ಮಂಗಳವಾರ, ಫೆಬ್ರವರಿ 7, 2023
26 °C

ಗುಜರಾತ್ ಚುನಾವಣೆ: ಪಕ್ಷಗಳ ಬಲಾಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಜರಾತ್‌ ವಿಧಾನಸಭೆ ಚುನಾವಣಾ ಪ್ರಚಾರ ರಂಗೇರಿದೆ. ಬಿಜೆಪಿ ಮತ್ತು ಎಎಪಿ ಅಬ್ಬರದ ಪ್ರಚಾರದ ಮೊರೆ ಹೋಗಿವೆ. ಆದರೆ, ಕಾಂಗ್ರೆಸ್ ಪಕ್ಷವು ಪ್ರಚಾರ ತಂತ್ರವನ್ನು ಬದಲಿಸಿದೆ. ದೊಡ್ಡ ಸಮಾವೇಶ, ಅಬ್ಬರದ ಬದಲಾಗಿ ಮನೆ ಮನೆ ಪ್ರಚಾರಕ್ಕೆ ಹೆಚ್ಚು ಒತ್ತು ನೀಡಿದೆ. ಗುಜರಾತ್‌ ಚುನಾವಣೆಯನ್ನು ಎಎಪಿ ಗಂಭೀರವಾಗಿ ಪರಿಗಣಿಸಿದ್ದರಿಂದಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಸತತ ಆರು ಬಾರಿ ಗೆದ್ದಿರುವ ಬಿಜೆಪಿಗೆ ಆಡಳಿತ ವಿರೋಧಿ ಅಲೆಯ ಭಯ ಇದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ದೊಡ್ಡ ಮಟ್ಟದಲ್ಲಿ ನೆರವಾಗಬಹುದು. ವಿವಿಧ ಪಕ್ಷಗಳ ಬಲಾಬಲ ಹೀಗಿವೆ.

ಬಿಜೆಪಿಗೆ 7ನೇ ಬಾರಿ ಅಧಿಕಾರ ದಕ್ಕುವುದೇ?
ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ನೇತೃತ್ವದ ಎಡಪಕ್ಷಗಳ ಸರ್ಕಾರ ಏಳು ಬಾರಿ ಅಧಿಕಾರ ಹಿಡಿದಿತ್ತು. ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರ ಈಗಾಗಲೇ 6 ಬಾರಿ ಸತತವಾಗಿ ಅಧಿಕಾರ ನಡೆಸಿದ್ದು, ಏಳನೇ ಬಾರಿಯೂ ಅಧಿಕಾರ ಹಿಡಿದರೆ, ಸಿಪಿಎಂ ದಾಖಲೆಯನ್ನು ಸರಿಗಟ್ಟಿದಂತಾಗುತ್ತದೆ. ಆಡಳಿತ ವಿರೋಧಿ ಅಲೆಯ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸನ್ನೇ ಬಿಜೆಪಿ ನೆಚ್ಚಿಕೊಂಡಿದೆ.

ಅನುಕೂಲಕರ ಅಂಶಗಳು
* ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ
* ತಳಮಟ್ಟದಲ್ಲಿ ಪಕ್ಷದ ಬಲಿಷ್ಠ ಸಂಘಟನೆ
* ತೀವ್ರವಾದಿ ಹಿಂದುತ್ವ ಹಾಗೂ ಅಭಿವೃದ್ಧಿ ರಾಜಕಾರಣದ ಮಿಶ್ರಣ
* ‘ಡಬಲ್ ಎಂಜಿನ್’ ಸರ್ಕಾರದಿಂದ ಅಧಿಕ ಲಾಭ ಎಂಬುದಾಗಿ ಮನವರಿಕೆ ಯತ್ನ
* ಪಾಟೀದಾರ್ ಸಮುದಾಯದ ಓಲೈಕೆ ಭಾಗವಾಗಿ ಭೂಪೇಂದ್ರ ಯಾದವ್‌ಗೆ ಮುಖ್ಯಮಂತ್ರಿ ಪಟ್ಟ; ಹಾರ್ದಿಕ್ ಪಟೇಲ್‌ಗೆ ಪ್ರಮುಖ ಸ್ಥಾನ

ಅನನುಕೂಲಕರ ಅಂಶಗಳು
* ಸ್ಥಳೀಯ ನಾಯಕರ ಕೊರತೆ
* ಭ್ರಷ್ಟಾಚಾರದ ಆರೋಪ, ಆಡಳಿತ ವಿರೋಧಿ ಅಲೆ
* ಹಣದುಬ್ಬರ, ನಿರುದ್ಯೋಗ
* ಕೋವಿಡ್ ನಿರ್ವಹಣೆ, ಮೊರ್ಬಿ ದುರಂತ
* ಎಎಪಿಯ ತೀವ್ರ ಸ್ವರೂಪದ ಚುನಾವಣಾ ಪ್ರಚಾರ
* ಪಕ್ಷದ ಆಂತರಿಕ ಸಂಘರ್ಷ

***

ಈ ಬಾರಿ ಕಾಂಗ್ರೆಸ್‌ ಪುನಶ್ಚೇತನ ಆದೀತೇ?
1994–95ರ ಒಂದು ವರ್ಷದ ಅವಧಿಯನ್ನು ಹೊರತುಪಡಿಸಿದರೆ, ಗುಜರಾತ್‌ನಲ್ಲಿ ಕಾಂಗ್ರೆಸ್ ಪಕ್ಷವು 1990ರಿಂದ ಅಧಿಕಾರಕ್ಕೆ ಬಂದಿಲ್ಲ. 1 ವರ್ಷ 24 ದಿನ ಅಧಿಕಾರ ನಡೆಸಿದ್ದ ಛಬೀಲ್ದಾಸ್ ಮೆಹ್ತಾ ಅವರು ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿ. ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ಸ್ಥಾನಗಳು ಹಾಗೂ ಮತ ಪ್ರಮಾಣದಲ್ಲಿ ಸತತವಾಗಿ ಏರಿಕೆ ಕಾಣುತ್ತಿದ್ದರೂ ಕಾಂಗ್ರೆಸ್‌ಗೆ ಅಧಿಕಾರ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ

ಅನುಕೂಲಕರ ಅಂಶಗಳು
* ಸಾಂಪ್ರದಾಯಿಕ ಮತದಾರರ ನಿರಂತರ ಬೆಂಬಲ
* ಒಬಿಸಿ ಸಮುದಾಯಗಳಾದ ಕೋಲಿ, ಠಾಕೂರ್, ಎಸ್‌ಸಿ ಹಾಗೂ ಎಸ್‌ಟಿ, ಮುಸ್ಲಿಂ ಮತದಾರರ ಬೆಂಬಲ
* ಅತೃಪ್ತ ಪಟೇಲ್ ಸಮುದಾಯದ ಬೆಂಬಲ ದೊರೆಯುವ ಸಾಧ್ಯತೆ
* ಕೆಎಚ್‌ಎಎಂ (ಕ್ಷತ್ರಿಯ, ಹರಿಜನ, ಆದಿವಾಸಿ, ಮುಸ್ಲಿಂ) ಸಮೀಕರಣ ಕೆಲಸ ಮಾಡುವ ಸಾಧ್ಯತೆ
* ಗ್ರಾಮೀಣ ಮತ್ತು ಬುಡಕಟ್ಟು ಭಾಗದಲ್ಲಿ ಬೆಂಬಲ ಮುಂದುವರಿಕೆ

ಅನನುಕೂಲಕರ ಅಂಶಗಳು
* ಇಡೀ ರಾಜ್ಯವನ್ನು ಪ್ರಭಾವಿಸಬಲ್ಲ ನಾಯಕರ ಕೊರತೆ
* ರಾಜ್ಯ ಘಟಕದಲ್ಲಿ ಅಂತಃಕಲಹ
* ನಗರ ಭಾಗದಲ್ಲಿ ಬಿಜೆಪಿ ಪ್ರಭಾವವನ್ನು ಸರಿಗಟ್ಟುವಲ್ಲಿ ವೈಫಲ್ಯ
* 2017ರಲ್ಲಿ ಪಕ್ಷ ತೊರೆದ 16 ಶಾಸಕರು ಬಿಜೆಪಿ ಸೇರ್ಪಡೆ
* ಎಎಪಿ ಹಾಗೂ ಎಐಎಂಐಎಂ ಕಾಂಗ್ರೆಸ್ ಮತಗಳನ್ನು ಕಸಿಯಬಹುದು

***

ಎಎಪಿ ಹೊಡೆತ ಕಾಂಗ್ರೆಸ್‌ಗೋ? ಬಿಜೆಪಿಗೋ?
ಕಳೆದ ಚುನಾವಣೆಯಲ್ಲಷ್ಟೇ ರಾಜ್ಯಕ್ಕೆ ಅಡಿಯಿಟ್ಟಿದ್ದ ಆಮ್ ಆದ್ಮಿ ಪಕ್ಷ (ಎಎಪಿ), 29 ಕ್ಷೇತ್ರಗಳಲ್ಲಷ್ಟೇ ಸ್ಪರ್ಧಿಸಿ ಕೈಸುಟ್ಟುಕೊಂಡಿತ್ತು. ಇದೀಗ ಎಲ್ಲ 182 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಬಾರಿ ಗಮನಾರ್ಹ ಪ್ರದರ್ಶನ ತೋರಿ, ನಗರ ಭಾಗದಲ್ಲಿ ಹೆಚ್ಚು ಮತ ಪಡೆಯಬಹುದು ಎನ್ನುವ ಅಂದಾಜಿದೆ. ಆದರೆ, ಪಕ್ಷವು ಬಿಜೆಪಿ ಮತಗಳನ್ನು ಕಸಿಯಲಿದೆಯೇ ಅಥವಾ ಕಾಂಗ್ರೆಸ್‌ನ ಮತಬ್ಯಾಂಕ್‌ಗೆ ಕನ್ನ ಹಾಕಲಿದೆಯೇ ಎಂಬುದು ಈಗಿರುವ ಪ್ರಶ್ನೆ. ಪಂಜಾಬ್‌ ವಿಧಾನಸಭಾ ಚುನಾವಣೆಗೂ ಮುನ್ನ ಭಗವಂತ ಮಾನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ ಯಶಸ್ಸು ಕಂಡಿರುವ ಎಎಪಿ, ಗುಜರಾತ್‌ನಲ್ಲಿ ಈಸುದಾನ್ ಗಢವಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೆಸರಿಸಿ, ದಾಳ ಉರುಳಿಸಿದೆ

ಅನುಕೂಲಕರ ಅಂಶಗಳು
* ಮಧ್ಯಮ ವರ್ಗದವರ ಓಲೈಕೆ
* ಕೇಜ್ರಿವಾಲ್ ಅವರ ವರ್ಚಸ್ಸು ಹಾಗೂ ದೆಹಲಿ ಸರ್ಕಾರದ ಮಾದರಿ
* ಉಚಿತ ವಿದ್ಯುತ್, ನೀರು, ಶಿಕ್ಷಣ ಹಾಗೂ ಆರೋಗ್ಯದ ಭರವಸೆ
* ಕೆಲವು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲುವಿನ ಬಲ

ಅನನುಕೂಲಕರ ಅಂಶಗಳು
* ಬೃಹತ್ ಜನಸಮೂಹ ಸೆಳೆಯಬಲ್ಲ ಸ್ಥಳೀಯ ನಾಯಕರ ಕೊರತೆ
* ತಳಮಟ್ಟದಲ್ಲಿ ಪಕ್ಷದ ಸಂಘಟನೆ ತೃಪ್ತಿದಾಯಕವಾಗಿಲ್ಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು