ದೇಶದ ಒಟ್ಟು ಕೋವಿಡ್ ಪ್ರಕರಣಗಳ ಪೈಕಿ ಕೇರಳದ ಪಾಲು ಶೇ 67.79: ಆರೋಗ್ಯ ಸಚಿವಾಲಯ

ನವದೆಹಲಿ: ದೇಶದಾದ್ಯಂತ ದಾಖಲಾಗುತ್ತಿರುವ ಒಟ್ಟು ಕೋವಿಡ್–19 ದೃಢ ಪ್ರಕರಣಗಳ ಪೈಕಿ ಸುಮಾರು ಶೇ 68ರಷ್ಟು ಪ್ರಕರಣಗಳು ಕೇರಳದಿಂದಲೇ ವರದಿಯಾಗುತ್ತಿವೆ. ಕೇರಳದಲ್ಲಿ ಮಾತ್ರವೇ ಒಂದು ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
ಕಳೆದ ವಾರ ಭಾರತದಲ್ಲಿ ದಾಖಲಾಗಿರುವ ಒಟ್ಟು ಕೋವಿಡ್–19 ಪ್ರಕರಣಗಳ ಪೈಕಿ ಶೇ 67.79 ಪ್ರಕರಣಗಳು ಕೇರಳದಲ್ಲಿ ವರದಿಯಾಗಿವೆ. ಕೇರಳದಲ್ಲಿ ಪ್ರಸ್ತುತ 1.99 ಲಕ್ಷ ಪ್ರಕರಣಗಳು ಸಕ್ರಿಯವಾಗಿರುವುದಾಗಿ ಕೇಂದ್ರದ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾಹಿತಿ ನೀಡಿದರು.
ಉಳಿದಂತೆ ಮಿಜೊರಾಂ, ಆಂಧ್ರ ಪ್ರದೇಶ, ಕರ್ನಾಟಕ, ತಮಿಳು ನಾಡು, ಮಹಾರಾಷ್ಟ್ರದಲ್ಲಿ 10,000ಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ. ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಆಮ್ಲಜನಕ ಪೂರೈಕೆಗಾಗಿ 1,595 ಘಟಕಗಳ ಮೂಲಕ 2,088 ಮೆಟ್ರಿಕ್ ಟನ್ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ ಎಂದರು.
ದೇಶದಾದ್ಯಂತ ಕಳೆದ 11 ವಾರಗಳಲ್ಲಿ ಕೋವಿಡ್ ದೃಢ ಪ್ರಮಾಣವು ಶೇ 3ಕ್ಕಿಂತ ಕಡಿಮೆ ಇದೆ. 64 ಜಿಲ್ಲೆಗಳಲ್ಲಿ ಈಗಲೂ ಶೇ 5ಕ್ಕಿಂತಲೂ ಅಧಿಕ ಪ್ರಕರಣಗಳು ದೃಢಪಡುತ್ತಿವೆ. ಆ ಜಿಲ್ಲೆಗಳಲ್ಲಿ ಕೋವಿಡ್ ಮಾರ್ಗಸೂಚಿಯ ಅಳವಡಿಕೆ, ಲಸಿಕೆ ಹಾಕುವುದು ಹಾಗೂ ನಿಗಾವಹಿಸುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ರಾಜೇಶ್ ಭೂಷಣ್ ಹೇಳಿದರು.
India snapshot - State-wise Active cases
More than 1 lakh active cases - 1 state
50,000 to 1 lakh active cases - 1 state
10,000 tu o 50,000 active cases - 4 states
Less than 10,000 active cases - 30 states: @MoHFW_INDIA#Unite2FightCorona #StaySafe pic.twitter.com/72hZKiBMpe
— #IndiaFightsCorona (@COVIDNewsByMIB) September 16, 2021
'ಕೇರಳದಲ್ಲಿ ಕೊರೊನಾ ವೈರಸ್ ಸೋಂಕು ಪ್ರಮಾಣ ಅಲ್ಪ ಇಳಿಕೆ ಕಂಡಿದೆ. ಸೋಂಕು ನಿಯಂತ್ರಣಕ್ಕೆ ಇತರೆ ರಾಜ್ಯಗಳು ಸಹ ಸೂಕ್ತ ಕ್ರಮಗಳನ್ನು ಕೈಗೊಂಡಿವೆ. ಆದರೆ, ಹಬ್ಬಗಳು ಸಮೀಪಿಸುತ್ತಿವೆ ಹಾಗೂ ಜನಸಂಖ್ಯೆ ದಟ್ಟಣೆಯಲ್ಲಿ ದಿಢೀರ್ ಹೆಚ್ಚಳವಾಗುವುದು ವೈರಸ್ ಸಾಂಕ್ರಾಮಿಕವಾಗಲು ಪೂರಕ ವಾತಾವರಣ ಸೃಷ್ಟಿಸುತ್ತದೆ' ಎಂದು ಐಸಿಎಂಆರ್‌ನ ಪ್ರಧಾನ ನಿರ್ದೇಶಕ ಡಾ.ಬಲರಾಮ್ ಭಾರ್ಗವ ಹೇಳಿದರು.
ದೇಶದಾದ್ಯಂತ 24 ಗಂಟೆ ಅವಧಿಯಲ್ಲಿ 30,570 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ. ಇದೇ ಅವಧಿಯಲ್ಲಿ ಕೇರಳದಲ್ಲಿ 17,681 ಸೋಂಕು ಪ್ರಕರಣಗಳು ದಾಖಲಾಗಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.