ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಸಿದ್ದನ್ನು ಧರಿಸುವ ಹಕ್ಕು ಎಲ್ಲರಿಗೂ ಇದೆ: ಹಿಜಾಬ್‌ ಬಗ್ಗೆ ನಿತೀಶ್‌ ಅಭಿಪ್ರಾಯ

Last Updated 15 ಫೆಬ್ರುವರಿ 2022, 2:49 IST
ಅಕ್ಷರ ಗಾತ್ರ

ಪಟ್ನಾ: ‘ಪ್ರತಿ ಧರ್ಮವನ್ನು ಮತ್ತು ಅವರ ಆರಾಧನೆಯ ಆಚರಣೆಗಳನ್ನು ಗೌರವಿಸುತ್ತೇನೆ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ಹೇಳಿದ್ದಾರೆ.

ಬಿಹಾರದಲ್ಲಿ ಬಿಜೆಪಿ ಮೈತ್ರಿಯೊಂದಿಗೆ ಸರ್ಕಾರ ರಚಿಸಿರುವ ಜೆಡಿಯು ವರಿಷ್ಠ, ಮುಖ್ಯಮಂತ್ರಿ ನಿತೀಶ್‌ ಅವರ ಈ ಹೇಳಿಕೆಯು ಕರ್ನಾಟಕದ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಪ್ರಾಮುಖ್ಯತೆ ಪಡೆದಿದೆ.

'ಯಾರಾದರೂ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಂಡರೆ, ಹಣೆಯ ಮೇಲೆ ಶ್ರೀಗಂಧದ ಬೊಟ್ಟು ಇಟ್ಟುಕೊಂಡರೆ ಅದು ವಿವಾದಾತ್ಮಕ ವಿಷಯವಾಗುವುದಿಲ್ಲ ಎಂದು ನಾನು ನಂಬುತ್ತೇನೆ. ಪ್ರತಿಯೊಬ್ಬ ವ್ಯಕ್ತಿಗೂ ಅವರು ಬಯಸಿದ್ದನ್ನು ಧರಿಸುವ ಹಕ್ಕಿದೆ. ಈ ವಿಷಯದಲ್ಲಿ ನಮ್ಮದೇನೂ ಆಕ್ಷೇಪಗಳಿಲ್ಲ. ಅಂತಹ ಯಾವ ವಿವಾದಗಳೂ ಬಿಹಾರದಲ್ಲಿಲ್ಲ’ ಎಂದು ನಿತೀಶ್‌ ಹೇಳಿದ್ದಾರೆ.

ಬಿಹಾರದ ಶಾಲೆಗಳಲ್ಲಿ ಮಕ್ಕಳು ಒಂದೇ ರೀತಿಯ ಬಟ್ಟೆ ಧರಿಸುತ್ತಾರೆ. ನಾವು ಪರಸ್ಪರರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತೇವೆ. ಅವರ ಧರ್ಮ ಅಥವಾ ಸಂಸ್ಕೃತಿಯ ಆಚರಣೆಯಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಆದ್ದರಿಂದಲೇ ಇಂತಹ ವಿಷಯಗಳತ್ತ ಗಮನ ಹರಿಸುವುದಿಲ್ಲ ಎಂದಿದ್ದಾರೆ.

ಹಿಜಾಬ್‌ ವಿವಾದದ ಕುರಿತು ಪ್ರತಿಕ್ರಿಯಿಸುವ ವೇಳೆ ಭಗವಧ್ಜಜವೇ ಮುಂದೊಂದು ದಿನ ರಾಷ್ಟ್ರ ಧ್ವಜವಾಗಲಿದೆ ಎಂದು ಸಚಿವ ಕೆ.ಎಸ್‌ ಈಶ್ವರಪ್ಪ ಅವರು ನೀಡಿದ್ದ ಹೇಳಿಕೆಯನ್ನು ಜೆಡಿಯುನ ಸಂಸದೀಯ ಮಂಡಳಿ ಅಧ್ಯಕ್ಷ ಉಪೇಂದ್ರ ಕುಶ್ವಾಹ ಟೀಕಿಸಿದ್ದರು. ಈಶ್ವರಪ್ಪ ಅವರನ್ನು ದೇಶದ್ರೋಹಿ ಎಂದೂ ಕರೆದಿದ್ದರು. ಹೀಗಿರುವಾಗಲೇ, ಪಕ್ಷದ ವರಿಷ್ಠ ನಿತೀಶ್‌ ಅವರೂ ಈ ಹೇಳಿಕೆ ನೀಡಿದ್ದಾರೆ.

‘ಸಾಮ್ರಾಟ್ ಅಶೋಕನನ್ನು ಅವಮಾನಿಸುವ ಬಿಜೆಪಿ ನಾಯಕರು ಈಗ ನಮ್ಮ ರಾಷ್ಟ್ರಧ್ವಜಕ್ಕೂ ಅಪಮಾನ ಮಾಡುತ್ತಿದ್ದಾರೆ. ದೇಶ ಇದನ್ನು ಹೇಗೆ ಸಹಿಸಿಕೊಳ್ಳುತ್ತದೆ? ಕೆ.ಎಸ್‌ ಈಶ್ವರಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾನು ಪ‍್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರುನ್ನು ನಾನು ಆಗ್ರಹಿಸುತ್ತೇನೆ ’ ಎಂದು ಉಪೇಂದ್ರ ಕುಶ್ವಾಹ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT