಿಬಂದಿತ್ತು. ಪಕ್ಷಾಂತರದ ಪರಿಣಾಮಮವಾಗಿ ಈಗ ಇಬ್ಬರು ಶಾಸಕರು ಮಾತ್ರ ಉಳಿದಿದ್ದಾರೆ. ಕಾಂಗ್ರೆಸ್‌ನ 10 ಶಾಸಕರು 2019ರಲ್ಲಿ ಬಿಜೆಪಿ ಸೇರುವ ಮೂಲಕ ಬಿಜೆಪಿ ಬಲ 27ಕ್ಕೆ ಏರಿಕೆ ಆಗಿತ್ತು.

ಪಣಜಿಯಲ್ಲಿರುವ ಮಹಾಲಕ್ಷ್ಮಿ ದೇವಾಲಯ, ಬಂಬೊಲಿಮ್‌ನಲ್ಲಿರುವ ಚರ್ಚ್‌ ಮತ್ತು ಬೆಟಿಮ್‌ ಗ್ರಾಮದಲ್ಲಿರುವ ದರ್ಗಾಕ್ಕೆ ಅಭ್ಯರ್ಥಿಗಳನ್ನು ಕರೆದೊಯ್ಯಲಾಯಿತು. ಕಾಂಗ್ರೆಸ್‌ನ ಗೋವಾ ಚುನಾವಣಾ ವೀಕ್ಷಕ ಪಿ. ಚಿದಂಬರಂ ಅವರು ಅಭ್ಯರ್ಥಿಗಳ ಜತೆಗೆ ಇದ್ದರು.

ಪ್ರತಿಜ್ಞೆ ಕೈಗೊಳ್ಳುವುದು ಗೋವಾದಲ್ಲಿ ಇದೇ ಮೊದಲೇನೂ ಅಲ್ಲ. ಗೋವಾ ಫಾರ್ವರ್ಡ್‌ ಪಾರ್ಟಿಯ (ಜಿಎಫ್‌ಪಿ) ಮೂವರು ಶಾಸಕರು ಮತ್ತು ಪ‍ದಾಧಿಕಾರಿಗಳನ್ನು ಮಾಪುಸಾದಲ್ಲಿರುವ ದೇವ ಬೋದಗೇಶ್ವರ ದೇವಾಲಯಕ್ಕೆ ಕರೆದೊಯ್ದು 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿಸಲಾಗಿತ್ತು. ಮನೋಹರ್ ಪರಿಕ್ಕರ್‌ ನೇತೃತ್ವದಲ್ಲಿ 2017ರಲ್ಲಿ ಸರ್ಕಾರ ರಚನೆ ಆದಾಗ ಜಿಎಫ್‌ಪಿ ಬೆಂಬಲ ನೀಡಿತ್ತು. ಜಿಎಫ್‌ಪಿ ಶಾಸಕರನ್ನು ಸಚಿವರನ್ನಾಗಿ ಮಾಡಲಾಗಿತ್ತು.

ಆದರೆ, ಕಾಂಗ್ರೆಸ್‌ನ 10 ಶಾಸಕರು 2019ರಲ್ಲಿ ಬಿಜೆಪಿ ಸೇರಿದ ಬಳಿಕ, ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ ಅವರು ಜಿಎಫ್‌ಪಿ ಸಚಿವರನ್ನು ಕೈಬಿಟ್ಟಿದ್ದರು. ವಿಜಯ್‌ ಸರ್ದೇಸಾಯಿ ನೇತೃತ್ವದ ಜಿಎಫ್‌ಪಿಗೆ ಹಿನ್ನಡೆ ಆಗಿತ್ತು. ಪ್ರಮಾಣ ಮಾಡಿದ್ದರೂ ಜಿಎಫ್‌ಪಿ ಶಾಸಕ ಜಯೇಶ್‌ ಸಲಗಾಂವಕರ್‌ ಅವರು ಬಿಜೆಪಿ ಸೇರಿದ್ದರು.

***

‘ಮೈತ್ರಿ ನಕಾರಕ್ಕೆ ಪಕ್ಷಾಂತರವೇ ಕಾರಣ’

ಕಾಂಗ್ರೆಸ್‌ ಪಕ್ಷದ ಮುಖಂಡರನ್ನು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸೆಳೆದಿದ್ದರಿಂದಲೇ ಆ ಪಕ್ಷದ ಜತೆಗೆ ಚುನಾವಣಾ ಮೈತ್ರಿಗೆ ಮುಂದಾಗಲಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ ಭಾನುವಾರ ಹೇಳಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಕಾಂಗ್ರೆಸ್‌ಗೆ ಸಾಧ್ಯವಾಗದಿದ್ದರೆ ಅದಕ್ಕೆ ಚಿದಂಬರಂ ಅವರೇ ಹೊಣೆ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿ ಅವರು ಇತ್ತೀಚೆಗೆ ಹೇಳಿದ್ದರು. ಗೋವಾದಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು ಅಧಿಕೃತ ಪ್ರಸ್ತಾವವನ್ನು ಚಿದಂಬರಂ ಮುಂದೆ ಇರಿಸಲಾಗಿತ್ತು ಎಂದು ಮಮತಾ ಬ್ಯಾನರ್ಜಿ ಅವರೂ ಹೇಳಿದ್ದರು.

‘ಮೈತ್ರಿಯ ಪ್ರಸ್ತಾವವನ್ನು ಟಿಎಂಸಿ ಮುಂದಿಟ್ಟದ್ದು ನಿಜ. ಆದರೆ, ಅದಕ್ಕೆ ಮೊದಲು ಮತ್ತು ನಂತರ ಕೆಲವು ಬೆಳವಣಿಗೆಗಳು ನಡೆದವು. ಲುಝಿನೊ ಫೆಲೀರೊ ಅವರನ್ನು ಟಿಎಂಸಿ ಸೆಳೆದುಕೊಂಡಿತು. ಮೈತ್ರಿ ‍ಪ್ರಸ್ತಾವದ ನಂತರವೂ ಅಲೆಕ್ಸೊ ಲೌರೆಂಕೊ ಅವರನ್ನು ಸೆಳೆದುಕೊಂಡರು. ಲೌರೆಂಕೊ ಅವರು ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಯಲ್ಲಿ ಇದ್ದರು’ ಎಂದು ಚಿದಂಬರಂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT