ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಗಾವಲು ಹಡಗು ಶೀಘ್ರ ಸೇವೆಗೆ ಸಮರ್ಪಣೆ

ಕ್ಷಿಪಣಿ ಉಡಾವಣೆ, ಜಲಾಂತರ್ಗಮಿ ಚಲನವಲನ ಸೇರಿ ಪ್ರತಿಕೂಲ ಬೆಳವಣಿಗೆಗಳತ್ತ ಕಟ್ಟೆಚ್ಚರ
Last Updated 16 ಮಾರ್ಚ್ 2021, 21:42 IST
ಅಕ್ಷರ ಗಾತ್ರ

ನವದೆಹಲಿ: ಕ್ಷಿಪಣಿ ಉಡಾವಣೆ, ಜಲಾಂತರ್ಗಮಿ ಚಲನವಲನಗಳು ಸೇರಿದಂತೆ ಪ್ರತಿಕೂಲ ಬೆಳವಣಿಗೆಗಳ ಮೇಲೆ ಕಣ್ಗಾವಲು ಇಡುವ ಸಾಮರ್ಥ್ಯವುಳ್ಳ ಹಡಗು ಶೀಘ್ರದಲ್ಲಿಯೇ ಸೇವೆಗೆ ಲಭ್ಯವಾಗಲಿದ್ದು, ಈ ಮೂಲಕ ಭಾರತದ ಕಣ್ಗಾವಲು ವ್ಯವಸ್ಥೆಯ ಶಕ್ತಿ ವೃದ್ಧಿಸಲಿದೆ.

ಹಡಗು ನಿರ್ಮಾಣ ಚಟುವಟಿಕೆಗೆ ಹತ್ತಿರವಾಗಿರುವ ಮೂಲಗಳ ಪ್ರಕಾರ, ಕಣ್ಗಾವಲು ಸಾಮರ್ಥ್ಯದ ಹಡಗು ನಿರ್ಮಾಣ ಯೋಜನೆಯು ಬಹುತೇಕ ಮುಗಿದಿದೆ. ಒಮ್ಮೆ ಸೇವೆಗೆ ಲಭ್ಯವಾದರೆ, ಕ್ಷಿಪಣಿ ಉಡಾವಣೆ ಮೇಲೂ ಕಣ್ಗಾವಲು ಇಡಬಹುದಾದ ಸೌಲಭ್ಯವುಳ್ಳ ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೇರಲಿದೆ ಎಂದು ತಿಳಿಸಿವೆ.

ಪ್ರಸ್ತುತ ಅಮೆರಿಕ, ಬ್ರಿಟನ್‌, ರಷ್ಯಾ, ಚೀನಾ ಮತ್ತು ಫ್ರಾನ್ಸ್‌ ಮಾತ್ರ ಇಂಥ ಅತ್ಯಾಧುನಿಕ ಸೌಲಭ್ಯದ ಹಡಗು ಹೊಂದಿವೆ. ಕೆಲವೇ ತಿಂಗಳಲ್ಲಿ ಈ ಹಡಗನ್ನು ಸೇವೆಗೆ ಸಮರ್ಪಿಸಬಹುದು. ಕಾರ್ಯನಿರ್ವಹಣೆಗೆ ಪೂರ್ವಭಾವಿಯಾಗಿ ಬಹುತೇಕ ಎಲ್ಲ ಪರೀಕ್ಷೆಗಳು ಪೂರ್ಣಗೊಂಡಿವೆ ಎಂದು ಮೂಲಗಳು ವಿವರಿಸಿವೆ.

ಕಣ್ಗಾವಲು ಹಡಗಿನಿಂದ ಸಂಗ್ರಹಿಸಲಾದ ಅಂಕಿ ಅಂಶಗಳನ್ನು ದೇಶದ ಗುಪ್ತಚರ ವಿಭಾಗದ ಉನ್ನತ ಅಧಿಕಾರಿಗಳಿಗೆ ನೀಡಲಿದ್ದು, ಈ ಮೂಲಕ ಭಾರತದ ವಿರುದ್ಧದ ಪ್ರತಿಕೂಲ ಬೆಳವಣಿಗೆಗಳನ್ನು ಗಮನಿಸುವುದು ಸಾಧ್ಯವಾಗಲಿದೆ ಎಂದು ತಿಳಿಸಿವೆ.

ಉದ್ದೇಶಿತ ಹಡಗಿನ ನಿರ್ಮಾಣ ಚಟುವಟಿಕೆ 2014ರಲ್ಲಿ ವಿಶಾಖಪಟ್ಟಣಂನಲ್ಲಿ ಆರಂಭವಾಗಿದ್ದು, ಹಿಂದೂಸ್ತಾನ್‌ ಶಿಪ್‌ಯಾರ್ಡ್‌ ಲಿಮಿಟೆಡ್ ನಿರ್ಮಾಣ ಕಾರ್ಯ ಕೈಗೊಂಡಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಭಾರತೀಯ ನೌಕಾದಳ ಈ ಯೋಜನೆಯ ಭಾಗಿದಾರ ಸಂಸ್ಥೆಗಳಲ್ಲಿ ಸೇರಿವೆ.

ಚೀನಾದ ಅತಿಕ್ರಮಣ ಧೋರಣೆ ಹಿನ್ನೆಲೆಯಲ್ಲಿ ಭಾರತ ತನ್ನ ಸಾಗರೋತ್ತರ ಕಣ್ಗಾವಲು ವ್ಯವಸ್ಥೆಯನ್ನು ಇನ್ನಷ್ಟು ಚುರುಕುಗೊಳಿಸಿದೆ. ನೌಕಾದಳವು ಈಗಾಗಲೇ ಪಿ–81 ಕಣ್ಗಾವಲು ವಿಮಾನ ಹೊಂದಿದ್ದು, ಇದು ಭಾರತ ಗಡಿ ಸಮುದ್ರಕ್ಕೆ ಹೊಂದಿಕೊಂಡಂತೆ ಚೀನಾದ ಹಡಗು ಮತ್ತು ಸಬ್‌ಮೇರಿನ್‌ನ ಚಲನವಲನಗಳ ಮೇಲೆ ಕಣ್ಣಿರಿಸಿದೆ.

ಪಿ–81 ವಿಮಾನ ಅತ್ಯಾಧುನಿಕ ಬೋಯಿಂಗ್‌ 737 ಕಮರ್ಷಿಯಲ್ ಯುದ್ಧವಿಮಾನವಾಗಿದ್ದು, ಇದರ ಮತ್ತೊಂದು ಆವೃತ್ತಿ ಪಿ–8ಎ ಅನ್ನು ಅಮೆರಿಕ ನೌಕಾಪಡೆಯು ಬಳಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT