ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ | ವಲಸಿಗರೇ ಗುರಿ; ದಿಕ್ಕೆಟ್ಟ ಕಾರ್ಮಿಕರು

ಕಾಶ್ಮೀರ: ಉಗ್ರರಿಂದ ಹತ್ಯೆ, ಹೊರಗಿನವರಿಗೆ ಭಾರಿ ಭೀತಿ
Last Updated 18 ಅಕ್ಟೋಬರ್ 2021, 20:23 IST
ಅಕ್ಷರ ಗಾತ್ರ

ಶ್ರೀನಗರ: ಪದೇ ಪದೇ ನಡೆಯುತ್ತಿರುವ ದಾಳಿಗಳಿಂದಾಗಿ ಕೇಂದ್ರಾಡಳಿತ ಪ್ರದೇಶ ಕಾಶ್ಮೀರದಲ್ಲಿರುವ ವಲಸಿಗರು ಆತಂಕಗೊಂಡಿದ್ದಾರೆ ಮತ್ತು ದ್ವಂದ್ವದಲ್ಲಿದ್ಧಾರೆ. ಮುಂದೇನು ಮಾಡಬೇಕು ಎಂಬುದು ತಿಳಿಯದೆ ದಿಕ್ಕೆಟ್ಟಿದ್ದಾರೆ.

ಕಾಶ್ಮೀರ ಕಣಿವೆಯನ್ನು ತಕ್ಷಣವೇ ಬಿಟ್ಟು ಹೊರಡಬೇಕು ಎಂದು ಕೆಲವರು ನಿರ್ಧರಿಸಿದ್ಧಾರೆ. ಈಗಾಗಲೇ ಅರ್ಧದಲ್ಲಿರುವ ಕೆಲಸ ಮುಗಿಸಿ ಲೆಕ್ಕ ಚುಕ್ತಾ ಮಾಡಿ ಹೊರಡಬೇಕು ಎಂಬುದು ಇನ್ನೂ ಕೆಲವರ ಯೋಚನೆ. ಅಕ್ಟೋಬರ್‌ನಲ್ಲಿ ಐವರು ವಲಸಿಗ ಕಾರ್ಮಿಕರನ್ನು ಉಗ್ರರು ಗುಂಡಿಟ್ಟು ಕೊಂದಿದ್ದಾರೆ. ಅವ
ರಲ್ಲಿ ನಾಲ್ವರು ಮುಸ್ಲಿಮೇತರರು ಮತ್ತು ಒಬ್ಗ ಮುಸ್ಲಿಂ. ಎಲ್ಲ ಹತ್ಯೆಗಳು ಶ್ರೀನಗರ ಮತ್ತು ದಕ್ಷಿಣ ಕಾಶ್ಮೀರದಲ್ಲಿ ನಡೆದಿವೆ.

ಕಾಶ್ಮೀರಿ ಪಂಡಿತ ಸಮುದಾಯದ ಗಣ್ಯ ಉದ್ಯಮಿ ಸೇರಿ ಹಿಂದೂ ಧರ್ಮದ ಮೂವರ ಹತ್ಯೆ ಈ ತಿಂಗಳಲ್ಲಿಯೇ ಆಗಿದೆ. ಕಾಶ್ಮೀರದ ಅಲ್ಪಸಂಖ್ಯಾತ ಸಮುದಾಯ ಮತ್ತು ವಲಸಿಗ ಕಾರ್ಮಿಕರಲ್ಲಿಯೂ ಕಳವಳ ಮನೆ ಮಾಡಿದೆ. ಕಾಶ್ಮೀರದ ಬಹುಸಂಖ್ಯಾತ ಮುಸ್ಲಿಮರಲ್ಲಿಯೂ ತಮ್ಮ ಸುರಕ್ಷೆಯ ಬಗ್ಗೆ ಆತಂಕ ಇದೆ.

‘ನಾವು ಆಘಾತಗೊಂಡಿದ್ದೇವೆ. ಇಂತಹುದೊಂದು ದುರಂತ ನಮಗೆ ಘಟಿಸಬಹುದು ಎಂದು ಕಲ್ಪನೆಯನ್ನೇ ಮಾಡಿರಲಿಲ್ಲ’ ಎಂದು ವಲಸಿಗರ ಗುಂಪೊಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದೆ. ಇವರೆಲ್ಲರೂ ಶ್ರೀನಗರದ ಬಿಹಾರಿ ಚೌಕ್‌ನ ಹವಾಲ್‌ ಎಂಬಲ್ಲಿ ನೆಲೆಸಿದ್ದರು.

