ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು ಸದನದಲ್ಲಿ ಗದ್ದಲ: ರಾಷ್ಟ್ರಗೀತೆಗೂ ಮುನ್ನವೇ ಸದನ ತೊರೆದ ರಾಜ್ಯಪಾಲ

Last Updated 9 ಜನವರಿ 2023, 16:11 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಹಾಗೂ ರಾಜ್ಯಪಾಲ ಆರ್‌.ಎನ್‌.ರವಿ ನಡುವಣ ತಿಕ್ಕಾಟ ತೀವ್ರಗೊಂಡಿದ್ದು, ಹೊಸ ವರ್ಷದ ಆರಂಭದಲ್ಲಿ ನಡೆದ ವಿಧಾನಸಭೆ ಅಧಿವೇಶನದ ವೇಳೆ ಇದು ಬಹಿರಂಗಗೊಂಡಿದೆ.

ರಾಜ್ಯಪಾಲರು ಸದನವನ್ನು ಉದ್ದೇಶಿಸಿ ಮಾತನಾಡುವಾಗ ಸರ್ಕಾರ ಸಿದ್ಧಪಡಿಸಿಕೊಟ್ಟಿದ್ದ ಭಾಷಣದಲ್ಲಿನ ಕೆಲ ಅಂಶಗಳನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದಾರೆ ಎಂದು ಆರೋಪಿಸಿ ಡಿಎಂಕೆ ಮೈತ್ರಿಕೂಟದ ಶಾಸಕರು ಸದನದಲ್ಲಿ ಸೋಮವಾರ ಗದ್ದಲ ನಡೆಸಿದರು.

ರಾಜ್ಯಪಾಲರು ತಮ್ಮ ಭಾಷಣದ ವೇಳೆ ಸರ್ಕಾರದ ಯೋಜನೆಗಳನ್ನು ಪ್ರಸ್ತಾಪಿಸುವ ಬದಲು ವೈಯಕ್ತಿಕ ಅಭಿಪ್ರಾಯಗಳನ್ನು ಉಲ್ಲೇಖಿಸಿದ್ದಾರೆ. ಅವುಗಳನ್ನು ಕಡತದಿಂದ ತೆಗೆದುಹಾಕುವಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಗೊತ್ತುವಳಿ ಮಂಡಿಸಿದರು. ಸರ್ಕಾರ ಸಿದ್ಧಪಡಿಸಿದ್ದ ಭಾಷಣದಲ್ಲಿನ ಅಂಶಗಳನ್ನೇ ಕಡತದಲ್ಲಿ ಸೇರ್ಪಡೆ ಮಾಡಬೇಕು. ಅದನ್ನು ತಮಿಳಿನಲ್ಲಿ ವಾಚಿಸಬೇಕು ಎಂದು ಸಭಾಧ್ಯಕ್ಷರಾದ ಎಂ.ಅಪ್ಪಾವು ಅವರನ್ನು ಒತ್ತಾಯಿಸಿದರು. ಬಳಿಕ ಇದನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

‘ರಾಜ್ಯಪಾಲರು ಸದನದಲ್ಲಿ ಆಸೀನರಾಗಿರುವಾಗಲೇ ಅವರ ವಿರುದ್ಧ ಮುಖ್ಯಮಂತ್ರಿ ಸ್ಟಾಲಿನ್‌ ಗೊತ್ತುವಳಿ ಮಂಡಿಸಿದ್ದಾರೆ. ಇದು ಅಪ್ರಬುದ್ಧ ಹಾಗೂ ಅಗೌರವ ಸೂಚಕ ನಡೆ’ ಎಂದು ಬಿಜೆಪಿ ಹರಿಹಾಯ್ದಿದೆ.

ರಾಜ್ಯಪಾಲರ ಭಾಷಣ ನಿರಾಸಾದಾಯವಾಗಿದೆ ಎಂದು ವಿರೋಧ ಪಕ್ಷ ಎಐಎಡಿಎಂಕೆ ಹೇಳಿದ್ದು, ಸ್ಟಾಲಿನ್‌ ಅವರ ನಿಲುವನ್ನೂ ಖಂಡಿಸಿದೆ.

