ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆಯ ಹೊಸ ನೀತಿ: ಪೋಲಾದರೆ ಸಿಗದು ಪೂರ್ಣ ಪಾಲು

ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ
Last Updated 8 ಜೂನ್ 2021, 20:18 IST
ಅಕ್ಷರ ಗಾತ್ರ

ನವದೆಹಲಿ: ಹೊಸ ಲಸಿಕೆ ನೀತಿಯ ಅನ್ವಯ ರಾಜ್ಯಗಳಿಗೆ ಲಸಿಕೆ ಹಂಚಿಕೆ ಮಾಡುವಾಗ ‘ಲಸಿಕೆ ಪೋಲು’ ಅಂಶವನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಮಾರ್ಗಸೂಚಿಯನ್ನು ಕೇಂದ್ರವು ಮಂಗಳವಾರ ಪ್ರಕಟಿಸಿದೆ.

ಜನಸಂಖ್ಯೆ, ಕೋವಿಡ್‌ ಪ್ರಮಾಣ ಮತ್ತು ಲಸಿಕೆ ಅಭಿಯಾನದ ಪ್ರಗತಿಯಂತಹ ಅಂಶಗಳನ್ನು ಗಣನೆಗೆ ತೆಗೆದುಕೊಂಡು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ಹಂಚಿಕೆ ಮಾಡಲಾಗುವುದು. ಲಸಿಕೆ ಪೋಲನ್ನು ಕೂಡ ಒಂದು ಅಂಶವಾಗಿ ಪರಿಗಣಿಸಲಾಗುವುದು. ಪೋಲು ಪ್ರಮಾಣವು ಹಂಚಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಹೊಸ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ರಾಜ್ಯಗಳಿಗೆ ಕೇಂದ್ರವು ಉಚಿತವಾಗಿ ಲಸಿಕೆ ಪೂರೈಸುವ ಹೊಸ ಲಸಿಕೆ ನೀತಿಯು ಇದೇ 21ರಿಂದ ಜಾರಿಗೆ ಬರಲಿದೆ.

‌ಕೇಂದ್ರ ಆರೋಗ್ಯ ಸಚಿವಾಲಯವು ಮೇ 26ರಂದು ಪ್ರಕಟಿಸಿದ ಮಾಹಿತಿಯ ಪ್ರಕಾರ, ಛತ್ತೀಸಗಡ (ಶೇ 7.47), ಜಾರ್ಖಂಡ್‌ (ಶೇ 6.44) ಮತ್ತು ತಮಿಳುನಾಡು (ಶೇ 4.55) ಅತಿ ಹೆಚ್ಚು ಲಸಿಕೆ ಪೋಲು ಆಗಿರುವ ರಾಜ್ಯಗಳಾಗಿವೆ. ರಾಷ್ಟ್ರೀಯ ಸರಾಸರಿಯು ಶೇ 1ಕ್ಕಿಂತ ಕಡಿಮೆ ಇದೆ. ಕೆಲವು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಲಸಿಕೆ ಪೋಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ರಾಜಸ್ಥಾನ ಆರೋಗ್ಯ ಸಚಿವರಿಗೆ ಪತ್ರವನ್ನೂ ಬರೆದಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದ ಹೊಸ ಲಸಿಕೆ ನೀತಿಯನ್ನು ಸೋಮವಾರ ಪ್ರಕಟಿಸಿದ್ದರು.