ಕಾಶ್ಮೀರದಲ್ಲಿ ನಡೆಯುತ್ತಿರುವ ವಲಸೆ ಕಾರ್ಮಿಕರ ಹತ್ಯೆಗಳ ಬಗ್ಗೆ ವಲಸೆ ಕಾರ್ಮಿಕರು ಗುಂಪು ಗುಂಪುಗಳಾಗಿ ಚರ್ಚಿಸುತ್ತಿದ್ಧಾರೆ. ‘ನಮಗೆ ಇನ್ನೂ ದ್ವಂದ್ವ ಇದೆ. ತಕ್ಷಣವೇ ಕಣಿವೆ ಬಿಟ್ಟು ಹೊರಡಬೇಕೇ ಅಥವಾ ಇರಬೇಕೇ ತಿಳಿಯುತ್ತಿಲ್ಲ. ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ನಾವು ವಾಪಸ್ ಹೋದರೆ ದೊಡ್ಡ ನಷ್ಟ ಎದುರಿಸಬೇಕಾಗುತ್ತದೆ. ಇಲ್ಲಿಯೇ ಉಳಿದರೆ, ನಾವು ಮುಂದಿನ ಗುರಿಯಾಗಿ ಯಾವಾಗ ಬಲಿಯಾಗುತ್ತೇವೆ ಎಂದು ಹೇಳಲಾಗದು’ ಎಂಬುದು ವಲಸೆ ಕಾರ್ಮಿಕರ ಅಳಲಾಗಿದೆ.

ವಲಸಿಗ ಕಾರ್ಮಿಕರಲ್ಲಿ ಇಂತಹ ಭೀತಿಯನ್ನು ಎಂದೂ ನೋಡಿಲ್ಲ ಎಂದು ಇಲ್ಲಿ 15 ವರ್ಷಗಳಿಂದ ಪಾನಿಪುರಿ ಮಾರುವ ಬಿಹಾರದ ರಾಜೇಶ್‌ ಕುಮಾರ್‌ ಹೇಳುತ್ತಾರೆ. ‘2009, 2010, 2016ರ ಸಂಘರ್ಷಮಯ ಸ್ಥಿತಿ, 2019ರ ಆಗಸ್ಟ್‌ನಲ್ಲಿ ವಿಶೇಷ ಸ್ಥಾನಮಾನ ರದ್ದತಿಯ ಸಂದರ್ಭಗಳಲ್ಲಿಯೂ ಯಾವುದೇ ಸಮಸ್ಯೆ ಇಲ್ಲದೆ ಶ್ರೀನಗರದಲ್ಲಿ ಉಳಿದಿದ್ದೆ. ಆದರೆ, ಕಳೆದ 10 ದಿನಗಳಲ್ಲಿ ಪ್ರತಿ ಕ್ಷಣದಲ್ಲಿಯೂ ಸಾವು ನನ್ನನ್ನು ಅಟ್ಟಿಸಿಕೊಂಡು ಬರುವಂತೆ ಕಾಣಿಸುತ್ತಿದೆ’ ಎಂದಿದ್ದಾರೆ. ಭಯವು ಅವರ ಧ್ವನಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ತವರು ರಾಜ್ಯಗಳಲ್ಲಿ ಇರುವ ಇರುವ ವಲಸಿಗರ ಕುಟುಂಬಗಳಲ್ಲಿ ಆತಂಕ ಹೆಚ್ಚಿದೆ. ವಾಪಸ್‌ ಬರುವಂತೆ ಅವರು ಒತ್ತಡ ಹೇರುತ್ತಿದ್ಧಾರೆ. ‘ನಾವು ನೂರಾರು ಕಿಲೋಮೀಟರ್‌ ಸಂಚರಿಸಿ ಇಲ್ಲಿಗೆ ಬರುವುದು ಜೀವನೋಪಾಯಕ್ಕಾಗಿ. ನಾವು ಇಲ್ಲಿ ದುಡಿದರೆ ಊರಲ್ಲಿ ನಮ್ಮ ಕುಟುಂಬಗಳ ಹೊಟ್ಟೆ ತುಂಬುತ್ತದೆ. ಮಕ್ಕಳಿಗೆ ಶಿಕ್ಷಣ ಕೊಡಲು ಸಾಧ್ಯವಾಗುತ್ತದೆ. ಆದರೆ, ಅದಕ್ಕಾಗಿ ನಮ್ಮ ಜೀವವನ್ನೇ ಬಲಿ ಕೊಡಲು ಸಾಧ್ಯವೇ’ ಎಂದು ಉತ್ತರ ಪ್ರದೇಶದ ಗಾರೆ ಕೆಲಸಗಾರ ಜಮೀಲ್‌ ಪ್ರಶ್ನಿಸುತ್ತಾರೆ.

ವಲಸಿಗ ಕಾರ್ಮಿಕರು ಭಾರಿ ಸಂಖ್ಯೆಯಲ್ಲಿ ಜಮ್ಮುವಿನತ್ತ ಸಾಗುತ್ತಿದ್ದಾರೆ ಎಂದು ಶ್ರೀನಗರ ಟ್ಯಾಕ್ಸಿ ನಿಲ್ದಾಣ ಸಂಘದ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ತಿಂಗಳಿಗೆ 10–12 ಟ್ಯಾಕ್ಸಿಗಳು ಜಮ್ಮುವಿಗೆ ಹೋದರೆ ಹೆಚ್ಚು ಎಂಬಂತಿತ್ತು. ಈಗ, ಎಲ್ಲ ಟ್ಯಾಕ್ಸಿಗಳೂ ಜಮ್ಮುವಿನತ್ತ ಹೋಗುತ್ತಿವೆ ಮತ್ತು ಬೇಡಿಕೆ ಇನ್ನೂ ಹೆಚ್ಚೇ ಇದೆ’ ಎಂದು ಅವರು ವಿವರಿಸುತ್ತಾರೆ.

ಸುರಕ್ಷಿತ ಸ್ಥಳಕ್ಕೆ ವಲಸಿಗರು?:

ಸಾವಿರಾರು ವಲಸೆ ಕಾರ್ಮಿಕರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ ಎಂದು ರಾಯಿಟರ್ಸ್‌ ಸುದ್ದಿ ಸಂಸ್ಥೆಯು ವರದಿ ಮಾಡಿದೆ.

‘ಸುರಕ್ಷಿತ ಸ್ಥಳ ತಲುಪಿರುವ ಸಾವಿರಾರು ಜನರನ್ನು ಅವರವರ ಊರುಗಳಿಗೆ ಕಳುಹಿಸಲು ಏರ್ಪಾಡು ಮಾಡಲಾಗುತ್ತಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಸರ್ಕಾರದ ವಕ್ತಾರರು ಇದನ್ನು ದೃಢಪಡಿಸಿಲ್ಲ.

‘ಇದಕ್ಕಿಂತ ಕೆಟ್ಟ ಸಮಯವನ್ನು ನಾವು ಕಂಡಿದ್ಧೇವೆ. ಆದರೆ, ಈ ಬಾರಿ ನಮಗೆ ಭಯವಾಗುತ್ತಿದೆ’ ಎಂದು ಬಿಹಾರದ ಕಾರ್ಮಿಕ ಮೊಹಮ್ಮದ್‌ ಸಲಾಂ ಹೇಳಿದ್ದಾರೆ. ಆರು ವರ್ಷಗಳಿಂದ ಅವರು ಕಾಶ್ಮೀರದಲ್ಲಿ ಇದ್ದಾರೆ. ಪೊಲೀಸರು ತಮ್ಮನ್ನು ಬಾಡಿಗೆ ಕೊಠಡಿಗಳಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ಧಾರೆ ಎಂದು ಅವರು ಮಾಹಿತಿ ನೀಡಿದ್ಧಾರೆ.

ಉಗ್ರರ ಚಟುವಟಿಕೆಯನ್ನು ತಗ್ಗಿಸುವುದಕ್ಕಾಗಿ ಕಣಿವೆಯಲ್ಲಿ ಭದ್ರತಾ ಪಡೆಗಳ ಗಸ್ತು ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT