ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್‌: ತ್ರಿಸದಸ್ಯ ಪೀಠ ರಚನೆಗೆ ಸಮ್ಮತಿ

ಹಿಜಾಬ್‌: ಮಧ್ಯಂತರ ಆದೇಶ ನೀಡಲು ‘ಸುಪ್ರೀಂ’ಗೆ ಮನವಿ
Last Updated 23 ಜನವರಿ 2023, 19:58 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಪದವಿ ಪೂರ್ವ ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧಿಸಿರುವ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿ ಪ್ರಕರಣದ ವಿಚಾರಣೆಗೆ ತ್ರಿಸದಸ್ಯ ಪೀಠ ಸ್ಥಾಪಿಸುವ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್‌ ಸೋಮವಾರ ಸಮ್ಮತಿಸಿದೆ.

ವಿದ್ಯಾರ್ಥಿಗಳ ಪರವಾಗಿ ಹಾಜರಾದ ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ ಅವರು ಮುಖ್ಯ ನ್ಯಾಯ ಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯ ಮೂರ್ತಿಗಳಾದ ವಿ.ರಾಮಸುಬ್ರಮಣಿಯನ್‌, ಜೆ.ಬಿ.ಪಾರ್ದಿವಾಲಾ ‍‍ಪೀಠದ ಎದುರು ವಿಷಯವನ್ನು ಪ್ರಸ್ತಾಪಿಸಿದರು.

‘ಸುಪ್ರೀಂ ಕೋರ್ಟ್‌ ಭಿನ್ನಮತದ ತೀರ್ಪು ನೀಡಿದ ಬಳಿಕ ಹಲವು ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳಿಗೆ ತೆರಳಿದ್ದಾರೆ. ಆದರೆ, ಅವರು ಸರ್ಕಾರಿ ಕಾಲೇಜುಗಳಲ್ಲೇ ಪರೀಕ್ಷೆ ಬರೆಯ ಬೇಕಿದೆ. ಕೆಲವು ಕಾಲೇಜುಗಳ ತರಗತಿಗಳಿಗೆ ಫೆಬ್ರುವರಿ 6ರಿಂದ ನಿಗದಿಯಾ ಗಿರುವ ಪ್ರಾಯೋಗಿಕ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಮಧ್ಯಂತರ ಆದೇಶ ಹೊರಡಿಸುವ ಅಗತ್ಯ ಇದೆ’ ಎಂದು ಪೀಠದ ಗಮನಕ್ಕೆ ತಂದರು.

‘ಇದು ಸ್ಕಾರ್ಫ್‌ಗೆ ಸಂಬಂಧಿಸಿದ ವಿಷಯ. ಫೆಬ್ರುವರಿ 6ರಿಂದ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ. ಹಿಜಾಬ್‌ ಧರಿಸಿ ಪರೀಕ್ಷೆಗೆ ಹಾಜರಾಗಲು ಮಧ್ಯಂತರ ನಿರ್ದೇಶನ ನೀಡಬೇಕು’ ಎಂದು ಅವರು ಮನವಿ ಮಾಡಿದರು.

‘ಇದನ್ನು ನಾವು ಪರಿಶೀಲಿಸುತ್ತೇವೆ. ಇದು ತ್ರಿಸದಸ್ಯ ಪೀಠಕ್ಕೆ ಸಂಬಂಧಿಸಿದ ವಿಚಾರ. ಪ್ರಕರಣದ ವಿಚಾರಣೆಗೆ ದಿನಾಂಕ
ನಿಗದಿಪಡಿಸುತ್ತೇವೆ’ ಎಂದು ಮುಖ್ಯ ನ್ಯಾಯಮೂರ್ತಿಯವರು ಹೇಳಿದರು.

ಹಿಜಾಬ್‌ ಮೇಲ್ಮನವಿ ‍ಪ್ರಕರಣ ದಲ್ಲಿ 2022ರ ಅಕ್ಟೋಬರ್‌ 13ರಂದು ಭಿನ್ನಮತದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿತ್ತು.

ನ್ಯಾಯಮೂರ್ತಿ ಹೇಮಂತ್‌ ಗುಪ್ತ ಅವರು ವಿದ್ಯಾರ್ಥಿನಿಯರ ಮೇಲ್ಮನವಿಗಳನ್ನು ತಿರಸ್ಕರಿಸಿದ್ದರು. ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಹಿಜಾಬ್‌ ನಿಷೇಧಿಸಿ ಕರ್ನಾಟಕ ಸರ್ಕಾರ ಹೊರಡಿಸಿರುವ ಫೆಬ್ರುವರಿ 5ರ ಅಧಿಸೂಚನೆಯನ್ನು ರದ್ದುಪಡಿಸಿದ್ದರು.

‘ಅಗತ್ಯ ಧಾರ್ಮಿಕ ಪದ್ಧತಿ ಕುರಿತು ವಿವಾದ ಸೃಷ್ಟಿಸುವ ಅಗತ್ಯ ಇರಲಿಲ್ಲ ಮತ್ತು ಹೈಕೋರ್ಟ್‌ ತಪ್ಪು ನಿರ್ಧಾರ ಕೈಗೊಂಡಿದೆ’ ಎಂದು ಸುಧಾಂಶು ಧುಲಿಯಾ ಅಭಿಪ್ರಾಯಪಟ್ಟಿದ್ದರು. ‘ಹಿಜಾಬ್‌ ಧರಿಸುವುದು ಆಯ್ಕೆಗೆ ಬಿಟ್ಟಿದ್ದು. ಅದಕ್ಕಿಂತ ಹೆಚ್ಚೂ ಅಲ್ಲ ಕಡಿಮೆಯೂ ಅಲ್ಲ. ಇಂತಹ ನಿರ್ಬಂಧ ಗಳನ್ನು ಹೇರುವ ಮೂಲಕ ನಾವು ವಿದ್ಯಾರ್ಥಿನಿಯರ ಜೀವನ ಸುಧಾರಿಸು ತ್ತಿದ್ದೇವೆಯೇ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ’ ಎಂದು ಹೇಳಿದ್ದರು.

ನ್ಯಾಯಮೂರ್ತಿ ಹೇಮಂತ್‌ ಗುಪ್ತ, ‘ಜಾತ್ಯತೀತತೆ ಎಲ್ಲ ಪ್ರಜೆಗಳಿಗೆ ಅನ್ವಯವಾಗುತ್ತದೆ. ಆದ್ದರಿಂದ ಒಂದು ಧಾರ್ಮಿಕ ಸಮುದಾಯಕ್ಕೆ ಅವರ ಧಾರ್ಮಿಕ ಚಿಹ್ನೆಗಳನ್ನು ಬಳಸಲು ಅನುಮತಿ ನೀಡುವುದು ಜಾತ್ಯತೀತ ಮನೋಭಾವಕ್ಕೆ ಧಕ್ಕೆ ತರುತ್ತದೆ. ಆದ್ದರಿಂದ, ಸರ್ಕಾರದ ಆದೇಶವನ್ನು ಜಾತ್ಯತೀತ ಅಥವಾ 1983ರ ಕರ್ನಾಟಕ ಶಿಕ್ಷಣ ಕಾಯ್ದೆಯ ಉದ್ದೇಶಗಳ ಉಲ್ಲಂಘನೆ ಅಲ್ಲ’ ಎಂದು ತೀರ್ಪು ನೀಡಿದ್ದರು.

‘ಸರ್ಕಾರಿ ಕಾಲೇಜುಗಳ ತರಗತಿಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡುವಂತೆ ನಿರ್ದೇಶಿಸಬೇಕು' ಎಂದು ಕೋರಲಾಗಿದ್ದ ಎಲ್ಲ ವೈಯಕ್ತಿಕ ಹಾಗೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು 2022ರ ಮಾರ್ಚ್‌ 15ರಂದು ತಿರಸ್ಕರಿಸಿದ್ದ ಹೈಕೋರ್ಟ್‌ನ ತ್ರಿಸದಸ್ಯ ಪೀಠ, ‘ಈ ವಿಷಯವನ್ನು ದೇಶದಾದ್ಯಂತ ವಿವಾದದ ವಿಷಯವನ್ನಾಗಿ ಮಾಡಿರುವ ಹಿಂದೆ ಕಾಣದ ಕೈಗಳ ಕೈವಾಡ ಇದೆ’ ಎಂಬ ಸಂಶಯ ವ್ಯಕ್ತಪಡಿಸಿತ್ತು.

ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ 22 ಅರ್ಜಿದಾರರು, ‘ವಿದ್ಯಾರ್ಥಿಗಳಿಗೆ ಕಡ್ಡಾಯವಾದ ಸಮವಸ್ತ್ರ ರೂಪಿಸಿ ಕರ್ನಾಟಕ ಸರ್ಕಾರ ಕಾಯ್ದೆ ಅಥವಾ ನಿಯಮ ಜಾರಿಗೊಳಿಸಿಲ್ಲ. ಹಾಗಾಗಿ, ಹಿಜಾಬ್‌ ಧರಿಸುವುದನ್ನು ನಿಷೇಧಿಸಿರುವುದು ಸರಿಯಲ್ಲ. ಹಿಜಾಬ್‌ ಧರಿಸುವುದನ್ನು ಸಂವಿಧಾನದ ಅಡಿ ಖಾತರಿಪಡಿ ಸಲಾದ ಗೋಪ್ಯತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಆತ್ಮಸಾಕ್ಷಿಯ ಮೂಲಭೂತ ಹಕ್ಕುಗಳ ಅಡಿಯಲ್ಲಿ ರಕ್ಷಿಸಲಾಗಿದೆ. ಆದರೆ, ಅದನ್ನು ಅರಿಯದೇ ಹೈಕೋರ್ಟ್‌ ಪ್ರಮಾದವೆಸಗಿದೆ’ ಎಂದು ಆಕ್ಷೇಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT