ನವದೆಹಲಿ: ಕಾಂಗ್ರೆಸ್ ಸಂಸದೆ ರಜನಿ ಅಶೋಕ್ ರಾವ್ ಪಾಟೀಲ್ ಅವರನ್ನು ಪ್ರಸಕ್ತ ಬಜೆಟ್ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ. ಈ ಆದೇಶವನ್ನು ಹಿಂಪಡೆಯಬೇಕು ಹಾಗೂ ಅದಾನಿ ಸಮೂಹದ ವಿರುದ್ಧ ಕೇಳಿ ಬಂದಿರುವ ಆರೋಪಗಳ ತನಿಖೆಗೆ ಜಂಟಿ ಸಂಸದೀಯ ಸಮಿತಿಯನ್ನು (ಜೆಪಿಸಿ) ರಚಿಸಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷಗಳ ನಾಯಕರು ರಾಜ್ಯಸಭೆಯಲ್ಲಿ ಘೋಷಣೆಗಳನ್ನು ಕೂಗಿದ್ದಾರೆ. ಹೀಗಾಗಿ, ಕಲಾಪವನ್ನು ಸೋಮವಾರ ಅಲ್ಪಾವಧಿಗೆ ಮುಂದೂಡಲಾಗಿದೆ.
ಸದನ ಆರಂಭವಾಗುತ್ತಿದ್ದಂತೆಯೇ, ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ವಿರೋಧ ಪಕ್ಷಗಳ ಸದಸ್ಯರು ಪಟ್ಟು ಹಿಡಿದರು. ಈ ವೇಳೆ ಸಭಾಪತಿ ಜಗದೀಪ್ ಧನಕರ್ ಅವರು ಖರ್ಗೆ ಅವರಿಗೆ ಮಾತನಾಡಲು ಅನುವುಮಾಡಿಕೊಟ್ಟರು.
ಅದೇ ವೇಳೆ ವಿರೋಧ ಪಕ್ಷಗಳ ಹಲವು ಹಲವು ಸಂಸದರು, ರಜನಿ ಅಶೋಕ್ ರಾವ್ ಪಾಟೀಲ್ ಅವರ ಮೇಲೆ ಹೇರಿರುವ ನಿಷೇಧವನ್ನು ಹಿಂಪಡೆಯಬೇಕು ಎಂದು ಆಗ್ರಹಿದರು. ಹಲವು ಸದನದ ಬಾವಿಗಿಳಿದು ಪ್ರತಿಭಟಿಸಿದರು.
ಇದನ್ನೂ ಓದಿ: ಬಜೆಟ್ ಅಧಿವೇಶನ: ಸಂಸದೆ ರಜನಿ ಅಶೋಕರಾವ್ ಅಮಾನತು
ಹೀಗಾಗಿ ಕೇಂದ್ರ ಸಚಿವ ಹಾಗೂ ರಾಜ್ಯ ಸಭೆ ನಾಯಕ ಪಿಯೂಷ್ ಗೋಯಲ್ ಅವರು ಕಲಾಪವನ್ನು ಕೆಲ ಸಮಯ ಮುಂದೂಡುವಂತೆ ಮತ್ತು ಪ್ರತಿ ಪಕ್ಷಗಳ ನಾಯಕರೊಂದಿಗೆ ಮಾತುಕತೆ ನಡೆಸುವಂತೆ ಸಭಾಪತಿಯವರಿಗೆ ಸಲಹೆ ನೀಡಿದರು. ಅದರಂತೆ 11.50ರ ವರೆಗೆ ಕಲಾಪವನ್ನು ಮುಂದೂಡಲಾಗಿದೆ.
ಕಲಾಪದ ವಿಡಿಯೊ ಚಿತ್ರೀಕರಣ ಮಾಡಿದ ಆರೋಪದ ಮೇಲೆ ರಜನಿ ಅವರನ್ನು ಅಮಾನತು ಮಾಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.