ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಕೀಯ ನಿವೃತ್ತಿ ಸುಳಿವು ನೀಡಿದ ಸೋನಿಯಾ, ಪಕ್ಷಕ್ಕೆ ದೊಡ್ಡ ತಿರುವು ಎಂದು ಬಣ್ಣನೆ

Published : 25 ಫೆಬ್ರುವರಿ 2023, 10:21 IST
ಫಾಲೋ ಮಾಡಿ
Comments

ರಾಯ್‌ಪುರ: ಭಾರತ್ ಜೋಡೊ ಯಾತ್ರೆಯೊಂದಿಗೆ ನನ್ನ ಇನ್ನಿಂಗ್ಸ್ ಮುಕ್ತಾಯವಾಗಬಹುದು ಎಂದು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ರಾಜಕೀಯದಿಂದ ನಿವೃತ್ತಿ ಹೊಂದುವ ಕುರಿತು ಸುಳಿವು ನೀಡಿದ್ದಾರೆ.

ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ‘ನನಗೆ ಅತ್ಯಂತ ಸಂತೋಷಕರ ಸಂಗತಿಯೆಂದರೆ, ನನ್ನ ಇನ್ನಿಂಗ್ಸ್ ಭಾರತ್ ಜೋಡೊ ಯಾತ್ರೆಯೊಂದಿಗೆ ಮುಕ್ತಾಯವಾಗಬಹುದು. ಇದು ಪಕ್ಷಕ್ಕೆ ಮಹತ್ವದ ತಿರುವು ನೀಡಲಿದೆ’ ಎಂದಿದ್ದಾರೆ.

‘2004 ಮತ್ತು 2009ರ ಡಾ. ಮನಮೋಹನ್ ಸಿಂಗ್ ಅವರ ಸಮರ್ಥ ನಾಯಕತ್ವ ಮತ್ತು ಭಾರತ್ ಜೋಡೊ ಯಾತ್ರೆ ನನಗೆ ವೈಯಕ್ತಿಕ ತೃಪ್ತಿ ನೀಡಿದೆ. ದೇಶದ ಜನರು ಅಗಾಧವಾಗಿ ಸಾಮರಸ್ಯ, ಸಹಿಷ್ಣುತೆ ಮತ್ತು ಸಮಾನತೆಯನ್ನು ಬಯಸುತ್ತಾರೆ ಎಂಬುದನ್ನು ಭಾರತ್ ಜೋಡೊ ಯಾತ್ರೆ ಸಾಬೀತುಪಡಿಸಿದೆ’ ಎಂದು ತಿಳಿಸಿದ್ದಾರೆ.

‘ಭಾರತ್ ಜೋಡೊ ಯಾತ್ರೆಯ ನಾಯಕತ್ವ ವಹಿಸಿದ್ದ ರಾಹುಲ್‌ ಗಾಂಧಿ ಅವರಿಗೆ ವಿಶೇಷ ಧನ್ಯವಾದ ಹೇಳುತ್ತೇನೆ. ಏಕೆಂದರೆ ಯಾತ್ರೆಯ ಮೂಲಕ ಕಾಂಗ್ರೆಸ್ ಜನರೊಂದಿಗೆ ನಿಂತಿದೆ. ಜನರಿಗಾಗಿ ಸದಾ ಹೋರಾಡಲು ಸಿದ್ಧವಿದೆ ಎಂಬುದನ್ನು ತೋರಿಸಿದ್ದಾರೆ. ಜತೆಗೆ, ಯಾತ್ರೆಯ ಯಶಸ್ಸಿಗೆ ಶ್ರಮಿಸಿದ ಎಲ್ಲಾ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ’ ಎಂದು ಹೇಳಿದ್ದಾರೆ.

ಬಿಜೆಪಿ ವಿರುದ್ಧ ಟೀಕೆ: ‘ಸದ್ಯದ ಸನ್ನಿವೇಶ ಕಾಂಗ್ರೆಸ್ ಮತ್ತು ಇಡೀ ದೇಶಕ್ಕೆ ಸವಾಲಿನ ಸಮಯವಾಗಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶದ ಹಲವು ಸಂಸ್ಥೆಗಳನ್ನು ವಶಪಡಿಸಿಕೊಂಡು ಬುಡಮೇಲು ಮಾಡಲು ಪ್ರಯತ್ನಿಸುತ್ತಿವೆ. ಇದು ಕೆಲವು ಉದ್ಯಮಿಗಳಿಗೆ ಒಲವು ತೋರುವ ಮೂಲಕ ಆರ್ಥಿಕ ವಿನಾಶಕ್ಕೆ ಕಾರಣವಾಗಿದೆ ಎಂದು ಸೋನಿಯಾ ಗಾಂಧಿ ಟೀಕಿಸಿದ್ದಾರೆ.

76 ವರ್ಷದ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನಿವೃತ್ತಿಯ ಸುಳಿವು ನೀಡಿದರೂ, ಉತ್ತರ ಪ್ರದೇಶದ ರಾಯ್‌ಬರೇಲಿಯಿಂದ ಮತ್ತೊಮ್ಮೆ ಸಂಸತ್‌ಗೆ ಸ್ಪರ್ಧಿಸುವರೇ ಅಥವಾ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾಗೆ ಸ್ಥಾನವನ್ನು ಬಿಟ್ಟುಕೊಡುವರೇ ಎಂಬುದನ್ನು ಕಾದುನೋಡಬೇಕೆದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT