ಬುಧವಾರ, ಜುಲೈ 6, 2022
22 °C
ನಾಗಾಲ್ಯಾಂಡ್‌, ಮಣಿಪುರ, ಅಸ್ಸಾಂಗೆ ಅನ್ವಯ: ಅಮಿತ್ ಶಾ ಘೋಷಣೆ

ಆಯ್ದ ಪ್ರದೇಶಗಳು ಆಫ್‌ಸ್ಪಾದಿಂದ ಹೊರಕ್ಕೆ: ಅಮಿತ್ ಶಾ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಈಶಾನ್ಯ ಭಾರತದ ಅಸ್ಸಾಂ, ಮಣಿಪುರ ಮತ್ತು ನಾಗಾಲ್ಯಾಂಡ್‌ ರಾಜ್ಯಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯ (ಆಫ್‌ಸ್ಪಾ) ಅಡಿ, ‘ಪ್ರಕ್ಷುಬ್ಧ’ ಎಂದು ಗುರುತಿಸಲಾಗಿರುವ ಹಲವು ಪ್ರದೇಶಗಳಲ್ಲಿ, ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ಈ ಕಾಯ್ದೆಯನ್ನು ಹಿಂಪಡೆಯಲಾಗುತ್ತದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಘೋಷಿಸಿದ್ದಾರೆ. ಆದರೆ ಈ ಮೂರೂ ರಾಜ್ಯಗಳಿಂದ ಆಫ್‌ಸ್ಪಾವನ್ನು ಸಂಪೂರ್ಣವಾಗಿ ಹಿಂಪಡೆಯುವುದಿಲ್ಲ ಎಂದು ಗೃಹ ಸಚಿವಾಲಯವು
ಹೇಳಿದೆ.

ಆಯ್ದ ಕೆಲವೇ ಪ್ರದೇಶಗಳನ್ನು ಆಫ್‌ಸ್ಪಾದಿಂದ ಮುಕ್ತವಾಗಿಸುವ ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೂರೂ ರಾಜ್ಯಗಳ ಮುಖ್ಯಮಂತ್ರಿಗಳು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಆದರೆ, ಈ ಘೋಷಣೆಯಿಂದ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಈ ರಾಜ್ಯಗಳ ಮಾನವ ಹಕ್ಕುಗಳ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಲ್ಲೆಲ್ಲಿ ಅನ್ವಯ?: ಈಗ ಇಡೀ ನಾಗಾಲ್ಯಾಂಡ್‌ನಲ್ಲಿ ಆಫ್‌ಸ್ಪಾ ಜಾರಿಯಲ್ಲಿದೆ. ಶುಕ್ರವಾರದಿಂದ ರಾಜ್ಯದ ಏಳು ಜಿಲ್ಲೆಗಳ, 15 ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನು ಈ ಕಾಯ್ದೆಯಿಂದ ಹೊರಗಿಡಲಾಗುತ್ತದೆ.

ಅಸ್ಸಾಂನ 23 ಜಿಲ್ಲೆಗಳನ್ನು ಸಂಪೂರ್ಣವಾಗಿ ಆಫ್‌ಸ್ಪಾದಿಂದ ಹೊರಗೆ ಇಡಲಾಗುತ್ತದೆ. ಒಂದು ಜಿಲ್ಲೆಯನ್ನು ಭಾಗಶಃ, ಆಫ್‌ಸ್ಪಾದಿಂದ ಹೊರಗೆ ಇಡಲಾಗಿದೆ. ಮಣಿಪುರದ ಇಂಫಾಲ ಹೊರತುಪಡಿಸಿ ರಾಜ್ಯದ ಎಲ್ಲಾ ಪ್ರದೇಶಗಳೂ ಆಫ್‌ಸ್ಪಾ ಅಡಿಯಲ್ಲಿ ಇದ್ದವು. ಶುಕ್ರವಾರದಿಂದ ರಾಜ್ಯದ ಆರು ಜಿಲ್ಲೆಗಳ 15 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳನ್ನು ಆಫ್‌ಸ್ಪಾದಿಂದ ಹೊರಗೆ ಇಡಲಾಗುತ್ತದೆ.

ಈಶಾನ್ಯದ ರಾಜ್ಯಗಳಲ್ಲಿ ಆಂತರಿಕ ಗಲಭೆ ಮತ್ತು ಒಳನುಸುಳುವಿಕೆಯನ್ನು ತಡೆಗಟ್ಟಲು 1958ರಲ್ಲಿ ಸೇನೆಗೆ ವಿಶೇಷಾಧಿಕಾರ ನೀಡಲಾಗಿತ್ತು. ಈ ಕಾಯ್ದೆ ಅಡಿ ಕಾರ್ಯನಿರ್ವಹಿಸುವ ಸಿಬ್ಬಂದಿಯು, ನಾಗರಿಕರನ್ನು ಪ್ರಶ್ನಿಸುವ, ವಿಚಾರಣೆಗೆ ಒಳಪಡಿಸುವ ಮತ್ತು ಅನುಮಾನ ಬಂದಲ್ಲಿ ಗುಂಡಿಟ್ಟು ಕೊಲ್ಲುವ ಅಧಿಕಾರ ಹೊಂದಿರುತ್ತಾರೆ. ಈ ಕಾಯ್ದೆಯಡಿ ನಡೆಸುವ ಯಾವ ಕೃತ್ಯವೂ ವಿಚಾರಣೆಗೆ ಒಳಪಡುವುದಿಲ್ಲ.

2021ರ ಡಿಸೆಂಬರ್‌ನಲ್ಲಿ ನಾಗಾಲ್ಯಾಂಡ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಸೇನೆಯ ತಂಡವು, ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿತ್ತು. ಆ ದಾಳಿಯಲ್ಲಿ ಮತ್ತು ನಂತರದ ಘರ್ಷಣೆಯಲ್ಲಿ ಸೇನೆಯ ಗುಂಡಿಗೆ 14 ನಾಗರಿಕರು ಬಲಿಯಾಗಿದ್ದರು. ಆ ಬಳಿಕ ಆಫ್‌ಸ್ಪಾವನ್ನು ಹಿಂಪಡೆಯಬೇಕು ಎಂಬ ಕೂಗು ಬಲವಾಗಿ ಕೇಳಿಬಂದಿತ್ತು.

***

ಇವತ್ತಿನ ಘೋಷಣೆಯಿಂದ ಈಶಾನ್ಯ ಭಾರತದ ಮೂರು ರಾಜ್ಯಗಳ ಶೇ 60ರಷ್ಟು ಪ್ರದೇಶ ಆಫ್‌ಸ್ಪಾದಿಂದ ಮುಕ್ತವಾಗಿವೆ. ಕೆಲವೇ ತಿಂಗಳಲ್ಲಿ ಸಂಪೂರ್ಣ ಮುಕ್ತವಾಗಲಿವೆ.

- ಹಿಮಂತ ಬಿಸ್ವಾ ಶರ್ಮಾ, ಅಸ್ಸಾಂ ಮುಖ್ಯಮಂತ್ರಿ

 

ನಿಜ ಏನೆಂದರೆ, 64 ವರ್ಷ ಗಳ ನಂತರ ಇವತ್ತೂ ಈಶಾನ್ಯದ ರಾಜ್ಯಗಳು ಆಫ್‌ಸ್ಪಾ ಅಡಿಯಲ್ಲಿಯೇ ಇವೆ. ಅಮಿತ್ ಶಾ ಘೋಷಣೆಯಿಂದ ಏನೂ ಬದಲಾಗುವುದಿಲ್ಲ.

- ಬಿನಾಲಕ್ಷ್ಮೀ ನೆಪ್ರಾನ್, ಮಣಿಪುರದ ಮಾನವ ಹಕ್ಕುಗಳ ಕಾರ್ಯಕರ್ತೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು