ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತೀಶ್ ಆಪ್ತ ಅಶೋಕ್ ಚೌಧರಿ ಜತೆ ಸಭೆ; ಜೆಡಿಯುನತ್ತ ಕನ್ಹಯ್ಯ?

ಕುತೂಹಲ ಮೂಡಿಸಿದ ನಡೆ
Last Updated 15 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಪಟ್ನಾ: ಸಿಪಿಐ ಮುಖಂಡ ಹಾಗೂ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಪ್ತ, ಸಚಿವ ಅಶೋಕ್ ಚೌಧರಿ ಅವರನ್ನು ಭೇಟಿ ಮಾಡಿದ್ದು, ಮುಂದಿನ ರಾಜಕೀಯ ನಡೆಯ ಬಗ್ಗೆ ಕುತೂಹಲ ಮೂಡಿದೆ.

ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಪಕ್ಷದ ಸಭೆಯಲ್ಲಿ, ಸಿಪಿಐನ ಪಟ್ನಾ ಕಚೇರಿಯಲ್ಲಿ ಪದಾಧಿಕಾರಿ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಕನ್ಹಯ್ಯ ಕುಮಾರ್ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸಲಾಗಿತ್ತು. ಈ ಸಭೆಯ ಬೆನ್ನಲ್ಲೇ ಕನ್ಹಯ್ಯ ಅವರು ನಿತೀಶ್ ಅಪ್ತರನ್ನು ಭೇಟಿ ಮಾಡಿದ್ದಾರೆ.

ಕನ್ಹಯ್ಯ ಹಾಗೂ ಚೌಧರಿ ಅವರ ಭೇಟಿಯನ್ನು ಔಪಚಾರಿಕ ಎಂದು ಉಭಯ ಮುಖಂಡರು ಹೇಳಿದ್ದಾರೆ. ಭೇಟಿಗೆ ಬೇರೆ ಯಾವ ಉದ್ದೇಶವೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರೂ, ಭೇಟಿಗೆ ಹಲವು ಕಾರಣಗಳಿವೆ ಎಂದು ಮೂಲಗಳು ತಿಳಿಸಿವೆ.

ಚೌಧರಿ ಅವರು ಬಿಹಾರ ಸರ್ಕಾರದಲ್ಲಿ ಕಟ್ಟಡ ನಿರ್ಮಾಣ ಸಚಿವರು. ಮೇಲಾಗಿ ಜೆಡಿಯು ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷರೂ ಆಗಿದ್ದಾರೆ. ಇತ್ತೀಚೆಗೆ ಬಿಎಸ್‌ಪಿ ಶಾಸಕ ಜಮಾ ಖಾನ್ ಅವರನ್ನು ನಿತೀಶ್ ಅವರಿಗೆ ಭೇಟಿ ಮಾಡಿಸಿ, ಪಕ್ಷಕ್ಕೆ ಸೇರುವಂತೆ ಮಾಡಿದ್ದರು. ಬಳಿಕ ಅವರು ನಿತೀಶ್ ಸರ್ಕಾರದಲ್ಲಿ ಸಚಿವರೂ ಆದರು. ಪಕ್ಷೇತರ ಶಾಸಕ ಸುಮಿತ್ ಸಿಂಗ್ ಅವರನ್ನೂ ನಿತೀಶ್‌ಗೆ ಭೇಟಿ ಮಾಡಿಸಿದ್ದರು. ಕಳೆದ ವಾರ ನಡೆದ ಸಂಪುಟ ವಿಸ್ತರಣೆಯಲ್ಲಿ ಸುಮಿತ್ ಸ್ಥಾನ ಪಡೆದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ತೃಪ್ತಿಕರ ಫಲಿತಾಂಶ ಕಾಣದ ಜೆಡಿಯು ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದೆ. ಕನ್ಹಯ್ಯ ಅವರ ಭೇಟಿಯು ಈ ಕಾರಣದಿಂದ ಮುಖ್ಯ ಎನಿಸಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಕನ್ಹಯ್ಯ ಅವರು ಬೇಗುಸರಾಯ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಬಿಜೆಪಿ ಅಭ್ಯರ್ಥಿ ಗಿರಿರಾಜ್ ಸಿಂಗ್ ವಿರುದ್ಧ ಸೋತಿದ್ದರು. ಕನ್ಹಯ್ಯ ಅವರು ಬಿಜೆಪಿಯನ್ನು ವಿರೋಧಿಸಿಕೊಂಡು ಬಂದವರು. ಹಾಗಿದ್ದರೂ ನಿತೀಶ್ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ ಎನ್ನಲಾಗಿದೆ.

ಕನ್ಹಯ್ಯ ಹಾಗು ಚೌಧರಿ ಇಬ್ಬರಿಗೂ ಜೆಎನ್‌ಯು ನಂಟು ಇದೆ. ಇಬ್ಬರೂ ಅಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿದ್ದರು. ಇದರ ಹೊರತಾಗಿ, ರಾಜಕೀಯ ವಲಯದಲ್ಲಿ ಇರುವ ಮಾತಿನ ಪ್ರಕಾರ, ನಿತೀಶ್ ಭೇಟಿ ಮಾಡಲು ಇಚ್ಛಿಸುವವರು ಮೊದಲು ಚೌಧರಿ ಅವರನ್ನು ಭೇಟಿ ಮಾಡಬೇಕಿದೆ.

ನಿತೀಶ್–ಕನ್ಹಯ್ಯ ಸಂಬಂಧ
*2019ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಕನ್ಹಯ್ಯ ಕುಮಾರ್, ನಿತೀಶ್ ಕುಮಾರ್ ವಿರುದ್ಧ ಮಾತನಾಡಿರಲಿಲ್ಲ
* 2016ರಲ್ಲಿ ಜೆಎನ್‌ಯು ವಿವಾದ ಭುಗಿಲೆದ್ದಾಗ ನಿತೀಶ್ ಕುಮಾರ್ ಅವರು ಕನ್ಹಯ್ಯ ಅವರನ್ನು ಬೆಂಬಲಿಸಿದ್ದರು. ಆಗ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಭಾಗವಾಗಿಜೆಡಿಯು ಇರಲಿಲ್ಲ
* ನಿತೀಶ್ ಕುಮಾರ್ ಅವರು 2017ರಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಮರಳಿದ ನಂತರವೂ ಇಬ್ಬರೂ ಪರಸ್ಪರ ಮೃದು ಧೋರಣೆ ಉಳಿಸಿಕೊಂಡಿದ್ದರು
* ಲೋಕಸಭಾ ಚುನಾವಣೆಯಲ್ಲಿ ಕನ್ಹಯ್ಯ ವಿರುದ್ಧ ಆರ್‌ಜೆಡಿ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಆರ್‌ಜೆಡಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದನ್ನು ತಡೆಯಲು ಸಿಪಿಐ ಯತ್ನಿಸಲಿಲ್ಲ ಎಂಬ ಅತೃಪ್ತಿಯೂ ಕನ್ಹಯ್ಯ ಅವರಿಗೆ ಇದೆ ಎನ್ನಲಾಗುತ್ತಿದೆ

***

ಕನ್ಹಯ್ಯ ಕುಮಾರ್ ಅವರು ಕಮ್ಯುನಿಸ್ಟ್ ಸಿದ್ಧಾಂತವನ್ನು ತ್ಯಜಿಸಲು ಮತ್ತು ಜೆಡಿಯುನ ಶಿಸ್ತಿನ ಸೈನಿಕನಾಗಲು ಸಿದ್ಧರಾಗಿದ್ದರೆ, ಅವರನ್ನು ಸ್ವಾಗತಿಸುತ್ತೇವೆ.
-ಅಜಯ್ ಅಲೋಕ್, ಜೆಡಿಯು ವಕ್ತಾರ

***

ಬುದ್ಧಿ ಭ್ರಮಣೆಯಾಗಿರುವ ಕನ್ಹಯ್ಯ ಕುಮಾರ್ ಜತೆ ಮೈತ್ರಿಕೂಟದ ಪಾಲುದಾರ ಪಕ್ಷದ ಹಿರಿಯ ಮುಖಂಡರು ಸಭೆ ನಡೆಸಿದ್ದು ಸರಿಯಲ್ಲ.
-ಸುಭಾಷ್ ಸಿಂಗ್, ಬಿಹಾರದ ಸಚಿವ, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT