1 ಕೋವಿಶೀಲ್ಡ್ ಡೋಸ್ ಬೆಲೆ ₹ 200ಕ್ಕೆ ನಿಗದಿ: 1.1 ಕೋಟಿ ಡೋಸ್ಗೆ ಖರೀದಿ ಆದೇಶ

ನವದೆಹಲಿ: ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್ಐಐ) ಅಭಿವೃದ್ಧಿಪಡಿಸಿರುವ ‘ಕೋವಿಶೀಲ್ಡ್’ ಹೆಸರಿನ ಆಕ್ಸ್ಫರ್ಡ್ ಕೋವಿಡ್–19 ಲಸಿಕೆಯ 1.1 ಕೋಟಿ ಡೋಸ್ ಖರೀದಿಸಲು ಕೇಂದ್ರ ಸರ್ಕಾರವು ಸೋಮವಾರ ಆದೇಶ ಹೊರಡಿಸಿದೆ. ಪ್ರತಿ ಡೋಸ್ ದರ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸೇರಿ ₹210 ಆಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಲಸಿಕೆಯ ರವಾನೆ ಸೋಮವಾರ ಸಂಜೆಯಿಂದಲೇ ಆರಂಭವಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಪ್ರತಿ ಡೋಸ್ ಲಸಿಕೆಯ ದರ ₹200 ಆಗಿದ್ದು, ಜಿಎಸ್ಟಿ ಸೇರಿ ₹210 ಆಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪರವಾಗಿ ಖಾಸಗಿ ವಲಯದ ಎಚ್ಎಲ್ಎಲ್ ಲೈಫ್ಕೇರ್ ಲಿಮಿಟೆಡ್ ಖರೀದಿ ಆದೇಶವನ್ನು ಹೊರಡಿಸಿದೆ. ಈ ಲಸಿಕೆಯನ್ನು ದೇಶದಾದ್ಯಂತ ಇರುವ 60 ರವಾನೆ ಕೇಂದ್ರಗಳಿಗೆ ಕಳುಹಿಸಿ, ನಂತರ ಆ ಕೇಂದ್ರಗಳಿಂದ ಇತರೆ ಪ್ರದೇಶಗಳಿಗೆ ವಿತರಿಸಲಾಗುವುದು ಎಂದು ಮೂಲಗಳು ಮಾಹಿತಿ ನೀಡಿದವು.
ಭಾರತ್ ಬಯೋಟೆಕ್ ಸ್ವದೇಶಿಯಾಗಿ ಅಭಿವೃದ್ಧಿಪಡಿಸಿರುವ ‘ಕೋವ್ಯಾಕ್ಸಿನ್’ ಲಸಿಕೆಯ ಖರೀದಿ ಆದೇಶಕ್ಕೂ ಆರೋಗ್ಯ ಸಚಿವಾಲಯವು ಶೀಘ್ರದಲ್ಲೇ ಸಹಿ ಹಾಕುವ ಸಾಧ್ಯತೆ ಇದ್ದು, ಈ ಕುರಿತ ಸಭೆಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ. ತುರ್ತು ಸಂದರ್ಭದಲ್ಲಿ ಈ ಎರಡೂ ಲಸಿಕೆಗಳ ಬಳಕೆಗೆ ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ಅನುಮತಿ ನೀಡಿತ್ತು. ಲಸಿಕೆಗಳು ಸುರಕ್ಷಿತವಾಗಿದ್ದು, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಕಟಣೆಯಲ್ಲಿ ಸಚಿವಾಲಯವು ಹೇಳಿತ್ತು.
ಜ.16ರಿಂದ ಕೋವಿಡ್–19 ಲಸಿಕಾ ಅಭಿಯಾನವನ್ನು ಆರಂಭಿಸಲಿದ್ದು, ಮೊದಲಿಗೆ ಮೂರು ಕೋಟಿ ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್–19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರಿಗೆ ಆದ್ಯತೆ ನೀಡಲಾಗಿದೆ. ನಂತರದಲ್ಲಿ 50 ವರ್ಷ ಮೇಲ್ಪಟ್ಟ ಜನರಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.