ರಾಜ್ಯಪಾಲರು ಭಾಷಣ ಆರಂಭಿಸಿದ ಕೂಡಲೇ ಡಿಎಂಕೆ ಮೈತ್ರಿಕೂಟದ ಶಾಸಕರು ಅದಕ್ಕೆ ಅಡ್ಡಿಪಡಿಸಿದರು. ‘ವಾಳಗ ತಮಿಳುನಾಡು’ (ತಮಿಳುನಾಡು ದೀರ್ಘಾಯು), ‘ಎಂಗಳ್‌ ನಾಡು ತಮಿಳ್‌ ನಾಡು’ (ನಮ್ಮ ನಾಡು ತಮಿಳುನಾಡು) ಎಂಬ ಘೋಷಣೆಗಳನ್ನು ಕೂಗಿದರು. ಇದರ ನಡುವೆಯೂ ಭಾಷಣ ಮುಂದುವರಿಸಿದ ರಾಜ್ಯಪಾಲರು ಸ್ವಾಮಿ ವಿವೇಕಾನಂದರ ಹೆಸರು ಉಲ್ಲೇಖಿಸಿದರು. ಇ.ವಿ.ರಾಮಸ್ವಾಮಿ ಪೆರಿಯಾರ್‌, ಸಿ.ಎನ್‌.ಅಣ್ಣಾದೊರೈ ಸೇರಿದಂತೆ ದ್ರಾವಿಡ ಚಳವಳಿಯ ನೇತಾರರ ಹೆಸರು ಹಾಗೂ ಸರ್ಕಾರದ ಬಹುನಿರೀಕ್ಷಿತ ಯೋಜನೆಗಳಾದ ‘ಇಳಮ್‌ ತೇಡಿ ಕೆಳವಿ’ (ಶಿಕ್ಷಣ) ಹಾಗೂ ‘ಮಕ್ಕಳೈ ತೇಡಿ ಮಾರುತುವಂ’ (ಆರೋಗ್ಯ) ಕುರಿತು ಅವರು ಪ್ರಸ್ತಾಪಿಸಲಿಲ್ಲ. ಇದರಿಂದ ಕೆರಳಿದ ಆಡಳಿತಾರೂಢ ಪಕ್ಷದ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ರಾಜ್ಯಪಾಲರು ಭಾಷಣ ಮುಕ್ತಾಯಗೊಳಿಸುತ್ತಿದ್ದಂತೆ ಎದ್ದುನಿಂತ ಮುಖ್ಯಮಂತ್ರಿ ಸ್ಟಾಲಿನ್‌ ಅವರು ಗೊತ್ತುವಳಿ ಮಂಡಿಸಿದರು. ಅವರು ಮಾತು ಪೂರ್ಣಗೊಳಿಸುವ ಮುನ್ನವೇ ರವಿ ಅವರು ಸದನದಿಂದ ಹೊರನಡೆದರು. ಕಲಾಪ ಅಂತ್ಯಗೊಳಿಸುವ ಸೂಚಕವಾಗಿ ರಾಷ್ಟ್ರಗೀತೆ ಮೊಳಗಿಸುವವರೆಗೂ ಅವರು ಕಾಯಲಿಲ್ಲ.

ರಾಜ್ಯಕ್ಕೆ ತಮಿಳುನಾಡು ಎಂದು ಕರೆಯುವ ಬದಲು ತಮಿಳಗಂ ಎಂದು ಸಂಬೋಧಿಸುವುದು ಸೂಕ್ತ ಎಂದು ರವಿ ಅವರು ಕೆಲ ದಿನಗಳ ಹಿಂದೆ ಹೇಳಿದ್ದರು. ಹೀಗಾಗಿ ಅವರು ಹೊರ ಹೋಗುತ್ತಿದ್ದಂತೆ ಡಿಎಂಕೆ ಮೈತ್ರಿಕೂಟದ ಶಾಸಕರು ‘ವಾಳಗ ತಮಿಳುನಾಡು’ (ತಮಿಳುನಾಡು ದೀರ್ಘಾಯು) ಎಂಬ ಘೋಷಣೆ ಕೂಗಿದರು.

ಈ ಬೆಳವಣಿಗೆ ಬೆನ್ನಲ್ಲೇ ಡಿಎಂಕೆ ಬೆಂಬಲಿಗರು ಹಾಗೂ ವಿರೋಧಿಗಳ ನಡುವೆ ಆನ್‌ಲೈನ್‌ನಲ್ಲಿ ನಡೆದ ಚರ್ಚೆ ಕಾವೇರಿತ್ತು. ಹಲವರು ಟ್ವಿಟರ್‌ನಲ್ಲಿ ‘ಗೆಟ್‌ಔಟ್‌ರವಿ’ ಎಂಬ ಹ್ಯಾಷ್‌ಟ್ಯಾಗ್‌ ಬಳಸಿ ರಾಜ್ಯಪಾಲರ ವಿರುದ್ಧ ಕಿಡಿಕಾರಿದ್ದಾರೆ. ರವಿ ಅವರನ್ನು ರಾಜ್ಯಪಾಲ ಹುದ್ದೆಯಿಂದ ವಜಾಗೊಳಿಸುವಂತೆಯೂ ಆಗ್ರಹಿಸಿದ್ದಾರೆ.

ರಾಜ್ಯಪಾಲರು ಪ್ರಸ್ತಾಪಿಸದ ಅಂಶಗಳು

‘ಸಾಮಾಜಿಕ ನ್ಯಾಯ, ಸ್ವಯಂ ಗೌರವ, ಅಂತರ್ಗತ ಬೆಳವಣಿಗೆ, ಸಮಾನತೆ, ಮಹಿಳಾ ಸಬಲೀಕರಣ, ಜಾತ್ಯತೀತತೆ ಮತ್ತು ಎಲ್ಲರೆಡೆ ಸಹಾನುಭೂತಿ ಸೇರಿದಂತೆ ಹಲವು ಆದರ್ಶಗಳ ತಳಹದಿಯ ಮೇಲೆ ಸರ್ಕಾರ ರಚಿತವಾಗಿದೆ. ಇದರ ಆಡಳಿತವು ದ್ರಾವಿಡ ಮಾದರಿಯನ್ನು ಆಧರಿಸಿದೆ’ ಎಂದು ರಾಜ್ಯಪಾಲರ ಭಾಷಣದ 65ನೇ ಅಂಶದಲ್ಲಿ ಹೇಳಲಾಗಿತ್ತು.

‘ಇ.ವಿ.ರಾಮಸ್ವಾಮಿ ಪೆರಿಯಾರ್‌, ಅಣ್ಣ ಅಂಬೇಡ್ಕರ್‌, ಕೆ.ಕಾಮರಾಜ್‌, ಸಿ.ಎನ್‌.ಅಣ್ಣಾದೊರೈ ಹಾಗೂ ಎಂ.ಕರುಣಾನಿಧಿ ಅವರ ತತ್ವ, ಸಿದ್ಧಾಂತಗಳ ನೆಲೆಯಲ್ಲಿ ಸರ್ಕಾರ ಕಾರ್ಯನಿರ್ವಹಿಸಲಿದೆ’ ಎಂದು ಭಾಷಣದ 67ನೇ ಅಂಶದಲ್ಲಿ ಉಲ್ಲೇಖಿಸಲಾಗಿತ್ತು.

‘ರಾಜ್ಯವನ್ನು ಶಾಂತಿ ಮತ್ತು ನೆಮ್ಮದಿಯ ತಾಣವನ್ನಾಗಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಸರ್ಕಾರ ಕೈಗೊಳ್ಳಲಿದೆ. ರಾಜ್ಯವನ್ನು ಹಿಂಸಾಚಾರಮುಕ್ತಗೊಳಿಸಲೂ ಪಣತೊಟ್ಟಿದೆ’ ಎಂದು 12ನೇ ಅಂಶದಲ್ಲಿ ಹೇಳಲಾಗಿತ್ತು. ಆದರೆ ಇದ್ಯಾವುದನ್ನೂ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿರಲಿಲ್ಲ.

***

ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿದ್ದ ಭಾಷಣದಲ್ಲಿನ ಕೆಲ ಅಂಶಗಳನ್ನು ಕೈಬಿಡುವ ಮೂಲಕ ಸದನದ ಗೌರವಕ್ಕೆ ಚ್ಯುತಿ ಉಂಟುಮಾಡಿದ್ದಾರೆ. ರಾಷ್ಟ್ರಗೀತೆಯನ್ನೂ ಅವಮಾನಿಸಿದ್ದಾರೆ –ತಂಗಂ ತೇನರಸು, ಕೈಗಾರಿಕಾ ಸಚಿವ

***

ಮುಖ್ಯಮಂತ್ರಿ ಸ್ಟಾಲಿನ್‌ ಅವರು ರಾಜ್ಯಪಾಲರ ವಿರುದ್ಧ ಗೊತ್ತುವಳಿ ಮಂಡಿಸಿರುವುದು ಸದನದ ಸಂಪ್ರದಾಯಕ್ಕೆ ವಿರುದ್ಧವಾದ ನಡೆ–-- ಕೆ.ಪಳನಿಸ್ವಾಮಿ, ವಿರೋಧ ಪಕ್ಷದ ನಾಯಕ

***

ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ಡಿಎಂಕೆ ಸರ್ಕಾರವು ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದೆ. ಆ ಮೂಲಕ ಸದನಕ್ಕೆ ಅಗೌರವ ತೋರಿದೆ –ಕೆ.ಅಣ್ಣಾಮಲೈ, ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ

ತಮಿಳುನಾಡು ವಿಧಾನಸಭೆ ಇತಿಹಾಸದಲ್ಲೇ ಇದೊಂದು ಕರಾಳ ದಿನ –ಟಿಟಿವಿ ದಿನಕರನ್‌, ಎಎಂಎಂಕೆ ಮುಖಂಡ

ರಾಜ್ಯಪಾಲರು ಸಂವಿಧಾನದ ಮಾನದಂಡಗಳನ್ನು ಗಾಳಿಗೆ ತೂರಿದ್ದಾರೆ. ತಮ್ಮನ್ನು ನೇಮಿಸಿರುವವರ ಪರವಾಗಿ ಕೆಲಸ ಮಾಡುತ್ತಿರುವುದು ಅವರ ನಡೆಯಿಂದ ಸ್ಪಷ್ಟವಾಗಿದೆ–ಜೈರಾಮ್‌ ರಮೇಶ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT