ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣ: 38 ಜನರಿಗೆ ಗಲ್ಲು, 11 ಜನರಿಗೆ ಜೀವಾವಧಿ

2008ರ ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣದ ತೀರ್ಪು
Last Updated 18 ಫೆಬ್ರುವರಿ 2022, 19:45 IST
ಅಕ್ಷರ ಗಾತ್ರ

ಅಹಮದಾಬಾದ್: ಅಹಮದಾಬಾದ್‌ನಲ್ಲಿ 2008ರಲ್ಲಿ ನಡೆದಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ 38 ಜನರಿಗೆ ಗಲ್ಲುಶಿಕ್ಷೆ ಮತ್ತು 11 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಇಲ್ಲಿನ ವಿಶೇಷ ನ್ಯಾಯಾಲಯವು ಆದೇಶ ಹೊರಡಿಸಿದೆ. ನಗರದ ಹಲವೆಡೆ ನಡೆದಿದ್ದ ಬಾಂಬ್‌ ಸ್ಪೋಟದಲ್ಲಿ 56 ಜನರು ಮೃತಪಟ್ಟಿದ್ದರು ಮತ್ತು 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

2008ರ ಜುಲೈ 26ರಂದು ಸರಣಿ ಸ್ಪೋಟ ಸಂಭವಿಸಿತ್ತು. ಪ್ರಕರಣದ ವಿಚಾರಣೆಯನ್ನು 2009ರಲ್ಲಿ ಆರಂಭಿಸಲಾಗಿತ್ತು. 78 ಆರೋಪಿಗಳ ವಿರುದ್ಧ ಅಹಮದಾಬಾದ್ ವಿಶೇಷ ನ್ಯಾಯಾಲಯವು ವಿಚಾರಣೆ ಆರಂಭಿಸಿತ್ತು. ಇವರಲ್ಲಿ ಒಬ್ಬ ಮಾಫಿ ಸಾಕ್ಷಿಯಾಗಿ ಬದಲಾಗಿದ್ದರು. ನಂತರದ ದಿನಗಳಲ್ಲಿ ಇನ್ನೂ ನಾಲ್ವರನ್ನು ಬಂಧಿಸಲಾಗಿತ್ತು. ಆ ನಾಲ್ವರ ವಿರುದ್ಧ ಇನ್ನೂ ವಿಚಾರಣೆ ಆರಂಭವಾಗಿಲ್ಲ.

13 ವರ್ಷಗಳ ದೀರ್ಘಾವಧಿಯವರೆಗೆ ನಡೆದ ವಿಚಾರಣೆ 2021ರ ಸೆಪ್ಟೆಂಬರ್‌ನಲ್ಲಿ ಪೂರ್ಣಗೊಂಡಿತ್ತು. ಪ್ರಕರಣದಲ್ಲಿ 49 ಜನರು ತಪ್ಪಿತಸ್ಥರು ಎಂದು ಇದೇ 8ರಂದು ವಿಶೇಷ ನ್ಯಾಯಾಲಯವು ತೀರ್ಪು ನೀಡಿತ್ತು. 28 ಜನರನ್ನು ಖುಲಾಸೆ ಮಾಡಿತ್ತು.

‘ಇದು ಅತ್ಯಂತ ಅಪರೂಪದ ಪ್ರಕರಣವಾಗಿದೆ. ಹೀಗಾಗಿ ತಪ್ಪಿತಸ್ಥರಿಗೆ ಮರಣದಂಡನೆ ವಿಧಿಸಬೇಕು’ ಎಂದು ಸರ್ಕಾರಿ ವಕೀಲ ಅರವಿಂದ್ ಪಟೇಲ್‌ ವಾದಿಸಿದ್ದರು. ಇದನ್ನು ಪರಿಗಣಿಸಿರುವ ನ್ಯಾಯಾಲಯವು 38 ಜನರಿಗೆ ಗಲ್ಲುಶಿಕ್ಷೆ ಮತ್ತು 11 ಜನರಿಗೆ ಜೀವಾವಧಿ ಶಿಕ್ಷೆ ಘೋಷಿಸಿದೆ. ಶಿಕ್ಷೆಗೆ ಗುರಿಯಾದವರೆಲ್ಲರೂ ಉಗ್ರ ಸಂಘಟನೆ ಇಂಡಿಯನ್ ಮುಜಾಹಿದೀನ್‌ ಸದಸ್ಯರು’ ಎಂದು ಅರವಿಂದ ಪಟೇಲ್ ಹೇಳಿದ್ದಾರೆ.

‘ವಿಚಾರಣೆ ಆರಂಭವಾದಾಗಿನಿಂದ ಎಲ್ಲರೂ 14 ವರ್ಷ ಜೈಲಿನಲ್ಲಿ ಕಳೆದಿದ್ದಾರೆ. ಹೀಗಾಗಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಕೋರಿದ್ದೆವು. ಆದರೆ ನಮ್ಮ ಕೋರಿಕೆಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಈತೀರ್ಪನ್ನು ನಾವು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ’ ಎಂದು ತಪ್ಪಿತಸ್ಥರ ಪರ ವಕೀಲರು ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆಯ 302ನೇ ಸೆಕ್ಷನ್ (ಕೊಲೆ), 120ಬಿ (ಕ್ರಿಮಿನಲ್ ಸಂಚು) ಮತ್ತು ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯ್ದೆಯ (ಯುಎಪಿಎ) ವಿವಿಧ ಸೆಕ್ಷನ್‌ಗಳ ಅಡಿ 38 ಜನರು ತಪ್ಪಿತಸ್ಥರು ಎಂದು 7,015 ಪುಟಗಳ ಸುದೀರ್ಘ ತೀರ್ಪಿನಲ್ಲಿ ವಿವರಿಸಲಾಗಿದೆ. 11 ಜನರನ್ನು ಯುಎಪಿಎ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ತಪ್ಪಿತಸ್ಥರು ಎಂದು ಘೋಷಿಸಲಾಗಿದೆ.

ಶಿಕ್ಷೆಗೆ ಗುರಿಯಾಗಿರುವ 49ರಲ್ಲಿ 48 ಜನರಿಗೆ ತಲಾ ₹2.85 ಲಕ್ಷ ಮತ್ತು ಒಬ್ಬನಿಗೆ ₹2.88 ಲಕ್ಷ ದಂಡ ವಿಧಿಸಲಾಗಿದೆ. ಕೃತ್ಯದಲ್ಲಿ ಮೃತಪಟ್ಟಿದ್ದವರ ಕುಟುಂಬಕ್ಕೆ ತಲಾ ₹1 ಲಕ್ಷ, ಗಂಭೀರವಾಗಿ ಗಾಯಗೊಂಡಿದ್ದವರಿಗೆ ತಲಾ ₹50,000 ಮತ್ತು ಸ್ವಲ್ಪ ಪ್ರಮಾಣದ ಗಾಯಗಳಾಗಿದ್ದವರಿಗೆ ತಲಾ ₹25,000 ಪರಿಹಾರ ನೀಡುವಂತೆ ನ್ಯಾಯಾಲಯವು ಆದೇಶಿಸಿದೆ. ತಪ್ಪಿತಸ್ಥರು ನೀಡುವ ದಂಡದ ಮೊತ್ತದಿಂದಲೇ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಶಿಕ್ಷೆಯ ಆದೇಶ ಹೊರಬಿದ್ದ ತಕ್ಷಣ ಗುಜರಾತ್ ಪೊಲೀಸರು ಅದನ್ನು ಸಂಭ್ರಮಿಸಿದ್ದಾರೆ. ‘ಇದು ಐತಿಹಾಸಿಕ ತೀರ್ಪು’ ಎಂದು ಗುಜರಾತ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

‘ಗೋದ್ರಾ ಸೇಡಿಗಾಗಿ ಸ್ಫೋಟ’

‘2002ರಲ್ಲಿ ಗುಜರಾತ್‌ನಲ್ಲಿ ಗೋದ್ರಾ ಮತ್ತು ಗೋದ್ರೋತ್ತರ ಹತ್ಯಾಖಾಂಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರನ್ನು ಕೊಲ್ಲಲಾಗಿತ್ತು ಎಂದು ಇಂಡಿಯನ್ ಮುಜಾಹಿದೀನ್ ಉಗ್ರರು ನಂಬಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು’ ಎಂದು ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದರು.

‘ಈ ಸ್ಫೋಟಗಳನ್ನು ನಡೆಸಲು ಉಗ್ರರಿಗೆ ಕೇರಳದ ವಾಗಾಮಾನ್ ಅರಣ್ಯ ಪ್ರದೇಶದಲ್ಲಿ 2007ರಲ್ಲಿ ತರಬೇತಿ ನೀಡಲಾಗಿತ್ತು. 2008ರಲ್ಲಿ ಗುಜರಾತ್‌ನ ಹಾಲೋಲ್‌–ಪಾವಗಡ್ ಅರಣ್ಯ ಪ್ರದೇಶದಲ್ಲೂ ತರಬೇತಿ ಶಿಬಿರ ನಡೆಸಲಾಗಿತ್ತು. ಈ ಉಗ್ರರು ಗುಜರಾತ್‌ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ, ಸಚಿವ ಅಮಿತ್ ಶಾ, ಬಿಜೆಪಿ ಶಾಸಕ ಪ್ರದೀಪ್ ಸಿನ್ಹಾ ಜಡೇಜಾ, ಈಗಿನ ಕೇಂದ್ರ ಸಚಿವ ಪ್ರದೀಪ್ ಪರಮಾರ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು’ ಎಂದು ಆರೋಪಪಟ್ಟಿಯಲ್ಲಿ ವಿವರಿಸಲಾಗಿತ್ತು.

2008ರ ಜುಲೈ 26ರಂದು ಅಹಮದಾಬಾದ್‌ನ 20 ಕಡೆ ಬಾಂಬ್‌ಗಳನ್ನು ಸ್ಫೋಟಿಸಲಾಗಿತ್ತು. ಅಹಮದಾಬಾದ್‌ ಮುನ್ಸಿಪಲ್ ಆಸ್ಪತ್ರೆ, ಸರ್ಕಾರಿ ಬಸ್‌ಗಳು, ಕಾರ್‌ ಪಾರ್ಕಿಂಗ್‌ ಮತ್ತು ಸೈಕಲ್ ನಿಲ್ದಾಣಗಳಲ್ಲಿ ಬಾಂಬ್‌ ಸ್ಫೋಟಿಸಲಾಗಿತ್ತು. ಈ ಘಟನೆಗಳಲ್ಲಿ 56 ಜನರು ಮೃತಪಟ್ಟಿದ್ದರು. ಈ ಸಂಬಂಧ ಒಟ್ಟು 20 ಎಫ್‌ಐಆರ್‌ಗಳು ದಾಖಲಾಗಿದ್ದವು.

ಕೆಲವೇ ದಿನಗಳ ಅಂತರದಲ್ಲಿ ಸೂರತ್‌ ನಗರದ ವಿವಿಧೆಡೆ 29 ಸಜೀವ ಬಾಂಬ್‌ಗಳನ್ನು ಪೊಲೀಸರು ಪತ್ತೆ ಮಾಡಿದ್ದರು. ಈ ಸಂಬಂಧ 15 ಎಫ್‌ಐಆರ್‌ಗಳು ದಾಖಲಾಗಿದ್ದವು. ಎಲ್ಲಾ ಎಫ್‌ಐಆರ್‌ಗಳನ್ನು ಒಟ್ಟುಗೂಡಿಸಿ, ಪ್ರಕರಣದ ತನಿಖೆಯನ್ನು ಅಹಮದಾಬಾದ್‌ ಅಪರಾಧ ವಿಭಾಗದ ಪೊಲೀಸರಿಗೆ ಒಪ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT