ಅಧಿವೇಶನದ ಮೊದಲ ದಿನ ರಾಜ್ಯಪಾಲರ ಭಾಷಣ:ತೆಲಂಗಾಣ ಸರ್ಕಾರ ಸಮ್ಮತಿ

ಹೈದರಾಬಾದ್: ರಾಜ್ಯಪಾಲರ ವಿಷಯದಲ್ಲಿ ತಳೆದಿದ್ದ ಬಿಗಿ ನಿಲುವನ್ನು ಕೆ.ಸಿ.ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ಸರ್ಕಾರ ಸಡಿಲಗೊಳಿಸಿದೆ. ಬಜೆಟ್ ಅಧಿವೇಶದನ ಮೊದಲ ದಿನ ರಾಜ್ಯಪಾಲರ ಭಾಷಣಕ್ಕೆ ಅನುವು ಮಾಡಿಕೊಡಲಿದೆ.
ಈ ನಿಲುವಿನೊಂದಿಗೆ ವಾರ್ಷಿಕ ಬಜೆಟ್ ಮಂಡನೆ ಕುರಿತಂತೆ ಅನಿಶ್ಚಿತತೆ ಬಗೆಹರಿದಿದೆ. ಕಳೆದ ವರ್ಷ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಅವರ ಭಾಷಣವಿಲ್ಲದೇ ಬಜೆಟ್ ಅಧಿವೇಶನ ನಡೆದಿತ್ತು.
ಈ ವರ್ಷವು ವಿಧಾನಮಂಡಲದ ಹಿಂದಿನ ಅಧಿವೇಶನವನ್ನು ಅಧಿಕೃತವಾಗಿ ಮುಂದೂಡಲಾಗಿಲ್ಲ. ಹೀಗಾಗಿ, ತಾಂತ್ರಿಕವಾಗಿ ಅಧಿವೇಶನದ ಮೊದಲ ದಿನ ರಾಜ್ಯಪಾಲರ ಭಾಷಣ ಅಗತ್ಯವಿಲ್ಲ ಎಂದು ಸರ್ಕಾರ ಪ್ರತಿಪಾದಿಸಿತ್ತು. ರಾಜಭವನ ಮತ್ತು ಸರ್ಕಾರದ ನಡುವಿನ ತಿಕ್ಕಾಟದ ಹಿನ್ನೆಲೆಯಲ್ಲಿ ಈ ವರ್ಷವು ರಾಜ್ಯಪಾಲರ ಭಾಷಣವಿಲ್ಲದೇ ಅಧಿವೇಶನವನ್ನು ನಡೆಸಲು ಸರ್ಕಾರ ಸಿದ್ಧತೆ ನಡೆಸಿತ್ತು.
ಆದರೆ, 2023–24ನೇ ಸಾಲಿನ ಬಜೆಟ್ ಮಂಡನೆಗೆ ಪೂರ್ವಾನುಮತಿ ನೀಡುವುದನ್ನು ರಾಜ್ಯಪಾಲರು ಮುಂದೂಡಿದ್ದರು. ಸರ್ಕಾರ ಜನವರಿ 21ರಂದೇ ಕರಡು ಪ್ರತಿಯನ್ನು ರಾಜಭವನಕ್ಕೆ ಕಳುಹಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯಪಾಲರು, ‘ಅಧಿವೇಶನದ ಮೊದಲ ದಿನದ ಕಾರ್ಯಸೂಚಿಯಲ್ಲಿ ನಮ್ಮ ಭಾಷಣವು ಸೇರಿದೆಯೇ’ ಎಂದು ಪ್ರಶ್ನಿಸಿದ್ದರು. ಆದರೆ, ಇದಕ್ಕೆ ಸರ್ಕಾರ ಪ್ರತಿಕ್ರಿಯೆ ನೀಡಿರಲಿಲ್ಲ.
ಬಜೆಟ್ ಕರಡು ಪ್ರತಿಗೆ ಅನುಮೋದನೆ ನೀಡದ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಇದಕ್ಕೂ ಮೊದಲು ತೆಲಂಗಾಣ ಸರ್ಕಾರವು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆ, ಬಳಿಕರಾಜ್ಯಪಾಲರ ಭಾಷಣಕ್ಕೆ ಅನುವು ಮಾಡಿಕೊಡುವ ತೀರ್ಮಾನದ ನಂತರ ಅರ್ಜಿಯನ್ನು ಹಿಂಪಡೆಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.