ಕೇಂದ್ರವೇ ಲಸಿಕೆ ಖರೀದಿಸಿ ರಾಜ್ಯಗಳಿಗೆ ವಿತರಿಸಬೇಕು ಎಂದು ಕೋವಿಡ್‌ನಿಂದ ತೀವ್ರವಾಗಿ ಬಾಧಿತವಾಗಿದ್ದ ಮಹಾರಾಷ್ಟ್ರ ಸೇರಿ 13 ರಾಜ್ಯಗಳು ಕೇಂದ್ರವನ್ನು ಕೋರಿದ್ದವು ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ವಿನೋದ್‌ ಪಾಲ್‌ ಹೇಳಿದ್ದಾರೆ. ಪಂಜಾಬ್‌, ಕೇರಳ, ಜಾರ್ಖಂಡ್‌, ರಾಜಸ್ಥಾನ, ಆಂಧ್ರ ಪ್ರದೇಶ, ಒಡಿಶಾ, ಮಿಜೋರಾಂ, ಮೇಘಾಲಯ ಮತ್ತು ತ್ರಿಪುರ ಇತರ ರಾಜ್ಯಗಳು.

‘ಸುಪ್ರೀಂ ಕೋರ್ಟ್ ಕಾರಣವಲ್ಲ’:ಲಸಿಕೆ ನೀತಿಯು ‘ಸ್ವೇಚ್ಛೆಯದ್ದಾಗಿದ್ದು, ಅತಾರ್ಕಿಕ’ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು. ನ್ಯಾಯಾಲಯವು ಹಲವು ಪ್ರಶ್ನೆಗಳನ್ನು ಕೇಳಿತ್ತು. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಮತ್ತು ನೀತಿಯನ್ನು ಪರಾಮರ್ಶಿಸಬೇಕು ಎಂದು ಸೂಚಿಸಿತ್ತು. ಲಸಿಕೆಯ ವಿಚಾರದಲ್ಲಿ ರಾಜ್ಯಗಳನ್ನು ಕೈಬಿಡದೆ, ಕೇಂದ್ರವೇ ಖರೀದಿಸಿ ಎಲ್ಲ ರಾಜ್ಯಗಳಿಗೆ ಹಂಚಬೇಕು ಎಂಬುದು ಅಮಿಕಸ್‌ ಕ್ಯೂರಿ ಅವರು ಎತ್ತಿದ ಮುಖ್ಯ ವಿಚಾರವಾಗಿತ್ತು.

ಆದರೆ, ಲಸಿಕೆ ನೀತಿಯ ಬಗ್ಗೆ ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿದ ಅಭಿಪ್ರಾಯಕ್ಕೂ ನೀತಿಯಲ್ಲಿನ ಬದಲಾವಣೆಗೂ ಸಂಬಂಧ ಇಲ್ಲ ಎಂದು ಪಾಲ್‌ ಹೇಳಿದ್ದಾರೆ. ಲಸಿಕೆ ನೀತಿಯ ಬಗ್ಗೆ ಮೇ 1ರಿಂದಲೇ ಮೌಲ್ಯಮಾಪನ ಆರಂಭವಾಗಿತ್ತು. ಲಸಿಕೆ ಬಗೆಗಿನ ಚರ್ಚೆಗಳು ಮತ್ತು ರಾಜ್ಯಗಳು ಎದುರಿಸಿದ ಸಮಸ್ಯೆಗಳ ಬಗ್ಗೆ ಕೇಂದ್ರಕ್ಕೆ ಅರಿವಿತ್ತು ಎಂದೂ ಅವರು ಹೇಳಿದ್ದಾರೆ.

44 ಕೋಟಿ ಡೋಸ್‌ಗೆ ಬೇಡಿಕೆ: ಕೋವಿಡ್‌ ಲಸಿಕೆಗಳಾದ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ನ 44 ಕೋಟಿ ಡೋಸ್‌ಗಳಿಗೆ ಕೇಂದ್ರ ಸರ್ಕಾರವು ಮಂಗಳವಾರ ಬೇಡಿಕೆ ಸಲ್ಲಿಸಿದೆ. ಕೋವಿಶೀಲ್ಡ್‌ನ 25 ಕೋಟಿ ಮತ್ತು ಕೋವ್ಯಾಕ್ಸಿನ್‌ನ 19 ಕೋಟಿ ಡೋಸ್‌ಗಳು ಆಗಸ್ಟ್‌ ಮತ್ತು ಡಿಸೆಂಬರ್‌ ನಡುವೆ ಪೂರೈಕೆ ಆಗಲಿವೆ.

ಮಾರ್ಗಸೂಚಿಯಲ್ಲಿ ಏನಿದೆ?

*ಖಾಸಗಿ ಆಸ್ಪತ್ರೆಗಳಿಗೆ ವಿತರಿಸುವ ಲಸಿಕೆಯು ದೊಡ್ಡ ನಗರಗಳ ಕೆಲವೇ ಆಸ್ಪತ್ರೆಗಳಿಗೆ ಮಾತ್ರ ಸಿಗದೇ, ಎಲ್ಲ ಆಸ್ಪತ್ರೆಗಳಿಗೆ ಸಮಾನವಾಗಿ ಹಂಚಿಕೆ ಆಗುವಂತೆ ರಾಜ್ಯಗಳು ನೋಡಿಕೊಳ್ಳಬೇಕು

*ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳಿಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪ್ರಾಯೋಜಿಸಲು ಅವಕಾಶ ಇದೆ. ಇದಕ್ಕಾಗಿ ವರ್ಗಾವಣೆ ಸಾಧ್ಯವಿಲ್ಲದ ಇ–ವೋಚರ್‌ಗಳನ್ನು ಬಳಸಲಾಗುವುದು

*18 ವರ್ಷಕ್ಕಿಂತ ಮೇಲಿನವರಲ್ಲಿ ಯಾವ ವರ್ಗಕ್ಕೆ ಆದ್ಯತೆ ನೀಡಬಹುದು ಎಂಬುದನ್ನು ರಾಜ್ಯಗಳು ನಿರ್ಧರಿಸಬಹುದು

*ಖಾಸಗಿ ಮತ್ತು ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಸ್ಥಳದಲ್ಲಿಯೇ ವೈಯಕ್ತಿಕ ಮತ್ತು ಗುಂಪು ನೋಂದಣಿಗೆ ಅವಕಾಶ ಇದೆ

*ಲಸಿಕೆ ತಯಾರಕರು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡಲು ಅವಕಾಶ ಇದೆ. ಆದರೆ, ಇದು ಒಟ್ಟು ತಯಾರಿಕೆಯ ಶೇ 25ರಷ್ಟನ್ನು ಮೀರಬಾರದು. ಲಸಿಕೆ ತಯಾರಕರು ಮತ್ತು ಹೊಸ ಲಸಿಕೆ ಸಂಶೋಧನೆಗೆ ಉತ್ತೇಜನಕ್ಕಾಗಿ ಈ ಕ್ರಮ

ಅಣಕು ಕಾರ್ಯಾಚರಣೆಗೆ 22 ರೋಗಿಗಳ ಬಲಿ?

ಲಖನೌ: ಉತ್ತರ ಪ್ರದೇಶದ ಆಗ್ರಾದಲ್ಲಿನ ಆಸ್ಪತ್ರೆ ಒಂದರಲ್ಲಿ ‘ಆಮ್ಲಜನಕ ಕೊರತೆಯ ಅಣಕು ಕಾರ್ಯಾಚರಣೆ’ಯ ಕಾರಣ 22 ಕೋವಿಡ್‌ ರೋಗಿಗಳು ಮೃತಪಟ್ಟಿರುವ ಸಾಧ್ಯತೆ ಇದೆ ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.‘ಆಮ್ಲಜನಕ ಪೂರೈಕೆಯನ್ನು ನಿಲ್ಲಿಸಿದೆವು, 22 ರೋಗಿಗಳು ನೀಲಿ ಬಣ್ಣಕ್ಕೆ ತಿರುಗಿದರು’ ಎಂದು ಆಸ್ಪತ್ರೆಯ ಮಾಲೀಕ ಹೇಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿರುವ ಮಾಹಿತಿ ಬಗ್ಗೆ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT