ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಸೇರಿ ಆರು ದೇಶಗಳಿಂದ ಬರುವವರಿಗೆ ಆರ್‌ಟಿ–ಪಿಸಿಆರ್‌ ನೆಗೆಟಿವ್ ವರದಿ ಕಡ್ಡಾಯ?

ಮುಂದಿನ 40 ದಿನಗಳು ಭಾರತಕ್ಕೆ ಅತ್ಯಂತ ನಿರ್ಣಾಯಕ: ಆರೋಗ್ಯ ಸಚಿವಾಲಯ
Last Updated 28 ಡಿಸೆಂಬರ್ 2022, 16:21 IST
ಅಕ್ಷರ ಗಾತ್ರ

ನವದೆಹಲಿ: ಚೀನಾ ಜತೆಗೆ ಇತರ ಐದು ದೇಶಗಳಿಂದ ಬರುವ ಪ್ರಯಾಣಿಕರಿಗೆಕಡ್ಡಾಯವಾಗಿ ಆರ್‌ಟಿ–ಪಿಸಿಆರ್‌ನ ನೆಗೆಟಿವ್‌ ವರದಿ ಸಲ್ಲಿಸುವ ‘ಏರ್ ಸುವಿಧಾ’ ಪೋರ್ಟಲ್‌ ಮರು ಜಾರಿಗೊಳಿಸಲು ಕೇಂದ್ರ ಸರ್ಕಾರ ಯೋಜಿಸಿದೆ.

ಕಳೆದ ಎರಡು ದಿನಗಳಲ್ಲಿ ವಿಮಾನ ನಿಲ್ದಾಣಗಳಲ್ಲಿ ಆಯ್ದ ಆರು ಸಾವಿರ ಅಂತರರಾಷ್ಟ್ರೀಯ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಇದರಲ್ಲಿ 39 ಪ್ರಯಾಣಿಕರಲ್ಲಿ ಕೋವಿಡ್‌ ಸೋಂಕು ದೃಢಪಟ್ಟ ನಂತರ ಕೇಂದ್ರ ಸರ್ಕಾರ, 2020ರಲ್ಲಿ ಪರಿಚಯಿಸಿದ್ದ ‘ಏರ್ ಸುವಿಧಾ’ ಪೋರ್ಟಲ್‌ ಮರು ಆರಂಭಿಸಲು ಯೋಜಿಸಿದೆ.ಇದು ಬಹುಶಃ ಮುಂದಿನ ವಾರದಿಂದ ಜಾರಿಯಾಗುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳು ಬುಧವಾರ ಹೇಳಿವೆ.

‘ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹಾಂಗ್‌ಕಾಂಗ್, ಥಾಯ್ಲೆಂಡ್‌ ಮತ್ತು ಸಿಂಗಪುರದಿಂದ ಬರುವ ಪ್ರಯಾಣಿಕರು‘ಏರ್ ಸುವಿಧಾ’ ಪೋರ್ಟಲ್‌ನಲ್ಲಿ ಕಡ್ಡಾಯವಾಗಿಆರ್‌ಟಿ–ಪಿಸಿಆರ್‌ನ ನೆಗೆಟಿವ್‌ ವರದಿ ಸಲ್ಲಿಸಬೇಕಾಗಲಿದೆ. ಶೇ 2ರಷ್ಟು ಆಯ್ದ ಅಂತರರಾಷ್ಟ್ರೀಯ ಪ್ರಯಾಣಿಕರ ಕೋವಿಡ್‌ ಪರೀಕ್ಷೆ ಮುಂದುವರಿಯಲಿದೆ. ವಿಮಾನ ನಿಲ್ದಾಣಗಳಲ್ಲಿ ಪರೀಕ್ಷೆ ಮತ್ತು ತಪಾಸಣೆ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಅವರು ಗುರುವಾರ ದೆಹಲಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ಇದನ್ನು ಪರಿಶೀಲಿಸಲಿದ್ದಾರೆ’ ಎಂದು ಆರೋಗ್ಯ ಸಚಿವಾಲಯದ ಮೂಲಗಳು ಹೇಳಿವೆ.

ದೇಶದಲ್ಲಿಕೋವಿಡ್ ಪ್ರಕರಣಗಳು ಜನವರಿಯಲ್ಲಿ ಉಲ್ಬಣಿಸುವ ಸಾಧ್ಯತೆ ಇದೆ. ಮುಂದಿನ ಕೆಲವು ವಾರಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುವ ಅಂದಾಜಿದೆ. ಚೀನಾದಲ್ಲಿ ಓಮೈಕ್ರಾನ್‌ ಉಪತಳಿ ಬಿಎಫ್‌.7 ಸೋಂಕು ಉಂಟು ಮಾಡಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಇದು ಭಾರತದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದೆಂದು ತೀರ್ಮಾನಿಸಲು ಮುಂದಿನ 40 ದಿನಗಳು ಅತ್ಯಂತ ನಿರ್ಣಾಯಕ. ಬಿಎಫ್‌.7 ತಳಿಯ ಮೊದಲ ಅಲೆ ಕಾಣಿಸಿದರೂ ಆಸ್ಪತ್ರೆಗೆ ದಾಖಲಾಗುವವರು ಮತ್ತು ಸಾವಿನ ಸಂಖ್ಯೆ ತುಂಬಾ ಕಡಿಮೆ ಇರಲಿದೆ ಎಂದು ಮೂಲಗಳು ತಿಳಿಸಿವೆ.

‘ಈ ಮೊದಲು ಕೋವಿಡ್‌ ಸೋಂಕು ಪೂರ್ವ ಏಷ್ಯಾದಲ್ಲಿ ಬಾಧಿಸಿದ 30ರಿಂದ 35 ದಿನಗಳ ನಂತರ ಭಾರತಕ್ಕೆ ತಟ್ಟಿತು. ಬಿಎಫ್ .7 ಉಪ ತಳಿಯು ಅತೀ ವೇಗವಾಗಿ ಹರಡುವ ಸೋಂಕು ಆಗಿದ್ದು, ಒಬ್ಬ ಸೋಂಕಿತ ವ್ಯಕ್ತಿಯಿಂದ ಕನಿಷ್ಠ 16 ವ್ಯಕ್ತಿಗಳಿಗೆ ಸೋಂಕು ತಗುಲುವ ಅಂದಾಜಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ವಿದೇಶಗಳಿಂದ ಬಂದ ಪ್ರಯಾಣಿಕರಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿದ್ದರೂ ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ಕೇಂದ್ರ ಆದೇಶ ಹೊರಡಿಸುವ ಸಾಧ್ಯತೆ ಇಲ್ಲ. ವೈದ್ಯರು, ನರ್ಸ್‌ಗಳು ಮತ್ತು ಮುಂಚೂಣಿ ಕಾರ್ಯಕರ್ತರಿಗೆನಾಲ್ಕನೇ ಬೂಸ್ಟರ್ ಡೋಸ್ ಲಸಿಕೆ ನೀಡುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

4ನೇ ಬೂಸ್ಟರ್ ಡೋಸ್ ಅಗತ್ಯವಿಲ್ಲ: ತಜ್ಞರ ಸಲಹೆ
ನವದೆಹಲಿ (ಪಿಟಿಐ):
‘ದೇಶದಲ್ಲಿ ಬಹುತೇಕ ಜನರು ಇನ್ನೂ ಬೂಸ್ಟರ್‌ ಡೋಸ್‌ ಲಸಿಕೆ ಪಡೆದಿಲ್ಲ. ಅಲ್ಲದೇ ಎರಡನೇ ಡೋಸ್‌ ಲಸಿಕೆ ಎಷ್ಟೊಂದು ಬಳಕೆಯಾಗಿದೆ ಎನ್ನುವದತ್ತಾಂಶವೂ ಲಭ್ಯವಿಲ್ಲ. ಈ ಸಮಯದಲ್ಲಿ ಕೋವಿಡ್ ತಡೆಯಲು ನಾಲ್ಕನೇ ಡೋಸ್‌ ಲಸಿಕೆ ಅನಗತ್ಯ.ಆದರೆ, ಹೆಚ್ಚಿನ ಕಣ್ಗಾವಲು ವಹಿಸುವ ಅಗತ್ಯವಿದೆ’ ಎಂದು ತಜ್ಞರು ಸಲಹೆ ನೀಡಿದ್ದಾರೆ.

‘ದೇಶವು ಮೂರು ವರ್ಷಗಳಿಂದ ಪಾಲಿಸಿರುವ ಕೋವಿಡ್‌ ಶೂನ್ಯಕ್ಕಿಳಿಸುವ ನೀತಿಗಳಿಂದಾಗಿ ಸದ್ಯ ಚೀನಾದಲ್ಲಿ ಉದ್ಭವಿಸಿರುವಂತಹ ಪರಿಸ್ಥಿತಿ ಭಾರತದಲ್ಲೂ ಕಾಣಿಸಲಿದೆ ಎನ್ನುವ ತೀರ್ಮಾನಕ್ಕೆ ಬರಲು ಯಾವುದೇ ಕಾರಣಗಳು ಕಾಣಿಸುತ್ತಿಲ್ಲ’ ಎಂದು ಪುಣೆಯ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ (ಐಐಎಸ್‌ಇಆರ್‌) ಸಹಾಯಕ ಪ್ರಾಧ್ಯಾಪಕ ಸತ್ಯಜಿತ್ ರಾಥ್ ಹೇಳಿದ್ದಾರೆ.

‘ಓಮೈಕ್ರಾನ್‌ ತಳಿ ಬಂದು ಹೋಗಿದೆ. ಈ ತಳಿಯ ಸೋಂಕಿಗೆ ದೇಶದಲ್ಲಿ ಲಸಿಕೆಯೂ ಲಭ್ಯವಿದೆ. ಈಗಾಗಲೇ ಜನರಲ್ಲಿ ಇದನ್ನು ಎದುರಿಸಬಲ್ಲ ರೋಗನಿರೋಧಕ ಶಕ್ತಿಯೂ ಬಂದಿದೆ. ಆದರೆ, ಇದಕ್ಕಿಂತ ಬೇರೆ ರೂಪಾಂತರಿ ಸೋಂಕು ಬಂದರೆ ಸದ್ಯ ದೇಶದಲ್ಲಿ ಲಭ್ಯವಿರುವ ಯಾವುದೇ ಲಸಿಕೆಗಳು ರಕ್ಷಣೆ ಕೊಡಲಾರವು’ ಎಂದುಐಐಎಸ್‌ಇಆರ್‌ ರೋಗನಿರೋಧಕ ವಿಜ್ಞಾನ ತಜ್ಞೆ ವಿನೀತಾ ಬಲ್‌ ಹೇಳಿದ್ದಾರೆ.

ದೇಶದಲ್ಲಿ ಬುಧವಾರ ಕೋವಿಡ್‌ ಸೋಂಕಿನ 188 ಹೊಸ ಪ್ರಕರಣಗಳು ವರದಿಯಾಗಿವೆ. ಸೋಂಕಿನ ಏರಿಕೆಯ ದೈನಂದಿನ ಪ್ರಮಾಣ ಶೇ 0.14 ಮತ್ತು ವಾರದಲ್ಲಿ ದೃಢಪಡುವ ಪ್ರಕರಣಗಳ ದರ ಶೇ 0.18 ಇದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಅಮೆರಿಕ, ಬ್ರಿಟನ್‌ ಸೇರಿ ಹಲವು ದೇಶಗಳು ಕೋವಿಡ್‌ ವಿರುದ್ಧ ಜನರಿಗೆ ಸಂಪೂರ್ಣ ಲಸಿಕೆ ನೀಡಿದ ನಂತರಮೂರನೇ ಮತ್ತು ನಾಲ್ಕನೇ ಡೋಸ್‌ ಲಸಿಕೆ ನೀಡಲಾರಂಭಿಸಿವೆ. ಆದರೆ, ಭಾರತದಲ್ಲಿ ಅನೇಕ ಜನರು ಇಂದಿಗೂ ಒಂದೇ ಒಂದು ಡೋಸ್‌ ಲಸಿಕೆಯನ್ನು ತೆಗೆದುಕೊಂಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT