ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಪರಿಹಾರ: ರಾಜ್ಯಗಳ ಬೇಡಿಕೆಗಿಲ್ಲ ಕಿಮ್ಮತ್ತು

ಜಿಎಸ್‌ಟಿ: ಐದು ವರ್ಷವಷ್ಟೇ ಪರಿಹಾರ ನೀಡಲು ಅವಕಾಶ -– ಕೇಂದ್ರ ಸ್ಪಷ್ಟೋಕ್ತಿ
Last Updated 20 ಜುಲೈ 2022, 11:31 IST
ಅಕ್ಷರ ಗಾತ್ರ

ನವದೆಹಲಿ:ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಕಾರಣದಿಂದ ಆಗುವ ವರಮಾನ ನಷ್ಟಕ್ಕೆ ಪರಿಹಾರ ನೀಡುವುದನ್ನು ಮುಂದುವರಿಸಬೇಕು ಎಂಬ ರಾಜ್ಯಗಳ ಬೇಡಿಕೆಗೆ ಮಣೆ ಹಾಕದ ಕೇಂದ್ರ ಸರ್ಕಾರ, ‘ಜಿಎಸ್‌ಟಿ ವ್ಯವಸ್ಥೆ ಜಾರಿಯಾದ ಬಳಿಕ 5 ವರ್ಷಗಳ ಅವಧಿಗಷ್ಟೇ ಪರಿಹಾರ ಕೊಡಲು ಜಿಎಸ್‌ಟಿ ಮಂಡಳಿ ಶಿಫಾರಸು ಮಾಡಿತ್ತು’ ಎಂದು ಸ್ಪಷ್ಟಪಡಿಸಿದೆ.

ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸದಸ್ಯರು ಕೇಳಿರುವ ಏಳು ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ರಾಜ್ಯ ಸಚಿವ ಪಂಕಜ್‌ ಚೌಧರಿ,‘ಸಂವಿಧಾನ ಕಾಯ್ದೆ 2016 (101ನೇ ತಿದ್ದುಪಡಿ) ಸೆಕ್ಷನ್‌ 18 ಹಾಗೂ ಜಿಎಸ್‌ಟಿ ಮಂಡಳಿ ಶಿಫಾರಸಿನ ಪ್ರಕಾರ, ಕಾಯ್ದೆ ಜಾರಿಯಾದ ಬಳಿಕ ಐದು ವರ್ಷವಷ್ಟೇ ರಾಜ್ಯಗಳಿಗೆ ಪರಿಹಾರ ನೀಡಲು ಅವಕಾಶ ಇದೆ’ ಎಂದು ಹೇಳಿದ್ದಾರೆ.

ಚಂಡೀಗಡದಲ್ಲಿ ಜೂನ್‌ ತಿಂಗಳಲ್ಲಿ ನಡೆದಿದ್ದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಮಾತನಾಡಿದ್ದ ನಿರ್ಮಲಾ ಸೀತಾರಾಮನ್, ‘ರಾಜ್ಯಗಳಿಗೆ ನೀಡುವ ಪರಿಹಾರದ ಬಗ್ಗೆಅಂತಿಮ ತೀರ್ಮಾನವನ್ನು ಆಗಸ್ಟ್‌ ಮೊದಲ ವಾರದಲ್ಲಿ ನಡೆಯುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಕೈಗೊಳ್ಳುವ ನಿರೀಕ್ಷೆ ಇದೆ’ ಎಂದು ಹೇಳಿಕೆ ನೀಡಿದ್ದರು. ಆದರೆ, ಉಭಯ ಸದನಗಳಿಗೆ ಹಣಕಾಸು ಸಚಿವರು ನೀಡಿರುವ ಉತ್ತರದಲ್ಲಿ ಆಗಸ್ಟ್‌ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಬಗ್ಗೆ ಉಲ್ಲೇಖವೇ ಇಲ್ಲ.

‘ರಾಜ್ಯಗಳಿಗೆ ಈ ವರ್ಷದ ಮೇ ಅಂತ್ಯದ ವರೆಗೆ ₹86,192 ಕೋಟಿ ಪರಿಹಾರ ನೀಡಲಾಗಿದೆ. ಜಿಎಸ್‌ಟಿ ಪರಿಹಾರ ನಿಧಿಯಲ್ಲಿ ₹25 ಸಾವಿರ ಕೋಟಿಯಷ್ಟೇ ಇತ್ತು. ಆದರೂ ಕೇಂದ್ರ ಸರ್ಕಾರವು ತನ್ನ ಸಂಪನ್ಮೂಲಗಳಿಂದ ರಾಜ್ಯಗಳಿಗೆ ₹62 ಸಾವಿರ ಕೋಟಿ ಬಿಡುಗಡೆ ಮಾಡಿದೆ. ಜೂನ್‌ ತಿಂಗಳ ಪರಿಹಾರವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಬದ್ಧ’ ಎಂದೂ ಸಚಿವರು ಉತ್ತರದಲ್ಲಿ ಹೇಳಿದ್ದಾರೆ.

ರಾಜ್ಯಗಳಿಗೆ ಪರಿಹಾರದ ರೂಪದಲ್ಲಿ ನೀಡಲು ಅಗತ್ಯವಿರುವ ಹಣವನ್ನುಆರೋಗ್ಯಕ್ಕೆ ಹಾನಿಕರವಾದ ವಸ್ತುಗಳು ಮತ್ತು ಐಷಾರಾಮಿ ಸರಕುಗಳ ಮೇಲೆ ಸೆಸ್ ವಿಧಿಸುವ ಮೂಲಕ ಸಂಗ್ರಹಿಸಲಾಗುತ್ತಿದೆ. ’ಈ ಸರಕುಗಳ ಮೇಲೆ ವಿಧಿಸುವ ಪರಿಹಾರ ಸೆಸ್‌ ಅನ್ನು 2026ರ ಮಾರ್ಚ್‌ 31ರವರೆಗೆ ವಿಸ್ತರಣೆ ಮಾಡಿ ಈ ವರ್ಷದ ಜೂನ್‌ 24ರಂದು ಅಧಿಸೂಚನೆ ಹೊರಡಿಸಲಾಗಿದೆ. ರಾಜ್ಯಗಳ ವರಮಾನ ಸಂಗ್ರಹದಲ್ಲಿ ಆಗಿರುವ ಕೊರತೆಯನ್ನು ಸರಿದೂಗಿಸಲು ಕಳೆದ ಎರಡು ಹಣಕಾಸು ವರ್ಷಗಳಲ್ಲಿ (2020–21ರಲ್ಲಿ ₹1.10 ಲಕ್ಷ ಕೋಟಿ ಹಾಗೂ 2021–22ರಲ್ಲಿ ₹1.59 ಲಕ್ಷ ಕೋಟಿ) ಮಾರುಕಟ್ಟೆಯಿಂದ ಸಾಲ ಪಡೆಯಲಾಗಿದೆ. ಅದನ್ನು ಮರುಪಾವತಿ ಮಾಡಲು ಸೆಸ್‌ ಸಂಗ್ರಹಿಸುವ ಅವಧಿಯನ್ನು 2026ರವರೆಗೆ ವಿಸ್ತರಿಸಲು 2021ರಜಿಎಸ್‌ಟಿ ಸಭೆಯಲ್ಲಿ ನಿರ್ಧರಿಸಲಾಗಿತ್ತು’ ಎಂದೂ ನಿರ್ಮಲಾ ಸೀತಾರಾಮನ್‌ ಉತ್ತರದಲ್ಲಿ ಹೇಳಿದ್ದಾರೆ.

ಜಿಎಸ್‌ಟಿ ಜಾರಿಯಾದ ಮೇಲೆ ರಾಜ್ಯಗಳಿಗೆ ಶೇ 14ರಷ್ಟು ನಷ್ಟ ಪರಿಹಾರ ನೀಡುವ ವ್ಯವಸ್ಥೆ 2017ರ ಜುಲೈನಲ್ಲಿ ಆರಂಭವಾಯಿತು. ಹೊಸ ತೆರಿಗೆ ವ್ಯವಸ್ಥೆ ಜಾರಿಯಾದ ಬಳಿಕ ರಾಜ್ಯಗಳಿಗೆ ಆಗುವ ನಷ್ಟವನ್ನು ಭರಿಸಲು ಈ ಯೋಜನೆ ಜಾರಿ ಮಾಡಲಾಗಿತ್ತು. ಪರಿಹಾರ ವ್ಯವಸ್ಥೆ ಜೂನ್‌ ಅಂತ್ಯಕ್ಕೆ ಕೊನೆಗೊಂಡಿದೆ. ಚಂಡೀಗಡದಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಧ್ವನಿ ಎತ್ತಿದ್ದ 12 ರಾಜ್ಯಗಳು, ಪರಿಹಾರ ನೀಡುವ ವ್ಯವಸ್ಥೆಯನ್ನು ಕನಿಷ್ಠ 5 ವರ್ಷ ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದವು. ಆದರೆ, ಈ ಬಗ್ಗೆ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT