ಶುಕ್ರವಾರ, ಡಿಸೆಂಬರ್ 4, 2020
21 °C
ಹಿಂದಿನ ಚುನಾವಣೆಗಿಂತ ಹೆಚ್ಚು ಭಾರತೀಯರ ಆಯ್ಕೆ

ಅಮೆರಿಕ ಚುನಾವಣೆ ಭಾರತೀಯರಿಗೆ ಮನ್ನಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಮುದಾಯ ಈ ಬಾರಿಯ ಚುನಾವಣೆಯಲ್ಲಿ ಗಮನ ಸೆಳೆಯುವ ಸಾಧನೆ ಮಾಡಿದೆ. ಐವರು ಮಹಿಳೆಯರು ಸೇರಿದಂತೆ ಡಜನ್‌ಗಿಂತ ಹೆಚ್ಚು ಭಾರತೀಯರು ಗೆಲುವಿನ ನಗೆ ಬೀರಿದ್ದಾರೆ. ಜತೆಗೆ ಕಮಲಾ ಹ್ಯಾರಿಸ್ ಅವರು ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸಿರುವುದು ಸಮುದಾಯದಲ್ಲಿ ಇನ್ನಷ್ಟು ಪುಳಕ ಮೂಡಿಸಿದೆ.

ಪ್ರಮುಖ ಬ್ಯಾಟಲ್‌ಗ್ರೌಂಡ್‌ ರಾಜ್ಯ ಗಳಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಭಾರತೀಯರು, ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸೆನೆಟ್‌ ಹಾಗೂ ಪ್ರತಿನಿಧಿ ಸಭೆಗೆ ಆಯ್ಕೆಯಾಗಿರುವುದು ವಿಶೇಷ.  ‘ಸಮೋಸಾ ಕಾಕಸ್’ ಎಂದು ಗುರುತಿಸಿಕೊಂಡಿರುವ ನಾಲ್ವರು ಸದಸ್ಯರು ಪ್ರತಿನಿಧಿ ಸಭೆಗೆ ಪುನರಾಯ್ಕೆಯಾಗಿದ್ದಾರೆ. ರೊ ಖನ್ನಾ (ಕ್ಯಾಲಿಫೋರ್ನಿಯಾ), ರಾಜಾ ಕೃಷ್ಣಮೂರ್ತಿ (ಇಲಿನಾಯ್ಸ್), ಪ್ರಮೀಳಾ ಜಯಪಾಲ್ (ವಾಷಿಂಗ್ಟನ್) ಮತ್ತು ಡಾ. ಆಮಿ ಬೆರಾ ಅವರು ಅಮೆರಿಕನ್ನರ ವಿಶ್ವಾಸ ಗಳಿಸುವಲ್ಲಿ ಸಫಲರಾಗಿದ್ದಾರೆ. ಈ ಪೈಕಿ ಆಮಿ ಬೆರಾ ಅವರು ಸತತ ನಾಲ್ಕನೇ ಬಾರಿಗೆ ಪ್ರತಿನಿಧಿ ಸಭೆಗೆ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾರೆ.

ವಿಜೇತರ ಪೈಕಿ 29 ವರ್ಷದ ನೀರಜ್ ಆ್ಯಂಟನಿ ಗಮನ ಸೆಳೆದಿದ್ದಾರೆ. ಇವರು ಒಹಿಯೊ ರಾಜ್ಯದಿಂದ ಸೆನೆಟ್‌ಗೆ ಆಯ್ಕೆಯಾದ ಮೊದಲ ಭಾರತೀಯ ಅಮೆರಿಕನ್ ಎನಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಮಾರ್ಕ್ ಫೊಗೆಲ್ ಅವರನ್ನು ನೀರಜ್ ಸೋಲಿಸಿದ್ದಾರೆ.

ಸಿನಿಮಾ ನಿರ್ದೇಶಕಿ ಮೀರಾ ನಾಯರ್ ಅವರ ಮಗ ಝೋಹ್ರನ್ ಕ್ವಾಮೆ ಮಮದಾನಿ ಅವರು ತಮ್ಮ 29ನೇ ವಯಸ್ಸಿಗೆ ನ್ಯೂಯಾರ್ಕ್ ರಾಜ್ಯದಿಂದ ಗೆದ್ದುಬಂದಿದ್ದಾರೆ. 38 ವರ್ಷದ ಜೆನಿಫರ್ ರಾಜ್‌ಕುಮಾರ್ ಅವರನ್ನು ಮತದಾರರು ಕೈಹಿಡಿದಿದ್ದು, ನ್ಯೂಯಾರ್ಕ್ ರಾಜ್ಯ ಅಸೆಂಬ್ಲಿಗೆ ಆಯ್ಕೆಯಾದ ದಕ್ಷಿಣ ಏಷ್ಯಾ ಮೂಲದ ಮೊದಲಿಗರು ಎನಿಸಿದ್ದಾರೆ. 

ಕೆಂಟುಕಿ ಸ್ಟೇಟ್ ಹೌಸ್‌ಗೆ ನೀಮಾ ಕುಲಕರ್ಣಿ, ನ್ಯೂಯಾರ್ಕ್ ಸ್ಟೇಟ್ ಸೆನೆಟ್‌ಗೆ ಜೆರೆಮಿ ಕೂನೆ, ವಾಷಿಂಗ್ಟನ್ ಸ್ಟೇಟ್ ಹೌಸ್‌ಗೆ ವಂದನಾ ಸ್ಲಾಟರ್, ಮಿಷಿಗನ್ ಸ್ಟೇಟ್ ಹೌಸ್‌ಗೆ ಪದ್ಮಾ ಕುಪ್ಪಾ, ಉತ್ತರ ಕರೋಲಿನಾ ಸ್ಟೇಟ್ ಸೆನೆಟ್‌ಗೆ ಜಯ ಚೌಧರಿ, ಟೆಕ್ಸಾಸ್‌ನಿಂದ ರವಿ ಸಂದಿಲ್, ಅರಿಜೋನಾ ಸ್ಟೇಟ್ ಹೌಸ್‌ಗೆ ಅಮೀಶ್ ಶಾ ಅಡಿಯಿಟ್ಟಿದ್ದಾರೆ.

ಕೇಶಾ ರಾಮ್ ಅವರು ವರ್ಮಾಂಟ್ ಸ್ಟೇಟ್ ಸೆನೆಟ್‌ಗೆ ಆಯ್ಕೆಯಾದ ಶ್ವೇತವರ್ಣೀಯರಲ್ಲದ ಮೊದಲ ಮಹಿಳೆ ಎನಿಸಿದ್ದಾರೆ. ನಿಖಿಲ್‌ ಸಾವಲ್‌ ಅವರು ಪೆನ್ಸಿಲ್ವೇನಿಯಾ ಜನರಲ್ ಅಸೆಂಬ್ಲಿಗೆ ಆಯ್ಕೆಯಾಗಿದ್ದಾರೆ. ಈ ಹುದ್ದೆಗೆ ಆಯ್ಕೆಯಾದ ಮೊದಲ ಭಾರತೀಯ ಅಮೆರಿಕನ್ ಇವರು.  

ಇನ್ನುಳಿದಂತೆ ರಂಜೀವ್ ಪುರಿ (ಮಿಷಿಗನ್‌), ರೂಪಂದೆ ಮೆಹ್ತಾ (ನ್ಯೂಜೆರ್ಸಿ), ಡಾ. ಹಿರಾಲ್ ತಿಪಿರ್‌ನೇನಿ (ಅರಿಜೊನಾ) ಮುನ್ನಡೆ ಸಾಧಿಸಿದ್ದಾರೆ.

ಡೆಮಾಕ್ರಟಿಕ್ ಪಕ್ಷದ ಶ್ರೀನಿವಾಸ ರಾವ್ ಪ್ರೆಸ್ಟನ್ ಕುಲಕರ್ಣಿ ಅವರು ಟೆಕ್ಸಾಸ್‌ನಲ್ಲಿ, ವರ್ಜೀನಿಯಾದಲ್ಲಿ ಸ್ಪರ್ಧಿಸಿದ್ದ ರಿಪಬ್ಲಿಕನ್ ಪಕ್ಷದ ಮಾಂಗ ಅನಂತಾತ್ಮುಲ ಪರಾಭವಗೊಂಡಿದ್ದಾರೆ. ಕಾಂಗ್ರೆಸ್‌ಗೆ ಪ್ರವೇಶ ಪಡೆಯುವ ಕನಸು ಕಂಡಿದ್ದ ನಿಶಾ ಶರ್ಮಾ, ರಿಕ್ ಮೆಹ್ತಾ ಹಾಗೂ ಸಾರಾ ಗಿಡೋನ್ ಅವರ ಆಸೆ ಈಡೇರಿಲ್ಲ.

ಭಾರತೀಯ ಹಾಗೂ ಏಷ್ಯಾದ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವ ದಿಸೆಯಲ್ಲಿ ‘ಇಂಪ್ಯಾಕ್ಟ್’ ಸಂಸ್ಥೆಯು 1 ಕೋಟಿ ಡಾಲರ್ ನಿಧಿ ಸಂಗ್ರಹಿಸಿತ್ತು. ನಿರ್ಣಾಯಕ ಕ್ಷೇತ್ರಗಳು ಎನಿಸಿರುವ ಫ್ಲಾರಿಡಾ, ಪೆನ್ಸಿಲ್ವೇನಿಯಾ, ಮಿಷಿಗನ್‌ನಲ್ಲಿ ಸುಮಾರು 5 ಲಕ್ಷ ಭಾರತೀಯರು ಮತ ಚಲಾಯಿಸಿದ್ದಾರೆ. ಅಮೆರಿಕದಲ್ಲಿ ಭಾರತೀಯ ಮತದಾರರ ಸಂಖ್ಯೆ ಸುಮಾರು 20 ಲಕ್ಷ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು