ಶನಿವಾರ, ಜುಲೈ 2, 2022
20 °C

ಶ್ರೀಲಂಕಾದಲ್ಲಿ ತುರ್ತು ಶಸ್ತ್ರಚಿಕಿತ್ಸೆಗಷ್ಟೇ ಆದ್ಯತೆ: ಭಾರತ ನೆರವಿನ ಭರವಸೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ವಿದೇಶಿ ವಿನಿಮಯ ಮೀಸಲು ಕೊರತೆಯಿಂದಾಗಿ ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿರುವ ಶ್ರೀಲಂಕಾಗೆ ಸಾಧ್ಯವಾದಷ್ಟು ನೆರವು ನೀಡುವುದಾಗಿ ಭಾರತ ಭರವಸೆ ನೀಡಿದೆ.

ಶ್ರೀಲಂಕಾದ ಪತ್ರಕರ್ತರೊಬ್ಬರು ಆ ದೇಶದ ವೈದ್ಯಕೀಯ ಪರಿಸ್ಥಿತಿ ಕುರಿತು 'ಶ್ರೀಲಂಕಾ ಟ್ವೀಟ್‌' ಟ್ವಿಟರ್‌ ಪುಟದಲ್ಲಿ ಹಾಕಿದ್ದ ಪೋಸ್ಟ್‌ಗೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಪ್ರತಿಕ್ರಿಯಿಸಿದ್ದಾರೆ.

'ಪೆರದೆನಿಯಾ ಆಸ್ಪತ್ರೆಯಲ್ಲಿ ನಿಗದಿಯಾಗಿರುವ ಶಸ್ತ್ರಚಿಕಿತ್ಸೆಗಳು ಔಷಧಿ ಕೊರತೆಯ ಕಾರಣದಿಂದ ನಡೆಯುತ್ತಿಲ್ಲ. ಕೇವಲ ತುರ್ತು ಶಸ್ತ್ರಚಿಕಿತ್ಸೆಗಳನ್ನು ಮಾತ್ರವೇ ನಡೆಸಲಾಗುತ್ತಿದೆ' ಎಂದು 'ಶ್ರೀಲಂಕಾ ಟ್ವೀಟ್‌'ನಲ್ಲಿ ಬರೆಯಲಾಗಿದೆ.

ಇದನ್ನು ಉಲ್ಲೇಖಿಸಿರುವ ಜೈಶಂಕರ್‌, ಈ ಸುದ್ದಿ ನೋಡಿ ಬೇಸರವಾಗಿದೆ. ಭಾರತ ಹೇಗೆ ನೆರವು ನೀಡಲು ಸಾಧ್ಯ ಎಂಬ ಬಗ್ಗೆ ಅಲ್ಲಿನ ಸರ್ಕಾರದೊಂದಿಗೆ ಚರ್ಚಿಸುವಂತೆ ಶ್ರೀಲಂಕಾಗೆ ಭಾರತದ ಹೈ–ಕಮಿಷನರ್‌ ಆಗಿರುವ ಗೋಪಾಲ್‌ ಬಗ್ಲೇ ಅವರಿಗೆ ತಿಳಿಸಿದ್ದೇನೆ ಎಂದಿದ್ದಾರೆ.

ಮಾ. 28ರಿಂದ 30ರವರೆಗೆ ಶ್ರೀಲಂಕಾ ಪ್ರವಾಸದಲ್ಲಿರುವ ಜೈಶಂಕರ್, ನೆರವು ನೀಡುವುದೂ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚಿಸಿದ್ದಾರೆ.

ಶ್ರೀಲಂಕಾಕ್ಕೆ ಭಾರತ ಇತ್ತೀಚೆಗೆ ಆರ್ಥಿಕ ನೆರವು ಘೋಷಿಸಿತ್ತು.

ವಿದೇಶಗಳಿಂದ ಸಮರ್ಪಕವಾಗಿ ಕಾಗದ ತರಿಸಲು ಆಗದಿರುವ ಕಾರಣ ಮತ್ತು ವೆಚ್ಚದಲ್ಲಿ ಭಾರಿ ಏರಿಕೆ ಆಗಿರುವುದರಿಂದ ಮುದ್ರಣ ಆವೃತ್ತಿಯನ್ನು ಸ್ಥಗಿತಗೊಳಿಸುವುದಾಗಿ ಅಲ್ಲಿನ ಎರಡು ಪ್ರಮುಖ ದಿನ ಪತ್ರಿಕೆಗಳು ಈಗಾಗಲೇ ಘೋಷಿಸಿವೆ. ಇತರ ಕೆಲವು ಪತ್ರಿಕೆಗಳು ಪುಟಗಳ ಸಂಖ್ಯೆಯನ್ನು ಕಡಿಮೆಗೊಳಿಸಿವೆ.

ಕಾಗದ ಮತ್ತು ಇಂಕ್‌ ಕೊರತೆಯ ಕಾರಣ ಶಾಲೆಗಳ ವಾರ್ಷಿಕ ಪರೀಕ್ಷೆಗಳನ್ನೂ ಕಳೆದವಾರ ಮುಂದೂಡಲಾಗಿತ್ತು.

'ಬಿಮ್‌ಸ್ಟೆಕ್' ಶೃಂಗಸಭೆ
ಈ ಬಾರಿ ಶ್ರೀಲಂಕಾದಲ್ಲಿ ಆಯೋಜನೆಯಾಗಿರುವ 'ಬಿಮ್‌ಸ್ಟೆಕ್' ಶೃಂಗಸಭೆಗೂ (ಮಾ.30) ಜೈಶಂಕರ್ ಭಾಗವಹಿಸಲಿದ್ದಾರೆ.

ಭಾರತ ಮತ್ತು ಶ್ರೀಲಂಕಾದ ಜತೆಗೆ ಬಾಂಗ್ಲಾದೇಶ, ಮ್ಯಾನ್ಮಾರ್, ಥಾಯ್ಲೆಂಡ್, ನೇಪಾಳ ಮತ್ತು ಭೂತಾನ್ ‘ಬಿಮ್‌ಸ್ಟೆಕ್’ನ ಸದಸ್ಯ ರಾಷ್ಟ್ರಗಳಾಗಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸದಸ್ಯ ರಾಷ್ಟ್ರಗಳ ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

ಇವನ್ನೂ ಓದಿ
ಶ್ರೀಲಂಕಾ: ಆರ್ಥಿಕ ಸ್ಥಿತಿ ಚರ್ಚೆ–ನೆರವಿನ ಭರವಸೆ ಇತ್ತ ವಿದೇಶಾಂಗ ಸಚಿವ ಜೈಶಂಕರ್


   ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

   ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

   ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

   ಈ ವಿಭಾಗದಿಂದ ಇನ್ನಷ್ಟು