ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಪಡೆ ಬಲವೃದ್ಧಿಗೆ ಕ್ರಮ: ವಿ.ಆರ್‌.ಚೌಧರಿ

Last Updated 5 ಅಕ್ಟೋಬರ್ 2021, 16:18 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ವಾಯುಪಡೆಗೆ ವಿವಿಧ ಯುದ್ಧ ವಿಮಾನಗಳ ಯೋಜಿಸಿರುವಂತೆ ಸಕಾಲದಲ್ಲಿ ಸೇರ್ಪಡೆಯಾದರೂ ಮಂಜೂರಾಗಿರುವ ಎಲ್ಲ 42ಯುದ್ಧ ಸಜ್ಜಿತ ಘಟಕಗಳ ಪೂರ್ಣ ಸಾಮರ್ಥ್ಯವನ್ನು ಮುಂದಿನ ಒಂದು ದಶಕದಲ್ಲಿ ಹೊಂದುವ ಸಾಧ್ಯತೆಗಳು ಕಡಿಮೆ ಎಂದು ವಾಯುಪಡೆಯ ಮುಖ್ಯಸ್ಥರಾದ ವಿ.ಆರ್‌.ಚೌಧರಿ ಅವರು ಮಂಗಳವಾರ ತಿಳಿಸಿದರು.

ತೇಜಸ್‌ ಹಗುರ ಯುದ್ಧವಿಮಾನ ಎಂಕೆ–1ನ ನಾಲ್ಕು ಘಟಕ, ಅತ್ಯಾಧುನಿಕ ಮಧ್ಯಮ ಕ್ರಮಾಂಕದ ಯುದ್ಧ ವಿಮಾನಗಳ 5–6 ಘಟಕ, ದೇಶೀಯ ಜೆಟ್‌ ವಿಮಾನಗಳ ಅಭಿವೃದ್ಧಿ ಪ್ರಗತಿಯಲ್ಲಿರುವುದು, ಮಧ್ಯಮ ಬಹುಪಯೋಗಿ ಯುದ್ಧವಿಮಾನಗಳ 6 ಘಟಕಗಳು (ಜಾಗತಿಕ ಟೆಂಡರ್ ಅಂತಿಮವಾಗಿಲ್ಲ) ಸಕಾಲದಲ್ಲಿ ಸೇರ್ಪಡೆಯಾದರೂ ಮುಂದಿನ ಒಂದು ದಶಕದಲ್ಲಿ ಒಟ್ಟು 35 ಘಟಕಗಳಷ್ಟೇ ವಾಯುಪಡೆಯಲ್ಲಿರಲಿವೆ.

ಹಳೆಯದಾದ ಯುದ್ಧ ವಿಮಾನಗಳ ವಿಲೇವಾರಿ ಮತ್ತು ಹೊಸ ಯುದ್ಧ ವಿಮಾನಗಳ ಸೇರ್ಪಡೆ ಪ್ರಕ್ರಿಯೆಯು ಚಾಲ್ತಿಯಲ್ಲಿದೆ. ಹೀಗಾಗಿ, ಮುಂದಿನ ಒಂದು ದಶಕದ ಬಳಿಕ ಒಟ್ಟು 35 ಯುದ್ಧ ಸಜ್ಜಿತ ಘಟಕಗಳಷ್ಟೇ ವಾಯುಪಡೆಯಲ್ಲಿ ಇರಲಿವೆ ಎಂದು ಚೌಧರಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 89ನೇ ವಾಯುಪಡೆ ದಿನದ ಮುನ್ನಾ ದಿನ ಅವರು ಮಾತನಾಡುತ್ತಿದ್ದರು.

ಕಡೆಯ ನಾಲ್ಕು ಮಿಗ್‌ 21 ಬಿಐಎಸ್‌ ಯುದ್ಧ ವಿಮಾನಗಳನ್ನು ವಾಯುಪಡೆಯು 3–4 ವರ್ಷದಲ್ಲಿ ವಿಲೇವಾರಿ ಮಾಡಲಿದ್ದು, ಇದಕ್ಕಾಗಿ ಯೋಜನೆ ರೂಪಿಸಲಾಗಿದೆ. ಅಂತೆಯೇ, ದಶಕದ ಅಂತ್ಯದ ವೇಳೆಗೆ ಜಾಗ್ವಾರ್, ಮಿಗ್‌ 29 ಮತ್ತು ಮಿರಾಜ್‌ ವಿಮಾನಗಳನ್ನು ವಿಲೇವಾರಿ ಮಾಡಲಾಗುತ್ತದೆ. ಇದರ ಹೊರತಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಿದ 83 ತೇಜಸ್‌ ಎಲ್‌ಸಿಎ ಮಾರ್ಕ್‌ –1 ವಿಮಾನಗಳ ಸೇರ್ಪಡೆಯನ್ನು ವಾಯುಪಡೆಯು ನಿರೀಕ್ಷಿಸುತ್ತಿದೆ. ಈ ಪ್ರಕ್ರಿಯೆಯು 2024ರಲ್ಲಿ ಆರಂಭವಾಗಲಿದೆ ಎಂದು ವಿವರಿಸಿದರು.

114 ಬಹುಪಯೋಗಿ ಯುದ್ಧ ವಿಮಾನಗಳನ್ನು ಹೊಂದುವುದರ ಕುರಿತ ಪ್ರಶ್ನೆಗೆ, ಜಾಗತಿಕವಾಗಿ ಪ್ರಮುಖ ವೈಮಾನಿಕ ಸಂಸ್ಥೆಗಳು ಈ ಕುರಿತು ಆಸಕ್ತಿ ತೋರಿವೆ. ಕೇಂದ್ರ ಸರ್ಕಾರದ ಅನುಮೋದನೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದರು.

ಅಮೆರಿಕದ ಬೋಯಿಂಗ್ ಮತ್ತು ಲಾಕ್‌ಹೀಡ್‌ ಮಾರ್ಟಿನ್‌, ಸ್ವೀಡನ್‌ನ ಸಾಬ್‌, ರಷ್ಯಾದ ಯುನೈಟೆಡ್ ಏರ್‌ಕ್ರಾಫ್ಟ್‌ ಕಾರ್ಪೊರೇಷನ್‌, ಫ್ರೆಂಚ್‌ನ ಡಾಸೋ ಕಂಪನಿ, ಏರ್‌ಬಸ್ ಈ ಕುರಿತು ಆಸಕ್ತಿಯನ್ನು ವ್ಯಕ್ತಪಡಿಸಿವೆ ಎಂದು ತಿಳಿಸಿದರು.

ಪಾಕಿಸ್ತಾನ ಮತ್ತು ಚೀನಾದ ಜೊತೆಗಿನ ಸಂಭವನೀಯ ಯುದ್ಧಕ್ಕೆ ಭಾರತ ಸಜ್ಜಾಗಬೇಕು ಎಂಬ ಪರಿಸ್ಥಿತಿ ಹಿನ್ನೆಲೆಯಲ್ಲಿ, ಒಂದು ವೇಳೆ ಬಹುಪಯೋಗಿ ಯುದ್ಧ ವಿಮಾನ ಸೇರ್ಪಡೆ ಕಾರ್ಯಗತಗೊಂಡರೂ ಪೂರ್ಣ ಸಾಮರ್ಥ್ಯ ಹೊಂದುವ ವಾಯುಪಡೆಯ ಗುರಿ ಈಡೇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT