ಬುಧವಾರ, ನವೆಂಬರ್ 30, 2022
21 °C

ಜಮ್ಮು ಸ್ಫೋಟ: ಎನ್‌ಐಎ ತನಿಖೆ?

ಪಿಟಿಐ Updated:

ಅಕ್ಷರ ಗಾತ್ರ : | |

ಜಮ್ಮು: ಜಮ್ಮು ವಿಮಾನ ನಿಲ್ದಾಣದಲ್ಲಿರುವ ಭಾರತೀಯ ವಾಯುಪಡೆಯ ಕೇಂದ್ರ ಮೇಲೆ ಡ್ರೋನ್‌ ಬಳಸಿ ನಡೆಸಿದ ದಾಳಿಗೆ ಸಂಬಂಧಿಸಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ), ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಅಡಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣದ ಕುರಿತು ಭಾರತೀಯ ವಾಯುಸೇನೆಯ ಕಿರಿಯ ಅಧಿಕಾರಿ ನೀಡಿದ್ದ ಅರ್ಜಿಯಂತೆ ಸತ್ವಾರಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಯುಎಪಿಎ ಕಾಯ್ದೆ ಅಡಿ ನಾಲ್ಕು ಸೆಕ್ಷನ್‌ (ಕಾನೂನುಬಾಹಿರ ಚಟುವಟಿಕೆಗಳು, ಭಯೋತ್ಪಾದಕ ಕೃತ್ಯ, ಸಂಚು ಮತ್ತು ತೀವ್ರ ಸ್ವರೂಪದ ದಂಡನೆ), ಐಪಿಸಿ ಅಡಿ ಒಂದು (ಕ್ರಿಮಿನಲ್‌ ಸಂಚು) ಮತ್ತು ಸ್ಫೋಟಕ ವಸ್ತುಗಳ ಕಾಯ್ದೆ ಅಡಿ ಎರಡು (ಜೀವ ಅಥವಾ ಆಸ್ತಿಪಾಸ್ತಿಗೆ ಆಪತ್ತು ತರುವಂಥ ಸ್ಫೋಟ, ಜೀವಕ್ಕೆ ಅಥವಾ ಆಸ್ತಿಪಾಸ್ತಿಗೆ ಹಾನಿ ತರುವ ಉದ್ದೇಶದಿಂದ ನಡೆಸಿರುವ ಸ್ಫೋಟ) ಸೆಕ್ಷನ್‌ ಅಡಿ ಎಫ್‌ಐಆರ್‌ ದಾಖಲಿಸಲಾಗಿದೆ.

ಇದನ್ನೂ ಓದಿ: 

ಸ್ಫೋಟ ಸಂಭವಿಸಿದ ಕಟ್ಟಡದ ಗೇಟಿನ ಹೊರಗೆ ಸೇನಾ ಸಿಬ್ಬಂದಿ ಹೊರತುಪಡಿಸಿ ಸಾಮಾನ್ಯರ ಓಡಾಟಗಳು ಕಂಡುಬಂದಿಲ್ಲ. ವಾಯುನೆಲೆ ಬಳಿ ಕೂಲಿಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರನ್ನು ಎಂದಿನಂತೆ ಗುರುತಿನ ಚೀಟಿಗಳನ್ನು ಪರಿಶೀಲಿಸಿ ಒಳಗೆ ಬಿಡಲಾಗಿತ್ತು. ಸೇನೆಯ ತ್ವರಿತ ಪ್ರತಿಕ್ರಿಯೆ ತಂಡಗಳು ವಾಯುನೆಲೆ ಕೇಂದ್ರದ ಹೊರಗೂ ತಪಾಸಣೆ ನಡೆಸಿವೆ ಎಂದಿದ್ದಾರೆ.

ವಾಯುಸೇನೆಯ ತನಿಖಾ ತಂಡಗಳು ಮತ್ತು ವಿಶೇಷ ಪಡೆಗಳು ತನಿಖೆ ಆರಂಭಿಸಿವೆ. ಸ್ಫೋಟದ ಲಕ್ಷಣಳ ಬಗ್ಗೆ ವಿಧಿವಿಜ್ಞಾನ ಪರಿಣತರು ಪರಿಶೀಲಿಸುತ್ತಿದ್ದಾರೆ. ಅದಕ್ಕಾಗಿ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ. ಪ್ರಕರಣದ ಹಿನ್ನೆಲೆಯಲ್ಲಿ ಹೆದ್ದಾರಿಗಳೂ ಸೇರಿ ಜಮ್ಮು ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ವಾಹನಗಳ ತಪಾಸಣೆಗಾಗಿ ವಿಶೇಷ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟ ಸಂಭವಿಸಿದ ಪ್ರದೇಶದಲ್ಲಿ ಮಾಧ್ಯಮ ಪ್ರತಿನಿಧಿಗಳು ಭಾನುವಾರ ಭಾರಿ ಸಂಖ್ಯೆಯಲ್ಲಿ ಕಂಡು ಬಂದರು. ಅದನ್ನು ಬಿಟ್ಟರೆ ಬೇರೆಲ್ಲ ಚಟುವಟಿಕೆಗಳು ಸಹಜವಾಗಿಯೇ ಇದ್ದವು. 

ಆಯುಧ ಸಾಗಿಸಲು ಡ್ರೋನ್‌ ಬಳಕೆ
ಡ್ರೋನ್‌ ಮೂಲಕ ದಾಳಿ ಇದೇ ಮೊದಲ ಬಾರಿಗೆ ನಡೆದಿದೆ. ಆದರೆ, ಪಾಕಿಸ್ತಾನ ಕೇಂದ್ರಿತ ಉಗ್ರರು ಕಾಶ್ಮೀರ ಮತ್ತು ಪಂಜಾಬ್‌ನ ಗಡಿ ಭಾಗಗಳಲ್ಲಿ ಆಯುಧಗಳನ್ನು ಉದುರಿಸಿದ ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ: 

2019ರ ಆಗಸ್ಟ್‌ನಲ್ಲಿ ಅಮೃತಸರದ ಮೊಹವಾ ಗ್ರಾಮದಲ್ಲಿ ಡ್ರೋನ್‌ ಒಂದು ಪತ್ತೆಯಾಗಿತ್ತು. ಗಡಿ ಭಾಗದಲ್ಲಿ ಆಯುಧಗಳನ್ನು ತಂದು ಹಾಕಲು ಇದನ್ನು ಬಳಸಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದರು. ಆಯುಧ ಬಿಸಾಕುತ್ತಿದ್ದ ಎಂಟು ಡ್ರೋನ್‌ಗಳನ್ನು ಮುಂದಿನ ತಿಂಗಳು ಗುರುತಿಸಲಾಗಿತ್ತು. ಪಂಜಾಬ್‌ನ ತರಣ್‌ ತಾರಣ್‌ನಲ್ಲಿ ಬಂಧಿಸಲಾಗಿದ್ದ ಶಂಕಿತ ಉಗ್ರರು ಈ ಬಗ್ಗೆ ಮಾಹಿತಿ ನೀಡಿದ್ದರು. 

ಜಮ್ಮು–ಕಾಶ್ಮೀರದ ಕಠುವಾದಲ್ಲಿ ಕಳೆದ ಜೂನ್‌ನಲ್ಲಿ ಗೂಢಚರ್ಯೆಗೆ ಬಳಸಲಾಗುತ್ತಿದ್ದ ಡ್ರೋನ್‌ ಒಂದನ್ನು ಬಿಎಸ್‌ಎಫ್‌ ಯೋಧರು ಹೊಡೆದುರುಳಿಸಿದ್ದರು. ಮೂರು ತಿಂಗಳ ಬಳಿಕ, ಡ್ರೋನ್‌ ಮೂಲಕ ಶಸ್ತ್ರಾಸ್ತ್ರ ಪಡೆಯುತ್ತಿದ್ದ ಲಷ್ಕರ್‌ ಎ ತಯಬಾದ ಮೂವರು ಶಂಕಿತ ಉಗ್ರರನ್ನು ಕಾಶ್ಮೀರ ಪೊಲೀಸರು ಬಂಧಿಸಿದ್ದರು. 

ಅಖ್ನೂರ್ ವಲಯದಲ್ಲಿ ಡ್ರೋನ್‌ ಮೂಲಕ ಪೂರೈಸಲಾಗಿದ್ದ ಶಸ್ತ್ರಾಸ್ತ್ರವನ್ನು ಜಮ್ಮು–ಕಾಶ್ಮೀರ ಪೊಲೀಸರು ಕಳೆದ ಸೆಪ್ಟೆಂಬರ್‌ನಲ್ಲಿ ವಶಪಡಿಸಿಕೊಂಡಿದ್ದರು.

ರೇಡಾರ್‌ಗೆ ಸಿಗದು: ಗಡಿಯಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಅಳವಡಿಸಲಾಗಿರುವ ರೇಡಾರ್‌ ವ್ಯವಸ್ಥೆಯು ಡ್ರೋನ್‌ಗಳನ್ನು ಗುರುತಿಸುವುದಿಲ್ಲ. ಡ್ರೋನ್‌ಗಳನ್ನು ಗುರುತಿಸಲು ಸಣ್ಣ ಹಕ್ಕಿಗಳನ್ನು ಕೂಡ ಗುರುತಿಸಲು ಸಾಧ್ಯವಾಗುವ ಹೊಸ ರೇಡಾರ್‌ ವ್ಯವಸ್ಥೆ ಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಜಮ್ಮು ವಾಯುನೆಲೆ ಮೇಲೆ ಡ್ರೋನ್‌ ದಾಳಿ; 'ಉಗ್ರರ ದಾಳಿ' ಎಂದ ಡಿಜಿಪಿ

ಡ್ರೋನ್‌: ಆಂತರಿಕ ಭದ್ರತೆಗೆ ಸವಾಲು
ನವದೆಹಲಿ
: ರೇಡಾರ್‌ಗಳ ಕಣ್ತಪ್ಪಿಸಿ, ಅತ್ಯಂತ ಪ್ರಮುಖ ಪ್ರದೇಶಗಳ ಮೇಲೆ ದಾಳಿ ಮಾಡಬಲ್ಲ ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಾಣಿಕೆ ಮಾಡಬಲ್ಲ ಡ್ರೋನ್‌ಗಳ ಸಾಮರ್ಥ್ಯವು ದೇಶದ ಭದ್ರತೆ ದೃಷ್ಟಿಯಿಂದ ದೊಡ್ಡ ಚಿಂತೆಯ ವಿಷಯವಾಗಿದೆ. ಜಮ್ಮುವಿನಲ್ಲಿರುವ ಭಾರತೀಯ ವಾಯುಪಡೆಯ ನೆಲೆಯ ಮೇಲೆ ದಾಳಿ ನಡೆಸಲು ಭಾನುವಾರ ಇಂಥ ಮಾನವರಹಿತ ಯಂತ್ರ ಡ್ರೋನ್‌ಗಳನ್ನು ಬಳಸಲಾಗಿದೆ.

ಇಂಥ ಡ್ರೋನ್‌ಗಳು ದೇಶದ ಆಂತರಿಕ ಭದ್ರತೆಗೆ ತಂದೊಡ್ಡಬಹುದಾದ ಅಪಾಯಗಳ ಬಗ್ಗೆ ದೇಶದ ಆಂತರಿಕ ಭದ್ರತಾ ವ್ಯವಸ್ಥೆಯು ಕಳೆದ ಎರಡು–ಮೂರು ವರ್ಷಗಳಿಂದ ಚರ್ಚಿಸುತ್ತಲೇ ಇದೆ. ಪಾಕಿಸ್ತಾನವು ಕಳುಹಿಸಿದ ಶಸ್ತ್ರಸಹಿತವಾದ ಡ್ರೋನ್‌ಗಳನ್ನು ಗಡಿ ಭದ್ರತಾ ಪಡೆಗಳ ಯೋಧರು ಭಾರತ–ಪಾಕಿಸ್ತಾನ ಗಡಿಯಲ್ಲಿ ಹೊಡೆದುರುಳಿಸಿದ ಉದಾಹರಣೆಗಳು ಇವೆ. ಡ್ರೋನ್‌ ದಾಳಿಗಳನ್ನು ತಡೆಯಲು ತಂತ್ರಜ್ಞಾನ ರೂಪಿಸುವ ವಿಚಾರವಾಗಿ ಗೃಹ, ನಾಗರಿಕ ವಿಮಾನಯಾನ ಸಚಿವಾಲಯ, ನಾಗರಿಕ ವಿಮಾನಯಾನ ಭದ್ರತಾ ಬ್ಯೂರೊ (ಬಿಸಿಎಎಸ್‌), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಭಾರತೀಯ ವಾಯುಪಡೆ ಮುಂತಾದವು ಸತತ ಪ್ರಯತ್ನ ನಡೆಸಿವೆ. ಈ ವಿಚಾರವಾಗಿ ಅನೇಕ ವಿಚಾರಸಂಕಿರಣಗಳು ಸಹ ನಡೆದಿವೆ.

‘ಗಡಿಯುದ್ದಕ್ಕೂ ಶಸ್ತ್ರಸಹಿತವಾದ ಡ್ರೋನ್‌ಗಳನ್ನು ತಡೆಯಬಲ್ಲ, ಅತ್ಯಂತ ಪರಿಣಾಮಕಾರಿ ತಂತ್ರಜ್ಞಾನ ನಮಗೆ ಇನ್ನೂ ಲಭ್ಯವಾಗಿಲ್ಲ. ಈವರೆಗೆ ಇಂಥ ಅನೇಕ ಡ್ರೋನ್‌ಗಳನ್ನು ತಡೆಯಲಾಗಿದ್ದರೂ ಅದು ಸಶಸ್ತ್ರಪಡೆಯ ಯೋಧರ ಸನ್ನದ್ಧತೆಯಿಂದ ಸಾಧ್ಯವಾಗಿದೆ’ ಎಂದು ಗಡಿಭದ್ರತಾಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಡಿಯಲ್ಲಿ ಭಾರತದ ಯೋಧರು ಎಲ್ಲೆಲ್ಲಿ ಇದ್ದಾರೆ ಎಂದು ಕಣ್ಗಾವಲಿಡಲು ಡ್ರೋನ್‌ಗಳನ್ನು ಬಳಸಿರುವ ಉದಾಹರಣೆಗಳು ಇವೆ. ಅವು ನಮ್ಮ ಯೋಧರ ಕಣ್ಣಿಗೆ ಬಿದ್ದಿರುವುದು ತಿಳಿಯುತ್ತಿದ್ದಂತೆಯೇ ಪಾಕಿಸ್ತಾನದಿಂದ ರಿಮೋಟ್‌ ಮೂಲಕ ನಿಯಂತ್ರಿಸುತ್ತಿದ್ದವರು ಅವುಗಳನ್ನು ಮರಳಿ ಕರೆಯಿಸಿಕೊಂಡಿದ್ದಾರೆ. ಭಯೋತ್ಪಾದಕರು ಅಥವಾ ಪಾಕಿಸ್ತಾನದ ಸೇನೆ ಅವುಗಳನ್ನು ನಿಯಂತ್ರಿಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು